ತಮಿಳುನಾಡಿನ ವಿದ್ಯುತ್ ಮತ್ತು ಅಬಕಾರಿ ಇಲಾಖೆ ಸಚಿವ, ಡಿಎಂಕೆ ಪಕ್ಷದ ಹಿರಿಯ ನಾಯಕ ವಿ.ಸೆಂಥಿಲ್ ಬಾಲಾಜಿ (Excise Minister V Senthil Balaji) ಅವರನ್ನು ಇಂದು ಮುಂಜಾನೆ ಜಾರಿ ನಿರ್ದೇಶನಾಲಯರ (ಇಡಿ) ಬಂಧಿಸಿದೆ (Excise Minister V Senthil Balaji Arrested). ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸೆಂಥಿಲ್ ವಿರುದ್ಧ ಕೇಸ್ ದಾಖಲಿಸಿಕೊಂಡು, ಅವರಿಗೆ ಸಂಬಂಧಪಟ್ಟ ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ರೇಡ್ ಮಾಡಿದ್ದರು. ಅದಾದ ಮೇಲೆ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಸುದೀರ್ಘ ವಿಚಾರಣೆ ನಡೆಸಿದ್ದರು. ಬಳಿಕ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA)ಯಡಿ ಬಂಧಿಸಿದ್ದಾರೆ. ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಸದ್ಯ ಆಸ್ಪತ್ರೆಯಲ್ಲಿ ಇದ್ದಾರೆ.
ಇಂದು ಮುಂಜಾನೆ ವಿ.ಸೆಂಥಿಲ್ ಬಂಧನದ ವೇಳೆ ಹೈಡ್ರಾಮಾವೇ ನಡೆದುಹೋಗಿದೆ. ಅಕ್ರಮ ಹಣವರ್ಗಾವಣೆ ಕೇಸ್ನಡಿ ವಿಚಾರಣೆ ನಡೆಸಿದ ಇಡಿ ಅವರನ್ನು ಮುಂಜಾನೆ ಬಂಧಿಸುತ್ತಿದ್ದಂತೆ ಸೆಂಥಿಲ್ ಅವರಿಗೆ ಸಣ್ಣದಾಗಿ ಎದೆನೋವು ಕಾಣಿಸಿಕೊಂಡಿದೆ. ಹೀಗಾಗಿ ಇ.ಡಿ. ಅಧಿಕಾರಿಗಳು ಅವರನ್ನು ಓಮಂದೂರಾರ್ ಸರ್ಕಾರಿ ಆಸ್ಪತ್ರೆಗೆ ತಪಾಸಣೆಗೆ ಕರೆದೊಯ್ದರು. ಈ ವೇಳೆ ವಾಹನದಲ್ಲಿ ಮಲಗಿದ್ದ ಸಚಿವ ಸೆಂಥಿಲ್ ಜೋರಾಗಿ ಅಳಲು ಪ್ರಾರಂಭಿಸಿದ್ದಾರೆ. ನೋವು ತಡೆಯಲಾಗುತ್ತಿಲ್ಲ ಎಂದು ಕಣ್ಣುಮುಚ್ಚಿಕೊಂಡು, ಚಿಕ್ಕಮಕ್ಕಳಂತೆ ಅತ್ತಿದ್ದಾರೆ. ಅದೇ ವೇಳೆ ಆಸ್ಪತ್ರೆ ಬಳಿ ಜಮಾಯಿಸಿದ್ದ ಸೆಂಥಿಲ್ ಬೆಂಬಲಿಗರು ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಆಸ್ಪತ್ರೆ ಬಳಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಸದ್ಯ ಸೆಂಥಿಲ್ ಬಾಲಾಜಿ ಅವರು ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
#WATCH | Tamil Nadu Electricity Minister V Senthil Balaji breaks down as ED officials took him into custody in connection with a money laundering case and brought him to Omandurar Government in Chennai for medical examination pic.twitter.com/aATSM9DQpu
— ANI (@ANI) June 13, 2023
ಇದನ್ನೂ ಓದಿ: ಗರ್ಭಿಣಿಯರು ಸುಂದರಕಾಂಡ ಓದಬೇಕು; ’ಗರ್ಭ ಸಂಸ್ಕಾರ’ ನೀಡಿದ ತೆಲಂಗಾಣ ರಾಜ್ಯಪಾಲೆ ತಮಿಳಿಸಾಯಿ ಸೌಂದರರಾಜನ್
ಏನಿದು ಕೇಸ್?
ಸೆಂಥಿಲ್ ಬಾಲಾಜಿಯವರು ಈ ಮೊದಲು ಎಐಎಡಿಎಂಕೆ ಪಕ್ಷದಲ್ಲಿ ಇದ್ದರು. ಈ ಪಕ್ಷ ಆಡಳಿತದಲ್ಲಿ ಇದ್ದ ಅವಧಿಯಾದ (ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ) 2011-2015ರವರೆಗೆ ಸೆಂಥಿಲ್ ಬಾಲಾಜಿ ಸಾರಿಗೆ ಸಚಿವರಾಗಿದ್ದರು. ಹೀಗೆ ಅವರು ಸಾರಿಗೆ ಸಚಿವರಾಗಿದ್ದ ಸಂದರ್ಭದಲ್ಲಿ ಉದ್ಯೋಗಕ್ಕಾಗಿ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಕಳೆದ ತಿಂಗಳು ಪೊಲೀಸರು ಮತ್ತು ಇಡಿಗೆ ಅನುಮತಿ ಕೊಟ್ಟಿತ್ತು. ಅದರ ಬೆನ್ನಲ್ಲೇ ಇಡಿ ತನಿಖೆ ಶುರು ಮಾಡಿದೆ. ಇನ್ನು ಇಂದು ಸೆಂಥಿಲ್ ಬಾಲಾಜಿ ಬಂಧನವಾಗುತ್ತಿದ್ದಂತೆ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ತುರ್ತು ಸಭೆ ಕರೆದಿದ್ದಾರೆ.