Site icon Vistara News

Bandi Sanjay Kumar: ತೆಲಂಗಾಣ ಸಿಎಂ ಪದವಿ ಪ್ರಮಾಣ ಪತ್ರಕ್ಕಾಗಿ ಆಗ್ರಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್​ ಬಂಧನ

Telangana BJP President Bandi Sanjay Kumar Arrested In Late Night

#image_title

ತೆಲಂಗಾಣ ಬಿಜೆಪಿ ಅಧ್ಯಕ್ಷ, ಸಂಸದ ಬಂಡಿ ಸಂಜಯ್ ಕುಮಾರ್ (Bandi Sanjay Kumar)​ ಅವರನ್ನು ಮಂಗಳವಾರ ತಡರಾತ್ರಿ ಅವರ ನಿವಾಸದಲ್ಲೇ ಬಂಧಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಪದವಿ/ಸ್ನಾತಕೋತ್ತರ ಪದವಿ ಪ್ರಮಾಣ ಪತ್ರದ ವಿವಾದ ಎದ್ದ ಬೆನ್ನಲ್ಲೇ ಬಂಡಿ ಸಂಜಯ್ ಕುಮಾರ್ ಅವರು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್​ ಅವರ ಸ್ನಾತಕೋತ್ತರ ಪದವಿ ಪ್ರಮಾಣಪತ್ರಕ್ಕಾಗಿ ಆಗ್ರಹಿಸಿದ್ದರು. ಅದರ ಬೆನ್ನಲ್ಲೇ ಮಂಗಳವಾರ ತಡರಾತ್ರಿ ಕರೀಮ್​ ನಗರದಲ್ಲಿರುವ ಬಂಡಿ ಸಂಜಯ್​ ಕುಮಾರ್​ ಅವರ ಮನೆಗೆ ತೆರಳಿದ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

ತಡರಾತ್ರಿ 12.47ರ ಹೊತ್ತಿಗೆ ಬಂಡಿ ಸಂಜಯ್​ ಅವರ ಟ್ವಿಟರ್​ ಅಕೌಂಟ್​​ನಲ್ಲಿ, ಅವರ ಬಂಧನದ ದೃಶ್ಯಗಳನ್ನು ಪೋಸ್ಟ್ ಮಾಡಲಾಗಿದೆ. ಹಾಗೇ, ‘ಭಾರತ್​ ರಾಷ್ಟ್ರ ಸಮಿತಿ ಪಕ್ಷದಲ್ಲಿ ಭಯ ಮನೆ ಮಾಡಿದೆ. ಮೊದಲು ನಾನು ಸುದ್ದಿಗೋಷ್ಠಿ ನಡೆಸುವುದನ್ನು ತಪ್ಪಿಸಿದರು. ರಾತ್ರೋರಾತ್ರಿ ಬಂದು ಅರೆಸ್ಟ್ ಮಾಡಿದರು. ಬಿಆರ್​ಎಸ್​ ಸರ್ಕಾರ ಮಾಡುತ್ತಿರುವ ತಪ್ಪುಗಳನ್ನು ಪ್ರಶ್ನಿಸುತ್ತಿರುವುದೇ ನಾನು ಮಾಡುತ್ತಿರುವ ಪ್ರಮಾದ. ನಾನು ಜೈಲಿನಲ್ಲಿದ್ದರೂ ಸರಿ, ಬಿಆರ್​ಎಸ್​ ಪಕ್ಷದ ಭ್ರಷ್ಟಾಚಾರ, ತಪ್ಪುಗಳನ್ನು ಪ್ರಶ್ನಿಸುವುದನ್ನು ನಿಲ್ಲಿಸುವುದಿಲ್ಲ ಎಂದು ಕೂಡ ಟ್ವೀಟ್​ ಮಾಡಲಾಗಿದೆ. ‘ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್​, ಜೈ ತೆಲಂಗಾಣ’ ಎಂದೂ ಬರೆದಿದ್ದಾರೆ. ಏಪ್ರಿಲ್​ 8ರಂದು ತೆಲಂಗಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಡಲಿದ್ದಾರೆ. ಅದಕ್ಕೂ ಪೂರ್ವ ಬಿಜೆಪಿ ರಾಜ್ಯಾಧ್ಯಕ್ಷನ ಬಂಧನವಾಗಿದೆ.

