ನವದೆಹಲಿ: ಗುಜರಾತ್ ಗಲಭೆಯಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಪಾತ್ರವೇನೂ ಇಲ್ಲ ಎಂದು ಎಸ್‌ಐಟಿ ಕೊಟ್ಟಿದ್ದ ಕ್ಲೀನ್‌ಚಿಟ್‌ನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದ ಬೆನ್ನಲ್ಲೇ, ಗುಜರಾತ್ ಭಯೋತ್ಪಾದಕ ನಿಗ್ರಹ ದಳ (ATS) ಸಾಮಾಜಿಕ ಕಾರ್ಯಕರ್ತ, ಪತ್ರಕರ್ತೆ ತೀಸ್ತಾ ಸೆಟಲ್ವಾಡ್ (Teesta Setalvad)ರನ್ನು ಬಂಧಿಸಿದೆ. ಇವರು ನಡೆಸುತ್ತಿದ್ದ ಎನ್‌ಜಿಒ ವಿದೇಶಗಳಿಂದ ದೇಣಿಗೆ ಸಂಗ್ರಹಿಸಿ ದುರ್ಬಳಕೆ ಮಾಡಿದೆ ಎಂಬ ಆರೋಪದಡಿ ಅರೆಸ್ಟ್ ಮಾಡಲಾಗಿದೆ. ಇಂದು ಮಧ್ಯಾಹ್ನ ೩ ಗಂಟೆ ಹೊತ್ತಿಗೆ ಮುಂಬೈನಲ್ಲಿರುವ ಅವರ ನಿವಾಸಕ್ಕೇ ತೆರಳಿ ಬಂಧಿಸಲಾಗಿದ್ದು, ಅಲ್ಲಿಂದ ಅಹ್ಮದಾಬಾದ್‌ಗೆ ಕರೆದುಕೊಂಡು ಹೋಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಗುಜರಾತ್ ದಂಗೆಯ ಬಗ್ಗೆ ತೀಸ್ತಾ ಸೆಟಲ್ವಾಡ್ ತುಂಬ ತಪ್ಪು ಮಾಹಿತಿಯನ್ನು ಹಬ್ಬಿಸಿದ್ದರು. ಇದೇ ವಿಚಾರವನ್ನಿಟ್ಟುಕೊಂಡು ಬಿಜೆಪಿ ಮತ್ತು ಪಕ್ಷದ ನಾಯಕರ ವಿರುದ್ಧ ಸುಳ್ಳು ಆಪಾದನೆಗಳನ್ನು ಹೊರಿಸಿದ್ದರು ಎಂದು ಇಂದು ಬೆಳಗ್ಗೆಯಷ್ಟೇ ಅಮಿತ್ ಶಾ ಹೇಳಿದ್ದರು. “ನನಗೆ ಆಕೆಯ ಎನ್‌ಜಿಒ ಹೆಸರು ನೆನಪಿಲ್ಲ. ಆದರೆ ಗುಜರಾತ್‌ನಲ್ಲಿ ೨೦೦೨ರಲ್ಲಿ ನಡೆದ ಹಿಂಸಾಚಾರದ ಬಗ್ಗೆ ತೀಸ್ತಾ ತುಂಬ ಸುಳ್ಳು ಮಾಹಿತಿಯನ್ನು ಪೊಲೀಸರಿಗೆ ಕೊಟ್ಟಿದ್ದರು. ಇನ್ನು ಸುಪ್ರೀಂಕೋರ್ಟ್ ತೀರ್ಪು ನೀಡುವಾಗಲೂ ಅವರ ಹೆಸರನ್ನು ಉಲ್ಲೇಖಿಸಿದೆ” ಎಂದು ಅಮಿತ್ ಶಾ ತಿಳಿಸಿದ್ದರು.
ಗುಜರಾತ್‌ನ ದಂಗೆಯಲ್ಲಿ ಅಂದಿನ ಸಿಎಂ ನರೇಂದ್ರ ಮೋದಿಯವರ ಪಾತ್ರವೂ ಇದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನೂ ಎಸ್‌ಐಟಿ ತನಿಖೆಗೆ ಒಳಪಡಿಸಲಾಗಿತ್ತು. ಆದರೆ ಗಲಭೆಗೂ ನರೇಂದ್ರ ಮೋದಿಗೂ ಸಂಬಂಧವಿಲ್ಲ ಎಂದು ಅವರಿಗೆ ಎಸ್‌ಐಟಿ ಕ್ಲೀನ್‌ಚಿಟ್ ಕೊಟ್ಟಿತ್ತು. ಆದರೆ ಈ ಕ್ಲೀನ್‌ಚಿಟ್ ಪ್ರಶ್ನಿಸಿ ಹಿರಿಯ ಕಾಂಗ್ರೆಸ್ ಸಂಸದ ಎಹ್ಸಾನ್ ಜಫ್ರಿ (ಗುಜರಾತ್ ಗಲಭೆಯಲ್ಲಿ ಮೃತಪಟ್ಟವರು) ಪತ್ನಿ ಜಕಿಯಾ ಜಫ್ರಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಜೂ.24ರಂದು ಅಂತಿಮ ತೀರ್ಪು ನೀಡಿದೆ.
