ಇತ್ತೀಚೆಗಷ್ಟೇ ನಿಧನರಾದ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರು ಕನಸಲ್ಲಿ ಬಂದಿದ್ದರು ಎಂಬ ಕಾರಣಕ್ಕೆ, ಆರ್ಜೆಡಿ (ರಾಷ್ಟ್ರೀಯ ಜನತಾ ದಳ) ನಾಯಕ ಮತ್ತು ಬಿಹಾರ ಪರಿಸರ ಇಲಾಖೆ ಸಚಿವ ತೇಜ್ ಪ್ರತಾಪ್ ಯಾದವ್ (Tej Pratap Yadav) ಅವರು ಇಂದು ಸೈಕಲ್ ಸವಾರಿ ಮಾಡಿಕೊಂಡು ಸಚಿವಾಲಯಕ್ಕೆ ತೆರಳಿದ್ದಾರೆ. ಸದಾ ಪ್ರಕ್ಷುಬ್ಧ ಮನಸ್ಥಿತಿ, ವಿಚಿತ್ರ ನಡವಳಿಕೆಗೇ ಹೆಸರಾದ ತೇಜ್ ಪ್ರತಾಪ್, ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ.
ಇಂದು ಬೆಳಗ್ಗೆ ಸೈಕಲ್ ತುಳಿಯುತ್ತ ಹೊರಟ ಅವರನ್ನು, ಈ ಬಗ್ಗೆ ಪ್ರಶ್ನಿಸಿದ್ದಕ್ಕೆ, ‘ಮುಂಜಾನೆ ಕನಸಲ್ಲಿ ನಾನು ಮುಲಾಯಂ ಸಿಂಗ್ ಯಾದವ್ ಅವರನ್ನ ನೋಡಿದೆ. ಅವರು ಕನಸಲ್ಲಿ ಬಂದು ನನ್ನನ್ನು ಅಪ್ಪಿಕೊಂಡರು. ಪ್ರೀತಿಯಿಂದ ಆಶಿರ್ವದಿಸಿದರು. ನಾನು ಇನ್ನು ಮುಂದೆ ಜೀವನದ ಉದ್ದಕ್ಕೂ ಅವರ ಮಾರ್ಗದರ್ಶನವನ್ನು ಅನುಸರಿಸುತ್ತೇನೆ. ಬಿಹಾರದ ಪರಿಸರ, ಅರಣ್ಯ, ಹವಾಮಾನ ನೈರ್ಮಲ್ಯವಾಗದಂತೆ ತಡೆಯಲು ನಾನಿವತ್ತು ಸೈಕಲ್ ಹೊಡೆದುಕೊಂಡೇ ನನ್ನ ಅರಣ್ಯ ಭವನಕ್ಕೆ ಹೋಗಿದ್ದೇನೆ ಎಂದು ಹೇಳಿದ್ದಾರೆ. ಸಮಾಜವಾದಿ ಪಕ್ಷದ ಚಿಹ್ನೆ ಸೈಕಲ್ ಮತ್ತು ಅದನ್ನು ಆರ್ಜೆಡಿ ನಾಯಕ ತುಳಿದುಕೊಂಡು ಹೋಗಿದ್ದಲ್ಲದೆ, ಮುಲಾಯಂ ಸಿಂಗ್ ಯಾದವ್ ಕನಸಲ್ಲಿ ಬಂದಿದ್ದರು ಎಂದು ಹೇಳಿದ್ದು ತುಸು ಹೆಚ್ಚೇ ವಿಶೇಷ ಎನ್ನಿಸಿದೆ.
ಇದನ್ನೂ ಓದಿ: Padmavibhushana Award : ಕರಸೇವಕರ ಮೇಲೆ ಗುಂಡು ಹಾರಿಸಿದ ಮುಲಾಯಂಗೇಕೆ ಪದ್ಮ ಪ್ರಶಸ್ತಿ- ಮುತಾಲಿಕ್ ಆಕ್ರೋಶ
ಕನಸಲ್ಲಿ ನಡೆದಿದ್ದನ್ನು ಸಂಪೂರ್ಣವಾಗಿ ಹಂಚಿಕೊಂಡ ತೇಜ್ ಪ್ರತಾಪ್ ಯಾದವ್ ‘ನೇತಾಜಿ (ಮುಲಾಯಂ ಸಿಂಗ್ ಯಾದವ್)ಯವರನ್ನು ನೋಡುತ್ತಿದ್ದಂತೆ ನನಗೆ ಖುಷಿಯಾಯಿತು. ಅವರಿಗೆ ನನ್ನನ್ನು ನೋಡಿ ಸಿಕ್ಕಾಪಟೆ ಅಚ್ಚರಿಯಾಯಿತು. ನೀನು ಇಲ್ಲಿಗೆ ಹೇಗೆ ಬಂದೆ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ನಾನು ‘ವೃಂದಾವನಕ್ಕೆ ಹೋಗುತ್ತಿದ್ದೆ, ನಿಮ್ಮನ್ನು ನೋಡಲು ಇಲ್ಲಿಗೆ ಬಂದೆ’ ಎಂದು ಹೇಳಿದೆ. ಬಳಿಕ ನಾನು ಮತ್ತು ನೇತಾಜಿ ಇಬ್ಬರೂ ಒಂದು ಸೈಕಲ್ನಲ್ಲಿ ಅವರು ಇರುವ ಊರನ್ನು ಸುತ್ತುವರಿದೆವು. ನಂತರ ಅಲ್ಲೇ ಒಂದು ಮದುವೆಗೂ ಹೋಗಿ ವಾಪಸ್ ಬಂದೆವು. ನೇತಾಜಿ ನನಗೆ ವಾಚ್ ಗಿಫ್ಟ್ ಕೊಟ್ಟು, ಕಣ್ತುಂಬಿಕೊಂಡು ಬೀಳ್ಕೊಟ್ಟರು. ನನಗೂ ಅಳುಬಂತು, ಅಷ್ಟರಲ್ಲಿ ಎಚ್ಚರವಾಯಿತು’ ಎಂದು ಹೇಳಿದ್ದಾರೆ.