Site icon Vistara News

ಶಾಲೆಯಲ್ಲಿ 30ಕ್ಕೂ ಹೆಚ್ಚು ಮಕ್ಕಳ ಕೂದಲು ಕತ್ತರಿಸಿದ ಶಿಕ್ಷಕ; ಪೊಲೀಸ್​ ಠಾಣೆ ಮೆಟ್ಟಿಲೇರಿದ ಪ್ರಕರಣ

teacher chops hair in Assam

#image_title

ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ವಿದ್ಯಾಭ್ಯಾಸದ ಜತೆ ಶಿಸ್ತು ಕೂಡ ಕಲಿಸುತ್ತಾರೆ. ಇದು ಅಗತ್ಯವೂ ಹೌದು. ಆದರೆ ಅಸ್ಸಾಂನ ಮಜುಲಿ ಜಿಲ್ಲೆಯ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರು ಮಕ್ಕಳಿಗೆ ಶಿಸ್ತಿನ ಪಾಠ ಮಾಡಲು ಹೋಗಿ ವಿವಾದ ಸೃಷ್ಟಿಸಿದ್ದಾರೆ. ಬೆಳಗ್ಗೆ ಶಾಲೆಯಲ್ಲಿ ನಡೆಯುವ ಪ್ರಾರ್ಥನೆ ನಂತರದ ಸೆಷನ್​​ನಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕೂದಲು ಕತ್ತರಿಸಿದ್ದಾರೆ (Teacher Chops Hair Of Students). ಈ ಕೇಸ್​ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಸೂಕ್ತವಾಗಿ ತನಿಖೆ ನಡೆಸುವಂತೆ ಹೆಚ್ಚುವರಿ ಆಯುಕ್ತರಾದ ಕಾವೇರಿ ಬಿ.ಶರ್ಮಾ ಸೂಚನೆ ನೀಡಿದ್ದಾರೆ.

ಈ ವಿಷಯ ವಿವಾದ ಸೃಷ್ಟಿ ಮಾಡುತ್ತಿದ್ದಂತೆ ಶಾಲಾ ಆಡಳಿತ ಹೇಳಿಕೆ ಬಿಡುಗಡೆ ಮಾಡಿದೆ. ‘ಮಕ್ಕಳ ಕೂದಲು ಉದ್ದುದ್ದ ಬೆಳೆದಿತ್ತು. ಶಾಲೆಯ ಮಾರ್ಗಸೂಚಿ ಪ್ರಕಾರ ಇಲ್ಲಿನ ಗಂಡು ಮಕ್ಕಳು ಉದ್ದನೆಯ ಕೂದಲು ಬಿಡುವುದಕ್ಕೆ ಅವಕಾಶ ಇಲ್ಲ. ಹೇರ್​ಕಟ್​ ಮಾಡಿಸಿಕೊಳ್ಳುವಂತೆ ಮಕ್ಕಳಿಗೆ ಹೇಳಿಯಾಯಿತು. ಪಾಲಕರಿಗೂ ವಿಷಯ ತಿಳಿಸಲಾಗಿತ್ತು. ಆದರೆ ಒಂದಷ್ಟು ಮಕ್ಕಳು ಮಾತು ಕೇಳಲೇ ಇಲ್ಲ. ಹೀಗಾಗಿ ನಾವೇ ಕೂದಲು ಕಟ್​ ಮಾಡಿದ್ದೇವೆ. ಇದು ಮಕ್ಕಳಿಗೆ ಶಿಸ್ತು ಕಲಿಸುವ ಒಂದು ವಿಧಾನವಷ್ಟೇ’ ಎಂದು ತಿಳಿಸಿದೆ. ಅಷ್ಟೇ ಅಲ್ಲ, ಶಿಕ್ಷಕರು ವಿದ್ಯಾರ್ಥಿಗಳ ಕೂದಲ ಉದ್ದವನ್ನು ಮಾತ್ರ ಕಡಿಮೆ ಮಾಡಿದ್ದಾರೆ. ಟ್ರಿಮ್ ಮಾಡಿಲ್ಲ, ಯಾವುದೇ ಸ್ಟೈಲ್​​ಲ್ಲಿ ಹೇರ್​ಕಟ್​ ಮಾಡಿಲ್ಲ ಎಂದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ.

ಇದನ್ನೂ ಓದಿ: Shivamogga News: ಸಾಗರದಲ್ಲಿ ವಿಷಾಹಾರ ಸೇವನೆಯಿಂದ 30ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥ

ಮಕ್ಕಳ ಕೂದಲು ಕತ್ತರಿಸಿದ್ದು ನಿಕ್ಕಿ ಎಂಬ ಶಿಕ್ಷಕರಾಗಿದ್ದು, ಅವರು ಶಾಲಾ ಆಡಳಿತದ ನಿಯಮವನ್ನಷ್ಟೇ ಪಾಲಿಸಿದ್ದಾರೆ. ಆದರೆ ಕೂದಲು ಕಟ್​ ಮಾಡುತ್ತಿದ್ದಂತೆ ವಿದ್ಯಾರ್ಥಿಗಳು ಅಸಮಾಧಾನಗೊಂಡಿದ್ದಾರೆ. ಶಾಲೆಗೆ ಹೋಗಲು ಇಷ್ಟವಿಲ್ಲ ಎಂದು ಮನೆಯಲ್ಲಿ ಹಠ ಹಿಡಿದು ಕುಳಿತಿದ್ದಾರೆ. ಪಾಲಕರೂ ಕಿಡಿಕಾರಿದ್ದಾರೆ. ‘ಶಾಲೆಯಲ್ಲಿ ಮಕ್ಕಳಿಗೆ ಶಿಸ್ತು ಕಲಿಸುವುದು ಬೇಡ ಎಂದು ನಾವು ಹೇಳುವುದಿಲ್ಲ. ಆದರೆ ಅದಕ್ಕೂ ಒಂದು ಮಿತಿಯಿದೆ. ಮಕ್ಕಳು ಅವರ ಸಮವಸ್ತ್ರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಚೆನ್ನಾಗಿ ಇರಬೇಕು. ಆದರೆ ಇಡೀ ಶಾಲೆಯಲ್ಲಿರುವ ಎಲ್ಲ ಮಕ್ಕಳು, ವಿದ್ಯಾರ್ಥಿಗಳ ಎದುರು ಕೆಲವೇ ಕೆಲವು ವಿದ್ಯಾರ್ಥಿಗಳ ತಲೆಕೂದಲು ಕತ್ತರಿಸಿದ್ದು, ಅವರಿಗೆ ಅವಮಾನ ಆಗಿದೆ’ ಎಂದು ಹೇಳಿದ್ದಾರೆ.

Exit mobile version