ಬಂಡಿ ಸಂಜಯ್​ ಕುಮಾರ್ ಬಂಧನಕ್ಕೆಂದು ಪೊಲೀಸರು ಅವರ ಮನೆಗೆ ಬಂದ ಸಂದರ್ಭದಲ್ಲಿ ಹೈಡ್ರಾಮಾವೇ ನಡೆಯಿತು. ಅಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ಶುರು ಮಾಡಿದರು. ನೂಕುನುಗ್ಗಲು ಉಂಟಾಯಿತು. ಅವರನ್ನೆಲ್ಲ ನಿಯಂತ್ರಿಸಿ, ಬಂಡಿ ಸಂಜಯ್ ಅವರನ್ನು ಪೊಲೀಸರು ಅಕ್ಷರಶಃ ಎಳೆದುಕೊಂಡು ಹೋಗಿ, ವಾಹನದಲ್ಲಿ ಕೂರಿಸಿದ್ದಾರೆ. ಅವರನ್ನು ನಲ್ಗೊಂದಾ ಜಿಲ್ಲೆಯಲ್ಲಿರುವ ಬೊಮ್ಮಲ ರಾಮ್​ರಾಮ್​ ಪೊಲೀಸ್​ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಹೇಳಲಾಗಿದೆ.

ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿ!
ಬಂಡಿ ಸಂಜಯ್​ ಬಂಧನಕ್ಕೆ ನಿಖರ ಕಾರಣವನ್ನು ಪೊಲೀಸರು ಸ್ಪಷ್ಟವಾಗಿ ಇನ್ನೂ ಹೇಳಿಲ್ಲ. ಈ ಮಧ್ಯೆ ಬಿಜೆಪಿ ಐಟಿ ಸೆಲ್​ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿ ‘ತಡರಾತ್ರಿ ಕಾರ್ಯಾಚರಣೆ ನಡೆಸಿ, ತೆಲಂಗಾಣ ಪೊಲೀಸರು ಇಲ್ಲಿನ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಅವರನ್ನು ಬಂಧಿಸಿದ್ದಾರೆ. ಮಾಧ್ಯಮಿಕ ಶಾಲೆಯ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಅವರ ಕೈವಾಡವಿದೆ ಎಂಬ ಆರೋಪ ಹೊರೆಸಲಾಗಿದೆ. ಇಂಥ ಸುಳ್ಳು ಆರೋಪಗಳನ್ನು ನಾವು ಸಹಿಸುವುದಿಲ್ಲ. ಕೆಸಿಆರ್​ಗೆ ಖಂಡಿತ ಇದರಿಂದ ಒಳ್ಳೆಯಾಗುವುದಿಲ್ಲ’ ಎಂದಿದ್ದಾರೆ.

ತೆಲಂಗಾಣ ರಾಜ್ಯ ಸಾರ್ವಜನಿಕ ಸೇವಾ ಆಯೋಗ (TSPSC)ಮತ್ತು 10ನೇ ತರಗತಿ ಪ್ರಶ್ನೆ ಪತ್ರಿಕೆ ಲೀಕ್ ಆಗಿತ್ತು. ಇದಕ್ಕೆ ಸಿಎಂ ಕೆ.ಚಂದ್ರಶೇಖರ್ ರಾವ್​ ಅವರ ಸರ್ಕಾರವೇ ನೇರಹೊಣೆ ಎಂದು ಆರೋಪಿಸಿದ್ದ ಬಂಡಿ ಸಂಜಯ್ ಕುಮಾರ್​, ‘ಇದರಲ್ಲಿ ನೇರ ಪ್ರಭಾವ ಇರುವುದು ಮುಖ್ಯಮಂತ್ರಿ ಕೆಸಿಆರ್​ ಮತ್ತು ಅವರ ಪುತ್ರ ಕೆಟಿಆರ್​ ಅವರೇ ಹೊಣೆ. ಹೀಗಾಗಿ ಅವರಿಬ್ಬರೂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು. ಇದೀಗ ಅದೇ ಆರೋಪದಡಿ ಬಂಡಿ ಸಂಜಯ್ ಅವರನ್ನೇ ಬಂಧಿಸಲಾಗಿದೆ ಎನ್ನಲಾಗಿದೆ.

Exit mobile version