ನವದೆಹಲಿ: ತಮಗೆ ಅಗತ್ಯವಿಲ್ಲದಿದ್ದರೂ ದಿಲ್ಲಿಯ ಅಪೋಲೋ ಆಸ್ಪತ್ರೆ (Apollo Hospital)ಯು ಸೊಂಟ ಶಸ್ತ್ರ ಚಿಕಿತ್ಸೆ ಮಾಡಿದೆ ಎಂದು ಲೇಖಕಿ ತಸ್ಲೀಮಾ ನಸ್ರೀನ್ (Taslima Nasreen) ಅವರು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಆಸ್ಪತ್ರೆಯು ನಿರಾಕರಿಸಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿ ನಸ್ರೀನ್ ಆಸ್ಪತ್ರೆ ವಿರುದ್ಧ ಆರೋಪ ಮಾಡಿದ್ದಾರೆ. ಜನವರಿ 31ರಂದು ಮೊಣಕಾಲು ನೋವಿನಿಂದಾಗಿ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿ, ಸಂಪೂರ್ಣ ಹಿಪ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆಗೆ ಒತ್ತಾಯಿಸಿದರು. ಅಪೋಲೋ ಆಸ್ಪತ್ರೆಯ ವೈದ್ಯರು ನನಗೆ ಎಕ್ಸ್ ರೇ ಮತ್ತು ಸಿಟಿ ಸ್ಕ್ಯಾನ್ ಕುರಿತಾದ ಸುಳ್ಳು ಮಾಹಿತಿ ನೀಡಿದರು ಎಂದು ಅವರು ತಿಳಿಸಿದ್ದಾರೆ.
ಸಂಪೂರ್ಣ ಸೊಂಟ ಬದಲಿ ಸರ್ಜರಿ ತೊಡಕುಗಳಿಂದ ನಾನು ಸತ್ತರೆ, ವೈದ್ಯರನ್ನು ಹೊರತುಪಡಿಸಿ ಯಾರೂ ಜವಾಬ್ದಾರರಾಗಿರುವುದಿಲ್ಲ. ಮೊಣಕಾಲು ನೋವಿನಿಂದ ಅಪೋಲೋ ಆಸ್ಪತ್ರೆಗೆ ಹೋದೆ. ಅವರು ಕೆಲವೇ ಗಂಟೆಗಳಲ್ಲಿ ಟಿಎಚ್ಆರ್(Total hip replacement) ಮಾಡಿದರು. ನಾನು ಅಪೋಲೋಗೆ ಹೋಗಿದ್ದಕ್ಕೆ ಪಶ್ಚಾತ್ತಾಪಪಡುತ್ತಿದ್ದೇನೆ. ಏಮ್ಸ್‌ಗೆ ಹೋಗಬೇಕಿತ್ತು ಎಂದು ತಸ್ಲೀಮಾ ನಸ್ರೀನ್ ಹೇಳಿಕೊಂಡಿದ್ದಾರೆ.
ಆರೋಪ ನಿರಾಕರಿಸಿದ ಅಪೋಲೋ ಆಸ್ಪತ್ರೆ
ರೋಗಿಯು ಕೆಳಗೆ ಬಿದ್ದಿದ್ದ ಇತಿಹಾಸದೊಂದಿಗೆ ಆಸ್ಪತ್ರೆಗೆ ಬಂದಿದ್ದರು. ಇದರಿಂದಾಗಿ ಅವರು ನಿಶ್ಚಲಗೊಂಡಿದ್ದರು. ಚಿಕಿತ್ಸಕ ಸಲಹೆಗಾರರು, ಕ್ಷೇತ್ರದಲ್ಲಿ ಮೂರು ದಶಕಗಳ ಅನುಭವ ಹೊಂದಿರುವ ಸಮರ್ಥ ಮತ್ತು ಅನುಭವಿ ಶಸ್ತ್ರಚಿಕಿತ್ಸಕರು, ನಿಗದಿತ ರೋಗನಿರ್ಣಯ ಮತ್ತು ಕೆಲಸದ ಸಾಧನಗಳನ್ನು ಬಳಸಿಕೊಂಡು ಅವರಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಾಗಿದೆ ಎಂದು ನಿರ್ಧರಿಸಲಾಗಿತ್ತು. ಅವರ ವೈದ್ಯಕೀಯ ಸ್ಥಿತಿ ಮತ್ತು ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಹಿಪ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡಲಾಗಿದೆ ಎಂದು ಅಪೊಲೊ ಆಸ್ಪತ್ರೆ ತಿಳಿಸಿದೆ.
ಇದನ್ನೂ ಓದಿ: ಭಾರತದಲ್ಲಿ ಹಿಂದೂಗಳು ಅಸುರಕ್ಷಿತ: ಕಳವಳ ವ್ಯಕ್ತಪಡಿಸಿದ ತಸ್ಲೀಮಾ ನಸ್ರೀನ್
ರೋಗಿ(ನಸ್ರೀನ್) ಒಪ್ಪಿಗೆಯೊಂದಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಟೋಟಲ್ ಹಿಪ್ ರಿಪ್ಲೇಶ್‌ಮೆಂಟ್ ಸರ್ಜಸಿ ಯಶಸ್ವಿಯಾಗಿದೆ ಮತ್ತು ನಿಯಮಗಳ ಅನುಸಾರವೇ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಆಸ್ಪತ್ರೆಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.