ದಿಬ್ರುಗಢ(ಅಸ್ಸಾಮ್): ಶಾಲೆಯಲ್ಲಿ ಸರಿಯಾಗಿ ಓದುತ್ತಿಲ್ಲ ಎಂದು ಪೋಷಕರಿಗೆ ತಿಳಿಸಿದ್ದಕ್ಕೆ ಕೋಪಗೊಂಡ ವಿದ್ಯಾರ್ಥಿಯೊಬ್ಬ ತನ್ನ ಸಹ ವಿದ್ಯಾರ್ಥಿಗಳೊಂದಿಗೆ, ಜವಾಹರ ನವೋದಯ ಶಾಲೆಯ ಐದು ತಿಂಗಳು ಗರ್ಭಿಣಿ ಶಿಕ್ಷಕಿಯನ್ನು ಹಿಡಿದು ಜಗ್ಗಾಡಿದ (Teacher Assaulted) ಘಟನೆ ಅಸ್ಸಾಮ್‌ನ ದಿಬ್ರುಗಢ ಜಿಲ್ಲೆಯಲ್ಲಿ ನಡೆದಿದೆ. ಜತೆಗೇ, ಹಂಗಾಮಿ ಪ್ರಿನ್ಸಿಪಾಲ್ ಆಗಿರುವ ರತೀಶ್ ಕುಮಾರ್ ಅವರನ್ನೂ ವಿದ್ಯಾರ್ಥಿಗಳು ತಳ್ಳಾಡಿದ್ದಾರೆ.
ಭಾನುವಾರ ಪೋಷಕರು-ಶಿಕ್ಷಕರ ಸಭೆ(ಪಿಟಿಸಿ) ಇತ್ತು. ಈ ವೇಳೆ, ಶಿಕ್ಷಕಿಯು ಆರೋಪಿ ವಿದ್ಯಾರ್ಥಿಯ ಶೈಕ್ಷಣಿಕ ಪ್ರದರ್ಶನ ಚೆನ್ನಾಗಿಲ್ಲ ಎಂದು ಆತನ ಪೋಷಕರಿಗೆ ತಿಳಿಸಿದ್ದಾರೆ. ಸಭೆ ಮುಗಿದ ಬಳಿಕ ಆರೋಪಿ ವಿದ್ಯಾರ್ಥಿ ತನ್ನ ಸಹ ವಿದ್ಯಾರ್ಥಿಗಳ ಗುಂಪು ಕಟ್ಟಿಕೊಂಡು ಗರ್ಭಿಣಿ ಶಿಕ್ಷಕಿ ಮತ್ತು ವೈಸ್ ಪ್ರಿನ್ಸಿಪಾಲ್ ಅವರನ್ನು ಸುತ್ತುವರಿದು ತಳ್ಳಾಡಿದ್ದಾರೆ.
ಪಿಟಿಸಿ ನಂತರ, ಕೆಲವು ವಿದ್ಯಾರ್ಥಿಗಳು ಗುಂಪು ರಚಿಸಿಕೊಂಡು ಶಾಲೆಯ ಮೇನ್ ಅಕಾಡೆಮಿಕ್ ಬ್ಲಾಕ್‌ನ ಮುಂದೆ ಶಿಕ್ಷಕಿಗೆ ಕಿರುಕುಳ ನೀಡಲು ಪ್ರಾರಂಭಿಸಿದರು. ಅವರಲ್ಲಿ ಕೆಲವರು ಗರ್ಭಿಣಿ ಶಿಕ್ಷಕಿಯನ್ನು ತಳ್ಳಿದರು. ಮತ್ತೊಬ್ಬ ವಿದ್ಯಾರ್ಥಿ ಅವರ ಕೂದಲನ್ನು ಎಳೆಯಲು ಪ್ರಯತ್ನಿಸಿದ ಎಂದು ರತೀಶ್ ಕುಮಾರ್ ಅವರು ತಿಳಿಸಿದ್ದಾರೆ. ಬಳಿಕ, ಸಹ ಶಿಕ್ಷಕರು, ಶಾಲಾ ಸಿಬ್ಬಂದಿ ಮತ್ತು ಕೆಲವು ವಿದ್ಯಾರ್ಥಿನಿಯರು ಹುಡುಗರಿಂದ ಶಿಕ್ಷಕಿಯನ್ನು ರಕ್ಷಣೆ ಮಾಡಿದರು ಎಂದು ಅವರು ಹೇಳಿದ್ದಾರೆ.
ಈ ಘಟನೆಯಲ್ಲಿ 10 ಮತ್ತು 11ನೇ ತರಗತಿಯ 22 ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳ ಪೋಷಕರನ್ನು ಕರೆದು ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಪೋಷಕರಿಗೆ ದೂರು ನೀಡಿದ್ದಕ್ಕೆ ವಿದ್ಯಾರ್ಥಿಗಳು ಫೋನ್ ಮಾಡಿ, ಅವಾಚ್ಯವಾಗಿ ನಿಂದಿಸಿದ್ದಾರೆಂದು ಅವರು ತಿಳಿಸಿದರು. ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಆದರೆ, ಎಫ್ಐಆರ್ ದಾಖಲಿಸಿಲ್ಲ. ಬದಲಾಗಿ ಸಾಮಾನ್ಯ ದೂರು ಸ್ವೀಕರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ | ಮೆಡಿಕಲ್ ಕಾಲೇಜಿನಲ್ಲಿ ಸ್ಟೀಲ್ ರಾಡ್‌ನಿಂದ ವಿದ್ಯಾರ್ಥಿ ಹಲ್ಲೆ, ಇಬ್ಬರಿಗೆ ಗಾಯ