ಶಾಲೆಗಳಲ್ಲಿ ಮಕ್ಕಳಿಗೆ ಪಾಠದೊಂದಿಗೆ ಶಿಸ್ತು ರೂಢಿಸಲಾಗುತ್ತದೆ. ಅವರ ಸಮವಸ್ತ್ರ, ಶೂ ಸರಿಯಾಗಿರಬೇಕು. ಉಗುರು ಕತ್ತರಿಸಿರಬೇಕು. ಕೂದಲು ಕೂಡ ಸರಿಯಾಗಿ ಟ್ರಿಮ್ ಮಾಡಿಸಿರಬೇಕು. ಹೆಣ್ಣುಮಕ್ಕಳಾದರೆ ಕೂದಲನ್ನು ನೀಟ್ ಆಗಿ ಜುಟ್ಟವನ್ನೋ, ಜಡೆಯನ್ನೋ ಕಟ್ಟಿಕೊಂಡು ಹೋಗಬೇಕು ಎಂಬಿತ್ಯಾದಿ ನಿಯಮಗಳನ್ನು ಮಾಡಿಡಲಾಗುತ್ತದೆ. ಇಂಥ ಶಿಸ್ತನ್ನು ಸರಿಯಾಗಿ ಪಾಲನೆ ಮಾಡದ ವಿದ್ಯಾರ್ಥಿಗಳಿಗೆ ಶಿಕ್ಷಕರು ಬಯ್ಯುವುದು, ಸಣ್ಣಪುಟ್ಟ ಶಿಕ್ಷೆ ನೀಡುವುದು ಸಾಮಾನ್ಯ. ಆದರೆ ನೊಯ್ಡಾದ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು (Noida School Teacher) ಇನ್ನೊಂದು ಹೆಜ್ಜೆ ತುಸು ಮುಂದೆ ಹೋಗಿದ್ದಾರೆ. ಕೂದಲನ್ನು ಸರಿಯಾಗಿ ಕತ್ತರಿಸಿಕೊಂಡು (Hair Cut) ಬಾರದ 15ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕೂದಲನ್ನು ತಾವೇ ಕತ್ತರಿಸಿ, ಇದೀಗ ಕೆಲಸದಿಂದಲೇ ವಜಾಗೊಂಡಿದ್ದಾರೆ.
ನೊಯ್ಡಾದ ಸೆಕ್ಟರ್ 168ರಲ್ಲಿರುವ ಶಾಂತಿ ಇಂಟರ್ನ್ಯಾಶನಲ್ ಸ್ಕೂಲ್ನ ಶಿಸ್ತು ಪಾಲನಾ ಉಸ್ತುವಾರಿ ಶಿಕ್ಷಕಿ ಸುಷ್ಮಾ ಹೀಗೆ ಏನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಕೆಲಸವನ್ನೇ ಕಳೆದುಕೊಂಡಿದ್ದಾರೆ. ಒಂದಷ್ಟು ಹುಡುಗರು ತಲೆ ಕೂದಲು ಉದ್ದಬಿಟ್ಟಿದ್ದರು. ಈಗಾಗಲೇ ಸುಷ್ಮಾ ಮೂರ್ನಾಲ್ಕು ಬಾರಿ ಆ ವಿದ್ಯಾರ್ಥಿಗಳಿಗೆ ಹೇರ್ ಕಟ್ ಮಾಡಿಸಿಕೊಂಡು ಬರುವಂತೆ ಹೇಳಿದ್ದರು. ಆದರೆ ಅದನ್ನು ಅವರು ಕಿವಿ ಮೇಲೆ ಹಾಕಿಕೊಂಡಿರಲಿಲ್ಲ. ಹೀಗಾಗಿ ತಾವೇ ಟ್ರಿಮ್ಮರ್ ತಂದು, ಮಕ್ಕಳ ತಲೆಯನ್ನು ಟ್ರಿಮ್ ಮಾಡಿಸಿಬಿಟ್ಟಿದ್ದಾರೆ. ಈ ಕೇಸ್ ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿದೆ.
ಇದನ್ನೂ ಓದಿ: ತಲೆ ಕೂದಲು ಚಿಕ್ಕದಾಗಿ ಕತ್ತರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಬಾಲಕ; ಸಲೂನ್ನಿಂದ ಬರುತ್ತಿದ್ದಂತೇ ಅತ್ತು, ರಂಪಾಟ ಮಾಡಿದ್ದ!
ಇನ್ನು ತಮ್ಮ ಮಕ್ಕಳ ತಲೆ ಕೂದಲನ್ನು ಶಿಕ್ಷಕಿ ಟ್ರಿಮ್ ಮಾಡಿದ ವಿಷಯ ಕೇಳುತ್ತಿದ್ದಂತೆ ಅವರ ಪಾಲಕರೂ ಸಿಡಿದೆದ್ದಿದ್ದಾರೆ. ಶಾಲೆ ಬಳಿ ಬಂದು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಗಲಾಟೆ ನೋಡಿ ಕಂಗಾಲಾದ ಶಾಲಾ ಆಡಳಿತ ಮಂಡಳಿ ಶಿಕ್ಷಕಿ ಸುಷ್ಮಾರನ್ನು ಕೆಲಸದಿಂದ ತೆಗೆದುಹಾಕಿದೆ. ಬಳಿಕ ಪಾಲಕರು ಮತ್ತು ಶಾಲಾ ಆಡಳಿತ ಮಂಡಳಿ ಸಿಬ್ಬಂದಿ ಒಟ್ಟಿಗೆ ಕುಳಿತು ಚರ್ಚಿಸಿದ್ದಾರೆ. ಸದ್ಯ ವಾಗ್ವಾದ ಬಗೆಹರಿದಿದೆ.