“ತೀಸ್ತಾ ಸೆಟಲ್ವಾಡ್ ಅವರು ಜಕಿಯಾ ಜಫ್ರಿಯವರ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಕೇಸ್‌ನಲ್ಲಿ ತೀಸ್ತಾ ಎನ್‌ಜಿಒ ಪರ ಹಲವು ಪ್ರಭಾವಿ ವಕೀಲರು ಕಾಣಿಸಿಕೊಂಡಿದ್ದಾರೆ” ಎಂದು ಸುಪ್ರೀಂ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಅಷ್ಟೇ ಅಲ್ಲ, ʼತೀಸ್ತಾ ಸೆಟಲ್ವಾಡ್ ಅವರ ಪೂರ್ವಾಪರವನ್ನೂ ಸ್ವಲ್ಪ ಗಣನೆಗೆ ತೆಗೆದುಕೊಳ್ಳಬೇಕು. ಗುಜರಾತ್ ಗಲಭೆಯನ್ನು ತೀಸ್ತಾ, ತಮ್ಮ ಪ್ರತೀಕಾರದ ಭಾಗವಾಗಿ ಪರಿಗಣಿಸಿಕೊಂಡು, ಅದಕ್ಕಾಗಿ ಜಕಿಯಾ ಜಫ್ರಿಯವರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲದರ ಮಧ್ಯೆ ಜಕಿಯಾ ಬಲಿಪಶು ಆದಂತೆ ಕಾಣುತ್ತಿದೆʼ ಎಂದೂ ಹೇಳಿದೆ. ಅಂದರೆ, ಗುಜರಾತ್ ಗಲಭೆಯ ಹೊಣೆಯನ್ನು ನರೇಂದ್ರ ಮೋದಿ, ಅಮಿತ್ ಶಾ ಮತ್ತಿತರರ ತಲೆಗೆ ಕಟ್ಟಿ, ಅವರನ್ನು ಸಿಲುಕಿಸಲೇಬೇಕು ಎಂಬ ಪ್ರಯತ್ನದಲ್ಲಿ ತೀಸ್ತಾ ಸೆಟಲ್ವಾಡ್ ಜಕಿಯಾ ಅವರನ್ನು ಬಳಸಿಕೊಂಡಿದ್ದಾರೆ ಎಂಬ ಅಂಶವನ್ನು ಕೋರ್ಟ್ ಹೇಳಿದೆ.
ತೀಸ್ತಾ ಸೆಟಲ್ವಾಡ್ Citizens for Justice and Peace (ಸಿಟಿಜನ್ ಫಾರ್ ಜಸ್ಟೀಸ್ & ಪೀಸ್) ಎಂಬ ಎನ್‌ಜಿಒವೊಂದನ್ನು ಸ್ಥಾಪಿಸಿದ್ದರು. ಗುಜರಾತ್ ಹಿಂಸಾಚಾರದಲ್ಲಿ ಸಂತ್ರಸ್ತರ ಪರ ನಾವಿದ್ದೇವೆ. ಗಲಭೆಯಲ್ಲಿ ಸಂತ್ರಸ್ತರಾಗಿ, ಕಾನೂನು ಹೋರಾಟ ಮಾಡುವವರಿಗೆ ನಮ್ಮ ಎನ್‌ಜಿಒದಿಂದ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಘೋಷಿಸಿಕೊಂಡಿದ್ದರು. ಅದೇ ಕೆಲಸದಲ್ಲೇ ತೊಡಗಿಕೊಂಡು, ಜಕಿಯಾ ಅವರಿಗೂ ಸಹಕಾರ ನೀಡುತ್ತಿದ್ದರು.
ಇದನ್ನೂ ಓದಿ: ಗುಜರಾತ್ ಗಲಭೆ: ಮೋದಿಗೆ ಎಸ್‌ಐಟಿ ಕ್ಲೀನ್ ಚಿಟ್ ನೀಡಿದ್ದನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್