Site icon Vistara News

ಗುಜರಾತ್‌ ಗಲಭೆ ಕೇಸ್‌; ತೀಸ್ತಾ ಸೆಟಲ್ವಾಡ್‌, ಶ್ರೀಕುಮಾರ್‌ಗೆ 14 ದಿನಗಳ ನ್ಯಾಯಾಂಗ ಬಂಧನ

Teesta Setalvad 1

ಅಹ್ಮದಾಬಾದ್‌: ಗುಜರಾತ್‌ನಲ್ಲಿ 2002ರಲ್ಲಿ ನಡೆದ ದಂಗೆ ಪ್ರಕರಣದಲ್ಲಿ ನರೇಂದ್ರ ಮೋದಿಯವರನ್ನು ಸಿಲುಕಿಸಲು ಸುಳ್ಳು ಸಾಕ್ಷಿ ಸೃಷ್ಟಿ, ಫೋರ್ಜರಿ ಸೇರಿ ಇನ್ನಿತರ ಕ್ರಿಮಿನಲ್‌ ಆರೋಪದಡಿ ಬಂಧಿತರಾಗಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ ಮತ್ತು ಮಾಜಿ ಡಿಜಿಪಿ ಆರ್‌.ಬಿ. ಶ್ರೀಕುಮಾರ್‌ರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಗುಜರಾತ್‌ ನ್ಯಾಯಾಲಯ ಆದೇಶ ಹೊರಡಿಸಿದೆ. ಇವರಿಬ್ಬರ ಪೊಲೀಸ್‌ ಕಸ್ಟಡಿ ಅವಧಿ ಮುಗಿದಿತ್ತು. ಮತ್ತೆ ತಮ್ಮ ವಶಕ್ಕೆ ಬೇಕು ಎಂದು ಗುಜರಾತ್‌ ಪೊಲೀಸರು ಕೋರ್ಟ್‌ಗೆ ಮನವಿ ಮಾಡದ ಹಿನ್ನೆಲೆಯಲ್ಲಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅಮಿತ್‌ ಪಟೇಲ್‌ ತಿಳಿಸಿದ್ದಾರೆ.

2002ರಲ್ಲಿ ಗುಜರಾತ್‌ನ ಗುಲ್ಬರ್ಗ್‌ ಸೊಸೈಟಿಯಲ್ಲಿ ನಡೆದ ಗಲಭೆಯಲ್ಲಿ ನರೇಂದ್ರ ಮೋದಿಯವರ ಪಾತ್ರವೇನೂ ಇಲ್ಲ ಎಂದು ಎಸ್‌ಐಟಿ ನೀಡಿದ್ದ ಕ್ಲೀನ್‌ಚಿಟ್‌ ಪ್ರಶ್ನಿಸಿ ಕಾಂಗ್ರೆಸ್‌ನ ಮಾಜಿ ಸಂಸದ ಎಹ್ಸಾನ್‌ ಜಫ್ರಿ(ಗುಜರಾತ್‌ ಗಲಭೆಯಲ್ಲಿ ಮೃತಪಟ್ಟವರು) ಪತ್ನಿ ಜಕಿಯಾ ಜಫ್ರಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಆ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾ ಮಾಡಿ, ಮೋದಿಯವರಿಗೆ ಕ್ಲೀನ್‌ ಚಿಟ್‌ ಕೊಟ್ಟಿತ್ತು. ಅದರ ಬೆನ್ನಲ್ಲೇ ತೀಸ್ತಾ ಸೆಟಲ್ವಾಡ್‌ ಮತ್ತು ಆರ್‌.ಬಿ. ಶ್ರೀಕುಮಾರ್‌ ಬಂಧನವಾಗಿತ್ತು. ತೀಸ್ತಾ ಸೆಟಲ್ವಾಡ್‌ರನ್ನು ಮುಂಬೈನಲ್ಲಿದ್ದ ಅವರ ಮನೆಯಿಂದಲೇ ಗುಜರಾತ್‌ ಭಯೋತ್ಪಾದಕ ನಿಗ್ರಹ ದಳ (ATS)ಬಂಧಿಸಿತ್ತು. ಇವರಿಬ್ಬರೂ ಅಂದಿನ ಗಲಭೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದಲ್ಲದೆ, ಹೇಗಾದರೂ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ನಾಯಕರನ್ನು ತಪ್ಪಿತಸ್ಥರೆಂದು ಸಾಬೀತು ಮಾಡಲು ಕ್ರಿಮಿನಲ್‌ ಕೆಲಸಗಳನ್ನು ಮಾಡಿದ್ದಾರೆ ಎಂಬ ಆರೋಪವಿದೆ. ಸುಪ್ರೀಂಕೋರ್ಟ್‌ ಕೂಡ ತೀರ್ಪು ನೀಡುವಾಗ ಅದನ್ನೇ ಹೇಳಿದೆ.

ತೀಸ್ತಾ ಸೆಟಲ್ವಾಡ್‌ ಮತ್ತು ಆರ್‌.ಬಿ.ಶ್ರೀಕುಮಾರ್‌ ಇಬ್ಬರನ್ನೂ ಗುಜರಾತ್‌ ಮೆಟ್ರೋಪಾಲಿಟಿನ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ವೇಳೆ ಪೊಲೀಸರು, ‘ತೀಸ್ತಾ ಮತ್ತು ಶ್ರೀಕುಮಾರ್‌ ವಿಚಾರಣೆಗೆ ಸಹಕರಿಸುತ್ತಿಲ್ಲ. ಹಾಗಾಗಿ ೧೪ದಿನಗಳ ಕಾಲ ಕಸ್ಟಡಿಗೆ ಕೊಡುವಂತೆʼ ಮನವಿ ಮಾಡಿದ್ದರು. ಆದರೆ ಜುಲೈ 1ರವರೆಗೆ ಪೊಲೀಸ್‌ ಕಸ್ಟಡಿಗೆ ವಹಿಸಿ ಕೋರ್ಟ್‌ ಆದೇಶ ನೀಡಿತ್ತು. ಆ ಅವಧಿ ನಿನ್ನೆಗೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಮತ್ತೊಮ್ಮೆ ವಿಚಾರಣೆ ನಡೆದಿತ್ತು. ೧೪ದಿನಗಳ ನಂತರ ಇವರಿಬ್ಬರೂ ಮತ್ತೆ ಕೋರ್ಟ್‌ಗೆ ಹಾಜರಾಗಬೇಕಿದೆ. ಅಂದಹಾಗೇ, ಪ್ರಸಕ್ತ ಪ್ರಕರಣದಲ್ಲಿ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ಕೂಡ ಇನ್ನೊಬ್ಬ ಆರೋಪಿ. ಅವರು 1990ರ ಲಾಕಪ್‌ ಡೆತ್‌ ಕೇಸ್‌ವೊಂದರಲ್ಲಿ ಈಗಾಗಲೇ ಜೈಲಿನಲ್ಲಿದ್ದಾರೆ.

ಇದನ್ನೂ ಓದಿ: ಗುಜರಾತ್‌ ಗಲಭೆ ಪ್ರಕರಣದ ತನಿಖೆಗೆ ಅಸಹಕಾರ, ತೀಸ್ತಾ ಸೆಟಲ್ವಾಡ್‌ ಜುಲೈ 1ರ ತನಕ ಪೊಲೀಸ್‌ ಕಸ್ಟಡಿಗೆ

Exit mobile version