ಕೋಲ್ಕತ್ತ: ಆಕೆ ಕಾಲೇಜು ಓದುತ್ತಿರುವ ವಿದ್ಯಾರ್ಥಿನಿ. ಅವಳದ್ದೊಂದು ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದನ್ನು ಆಕೆ ನೋಡಿದ ಮೇಲೆ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾಳೆ. ಅವಳು ಸೂಸೈಡ್ ಮಾಡಿಕೊಂಡಳು ಅಂದ ತಕ್ಷಣ, ಆಕೆಯದ್ದು ಯಾವುದೋ ಬೆತ್ತಲೆ ವಿಡಿಯೊವೋ ಅಥವಾ ಇನ್ಯಾವುದೋ ಅಶ್ಲೀಲ ವಿಡಿಯೊವೋ ವೈರಲ್ ಆಗಿತ್ತು ಎಂದು ಭಾವಿಸಬೇಡಿ. ಅದೇನೂ ಅಲ್ಲ, ವೈರಲ್ ಆಗಿದ್ದು, ಆ ಹುಡುಗಿ ಚಾಕಲೇಟ್ ಕದ್ದಿದ್ದ ವಿಡಿಯೊವಷ್ಟೇ…
ವಿದ್ಯಾರ್ಥಿನಿ ಜೈಗಾಂವ್ನ ಒಂದು ಶಾಪಿಂಗ್ ಮಾಲ್ಗೆ ಹೋಗಿದ್ದಾಗ, ಅಲ್ಲಿ ಸೈಲೆಂಟ್ ಆಗಿ ಒಂದು ಚಾಕಲೇಟ್ ತೆಗೆದುಕೊಂಡಿದ್ದಳು. ಯಾರೂ ನೋಡುತ್ತಿಲ್ಲ ಎಂದು ಖಚಿತ ಪಡಿಸಿಕೊಂಡು ಸುಮ್ಮನೆ ಎತ್ತಿಕೊಂಡು ಬಂದಿದ್ದಳು. ಅದನ್ನು ಯಾರೋ ವಿಡಿಯೊ ಮಾಡಿಬಿಟ್ಟಿದ್ದಾರೆ. ಹೀಗೆ ವಿಡಿಯೊ ಮಾಡುವಾಗ ಆಕೆಗೆ ಅದು ಗೊತ್ತಾಗಿದೆ. ವಿಡಿಯೊ ಚಿತ್ರೀಕರಿಸಿದವರ ಬಳಿ ತೆರಳಿ, ದಯವಿಟ್ಟು ಅದನ್ನು ಡಿಲೀಟ್ ಮಾಡಿ ಎಂದು ಹೇಳಿದ್ದಾಳೆ. ಆದರೆ ಅವರು ಒಪ್ಪಲಿಲ್ಲ. ಭಾನುವಾರ ರಾತ್ರಿ ಆ ವಿಡಿಯೊ ವೈರಲ್ ಆಗುತ್ತಿದ್ದಂತೆ, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಬಗ್ಗೆ ಆಕೆಯ ತಂದೆ ರತನ್ ಘೋಷ್ ಮಾಹಿತಿ ನೀಡಿದ್ದು, ನನ್ನ ಮಗಳು ಆಕೆಯ ತಂಗಿಯೊಂದಿಗೆ ಅಕ್ಟೋಬರ್ 29ರಂದು ಶಾಪಿಂಗ್ ಮಾಲ್ಗೆ ಹೋಗಿದ್ದಳು. ಅಲ್ಲಿ ಈ ಪ್ರಮಾದ ನಡೆದುಹೋಗಿತ್ತು. ಅದನ್ನು ಇವರು ವಿಡಿಯೊ ಮಾಡಿಕೊಂಡಿದ್ದರು. ನನ್ನ ಮಗಳು ಅವಳ ಬಳಿ ಹೋಗಿ ಮನವಿ ಮಾಡಿದಾಗ, ಅವರು ಹಣಕೊಟ್ಟರೆ ವಿಡಿಯೊ ವೈರಲ್ ಮಾಡುವುದಿಲ್ಲ ಎಂದು ಹೇಳಿದ್ದರು. ಹೀಗಾಗಿ ಇವಳು ಹಣವನ್ನೂ ಕೊಟ್ಟಿದ್ದಳು. ಆದರೂ ಸಂಜೆ ಹೊತ್ತಿಗೆ ವಿಡಿಯೊ ಹರಿಬಿಟ್ಟಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ನನ್ನ ಮಗಳು ಜೀವವನ್ನೇ ಕಳೆದುಕೊಂಡಳು. ಆಕೆಯನ್ನು ಹೇಗೆ ಹಿಂಪಡೆಯಲಿ?’ ಎಂದು ಪ್ರಶ್ನಿಸಿದ್ದಾರೆ.
ಜೈಗಾಂವ್ ಪೊಲೀಸ್ ಅಧಿಕಾರಿ ಪ್ರಭೀರ್ ದತ್ತಾ ಈ ಬಗ್ಗೆ ಮಾತನಾಡಿ, ‘ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದೇವೆ. ಮೃತದೇಹವನ್ನು ಪೋಸ್ಟ್ಮಾರ್ಟಮ್ಗೆ ಕಳಿಸಿದ್ದೇವೆ. ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Crime News | ರಸ್ತೆ ಕಾಮಗಾರಿ ವೇಳೆ ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿಯ ಕೈ; ಗ್ರಾಮಸ್ಥರಲ್ಲಿ ಆತಂಕ