ಚೆನ್ನೈ: ದೆಹಲಿಯಲ್ಲಿ ಅಂಜಲಿ ಎಂಬ ಹುಡುಗಿ ಕಾರಿನ ಅಡಿಯಲ್ಲಿ ಸಿಲುಕಿ ಭಯಾನಕವಾಗಿ ಮೃತಪಟ್ಟ ದುರ್ಘಟನೆ ಬೆನ್ನಲ್ಲೇ, ಚೆನ್ನೈನಲ್ಲಿ ಕೂಡ ಅಷ್ಟೇ ದಾರುಣವಾದ ಒಂದು ಅಪಘಾತ (Accident In Chennai) ನಡೆದಿದೆ. 22 ವರ್ಷದ ಸಾಫ್ಟವೇರ್ ಇಂಜಿನಿಯರ್ವೊಬ್ಬಳು ರಸ್ತೆ ಗುಂಡಿಯಿಂದ ಆಯತಪ್ಪಿ ಬಿದ್ದು, ಟ್ರಕ್ನಡಿಗೆ ಸಿಲುಕಿ ಮೃತಪಟ್ಟಿದ್ದಾಳೆ. ಅವಳ ಹಿಂದೆ ಕುಳಿತಿದ್ದ ಆಕೆಯ ಸೋದರ ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಎಸ್.ಶೋಭನಾ ಇಂದು ಮುಂಜಾನೆ 7.30ರ ಹೊತ್ತಿಗೆ, ಸೋದರ ಹರೀಶ್ನನ್ನು ಶಾಲೆಗೆ ಬಿಡಲೆಂದು ಸ್ಕೂಟರ್ನಲ್ಲಿ ಹೋಗುತ್ತಿದ್ದಳು. ಮಧುರಾವೋಯಲ್ ಬಳಿ ರಸ್ತೆ ಮಧ್ಯೆ ಬಿದ್ದಿದ್ದ ಗುಂಡಿಯನ್ನು ಆಕೆ ಗಮನಿಸಿಲಿಲ್ಲ. ಸ್ಕೂಟರ್ ಚಕ್ರ ಗುಂಡಿಯಲ್ಲಿ ಬೀಳುತ್ತಿದ್ದಂತೆ ಅವಳಿಗೆ ನಿಯಂತ್ರಣ ತಪ್ಪಿದೆ. ಇದರಿಂದ ಶೋಭನಾ ಮತ್ತು ಸೋದರ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ಶೋಭನಾ ಮೇಲೆ, ಹಿಂಬದಿಯಿಂದ ಬರುತ್ತಿದ್ದ ಟ್ರಕ್ನ ಚಕ್ರ ಹತ್ತಿದೆ. ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಹರೀಶ್ ಪವಾಡ ಸದೃಶ್ಯವಾಗಿ ಪಾರಾಗಿದ್ದಾನೆ. ಗಾಯಗೊಂಡಿರುವ ಅವನಿಗೆ ಚಿಕಿತ್ಸೆ ಕೊಡಲಾಗುತ್ತಿದೆ.
ಶೋಭನಾ ಗುಡುವಂಚೇರಿಯಲ್ಲಿರುವ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದಳು. ಈಕೆ ಇಂದು ಮುಂಜಾನೆ ತಮ್ಮನನ್ನು ಶಾಲೆಗೆ ಬಿಡಲು ಹೋಗುತ್ತಿದ್ದಾಗ ಹೆಲ್ಮೆಟ್ ಧರಿಸಿರಲಿಲ್ಲ. ಅವಳ ಸೋದರನೂ ಹೆಲ್ಮೆಟ್ ಹಾಕಿರಲಿಲ್ಲ. ಅಪಘಾತವಾಗುತ್ತಿದ್ದಂತೆ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಟ್ರಕ್ ಚಾಲಕ ಬಿ.ಮೋಹನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ಶೋಭನಾ ಕೆಲಸ ಮಾಡುತ್ತಿದ್ದ ಜೊಹೊ ಎಂಬ ಸಂಸ್ಥೆಯ ಸಿಇಒ ಶ್ರೀಧರ್ ವೆಂಬು ಟ್ವೀಟ್ ಮಾಡಿ, ‘ನಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶೋಭನಾ ಇಂದು ರಸ್ತೆ ಗುಂಡಿ ಕಾರಣಕ್ಕೆ ಪ್ರಾಣಕಳೆದುಕೊಂಡಿದ್ದಾರೆ. ಕೆಟ್ಟ ರಸ್ತೆಯಿಂದಾಗಿ ಈ ಅಪಘಾತ ಆಯಿತು. ಶೋಭನಾ ಕುಟುಂಬಕ್ಕೆ ಮತ್ತು ನಮ್ಮ ಕಂಪನಿಗೆ ಅತಿದೊಡ್ಡ ನಷ್ಟ ಇದು’ ಎಂದಿದ್ದಾರೆ.
ಇದನ್ನೂ ಓದಿ: Accident In Delhi | ಕಾರಿನ ಅಡಿಗೆ ಸಿಲುಕಿ ಮೃತಪಟ್ಟ ಅಂಜಲಿ ಮದ್ಯಪಾನ ಮಾಡಿದ್ದಳು; ಸ್ನೇಹಿತೆ ಪೊಲೀಸರಿಗೆ ಹೇಳಿದ್ದೇನು?