Site icon Vistara News

ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದರಾ ತೇಜಸ್ವಿ ಸೂರ್ಯ?-ಅಂದು ಜತೆಗಿದ್ದ ಬಿಜೆಪಿ ನಾಯಕ ಅಣ್ಣಾಮಲೈ ಹೇಳಿದ್ದೇನು?

ಚಿಕ್ಕಮಗಳೂರು: ಡಿಸೆಂಬರ್​ 10ರಂದು ಚೆನ್ನೈನಿಂದ ತಿರುಚಿರಾಪಳ್ಳಿಗೆ ಹೋಗುತ್ತಿದ್ದ, ಇಂಡಿಗೋ 6E ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ಸಂಸದ ತೇಜಸ್ವಿ ಸೂರ್ಯ ತೆರೆದಿದ್ದು ಈಗ ಚರ್ಚೆಯ ವಿಷಯವಾಗಿದೆ. ವಿಮಾನದ ತುರ್ತು ನಿರ್ಗಮನ ದ್ವಾರ ತೆಗೆದಿದ್ದನ್ನು ಇಂಡಿಗೋ ಸಂಸ್ಥೆ ಸ್ಪಷ್ಟಪಡಿಸಿತ್ತು. ಹೀಗೆ ಬಾಗಿಲು ತೆಗೆದ ಪ್ರಯಾಣಿಕ ಕ್ಷಮೆ ಕೋರಿದ್ದಾರೆ ಎಂದೂ ಹೇಳಿತ್ತು. ಹಾಗೇ, ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಈ ಘಟನೆ ನಡೆದಿದ್ದು ಹೌದು ಎಂದಿದ್ದಾರೆ. ಆದರೆ ಯಾರೂ ತೇಜಸ್ವಿ ಸೂರ್ಯನ ಹೆಸರು ಹೇಳಿರಲಿಲ್ಲ. ಆದರೆ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆದಿದ್ದು ತೇಜಸ್ವಿ ಸೂರ್ಯನೇ ಎಂಬುದನ್ನು ಆ ವಿಮಾನದಲ್ಲಿದ್ದ ಕೆಲವರು ಖಚಿತ ಪಡಿಸಿದ್ದರು.

ಇದೀಗ ಈ ಬಗ್ಗೆ ಈತ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದಾರೆ. ಅಂದು ವಿಮಾನದಲ್ಲಿ ತೇಜಸ್ವಿ ಸೂರ್ಯ ಜತೆ ಅಣ್ಣಾಮಲೈ ಕೂಡ ಇದ್ದರು ಎಂದು ಹೇಳಲಾಗಿತ್ತು. ಈಗ ಅಣ್ಣಾಮಲೈ ಚಿಕ್ಕಮಗಳೂರಿನಲ್ಲಿ ಈ ಬಗ್ಗೆ ಹೇಳಿಕೆ ನೀಡಿ, ‘ತೇಜಸ್ವಿ ಸೂರ್ಯ ಬಾಗಿಲು ತೆರೆದಿಲ್ಲ. ಅದನ್ನು ತೆರೆಯಬೇಕು ಎಂದರೆ ಅದನ್ನು ತಿರುಗಿಸಿಯೇ ಓಪನ್​ ಮಾಡಬೇಕು. ಸಂಸದರು ಬುದ್ಧಿವಂತ, ಜವಾಬ್ದಾರಿ ಸ್ಥಾನದಲ್ಲಿ ಇದ್ದಾರೆ. ಅವರು ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆದಿಲ್ಲ. ಆ ತುರ್ತು ನಿರ್ಗಮನದ ದ್ವಾರದ ಸೀಟ್​​ನಲ್ಲಿಯೇ ತೇಜಸ್ವಿ ಸೂರ್ಯ ಕುಳಿತಿದ್ದರು.

ವಿಮಾನದ ಎಕ್ಸಿಟ್​ ಡೋರ್​​ನ ಬೀಡಿಂಗ್​ ಸ್ವಲ್ಪ ಓಪನ್​ ಆಗಿತ್ತು. ಅದನ್ನು ಗಗನಸಖಿಯರ ಗಮನಕ್ಕೆ ತಂದರು. ಪೈಲೆಟ್​ ಬಂದು ಅದನ್ನು ಗಟ್ಟಿಯಾಗಿ ಹಾಕಿದರು. ತೇಜಸ್ವಿ ಸೂರ್ಯ ತುರ್ತು ನಿರ್ಗಮನದ ಬಾಗಿಲನ್ನು ಪೂರ್ತಿಯಾಗಿ ಓಪನ್​ ಮಾಡಿಲ್ಲ. ಅವರು ಆ ಬಾಗಿಲ ಬೀಡಿಂಗ್​ ಸರಿಯಿಲ್ಲ ಎಂಬುದರ ಬಗ್ಗೆ ವಿಮಾನ ಸಿಬ್ಬಂದಿಗೆ ವರದಿ ಕೊಟ್ಟಿದ್ದಾರಷ್ಟೇ, ಆದರೆ ಕರ್ನಾಟಕ ಕಾಂಗ್ರೆಸ್​ಗೆ ಬೇರೆ ವಿಷಯ ಮಾತನಾಡಲು ಏನೂ ಇಲ್ಲದ ಕಾರಣಕ್ಕೆ, ಇದೇ ವಿಷಯವನ್ನು ದೊಡ್ಡದು ಮಾಡುತ್ತಿದ್ದಾರೆ’ ಎಂದು ಹೇಳಿದರು.

ಇನ್ನು ತೇಜಸ್ವಿ ಸೂರ್ಯ ಈ ಬಗ್ಗೆ ಏನನ್ನೂ ಮಾತನಾಡಲು ನಿರಾಕರಿಸಿದ್ದಾರೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಪ್ರಶ್ನೆ ಕೇಳಿದರೆ ಉತ್ತರಿಸುತ್ತೇನೆ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ. ಇನ್ನು ಇಂಡಿಗೋ ಸಂಸ್ಥೆ ಕೂಡ ಡಿಜಿಸಿಎಗೆ ದೂರು ನೀಡಿಲ್ಲ.

ಇದನ್ನೂ ಓದಿ: Air Travel : ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದ ಸಂಸದ ತೇಜಸ್ವಿ ಸೂರ್ಯ?: ಸುರಕ್ಷತಾ ಸೂಚನೆ ಉಲ್ಲಂಘನೆ ಆರೋಪ

Exit mobile version