ತೆಲಂಗಾಣ: ಮಾಧ್ಯಮಿಕ ಶಾಲಾ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಹೊರೆಸಿ ಬಂಧಿಸಲಾಗಿದ್ದ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ (Bandi Sanjay released)ಗೆ ಜಾಮೀನು ಸಿಕ್ಕಿದ್ದು, ಕರೀಮ್ನಗರ ಜಿಲ್ಲಾ ಕಾರಾಗೃಹದಿಂದ ಅವರು ಶುಕ್ರವಾರ ಬಿಡುಗಡೆಯಾಗಿದ್ದಾರೆ. ಜೈಲಿಂದ ಬಿಡುಗಡೆಯಾಗುತ್ತಿದ್ದಂತೆ ಬಂಡಿ ಸಂಜಯ್ ಅವರು ಸೀದಾ ಒಂದು ದೇವಸ್ಥಾನಕ್ಕೆ ಹೋಗಿ, ದೇವರಿಗೆ ಕೈಮುಗಿದು ಪೂಜೆ-ಪ್ರಾರ್ಥನೆ ಸಲ್ಲಿಸಿದ್ದಾರೆ. ಅಲ್ಲಿಂದ ಮನೆಗೆ ಹೋಗಿದ್ದಾರೆ.
ಮಂಗಳವಾರ ತಡರಾತ್ರಿ ಕರೀಮ್ನಗರದಲ್ಲಿರುವ ಬಂಡಿ ಸಂಜಯ್ಕುಮಾರ್ ಮನೆಗೆ ತೆರಳಿದ್ದ ಪೊಲೀಸರು, ಅವರನ್ನು ಬಂಧಿಸಿದ್ದರು. ಈ ವೇಳೆ ಹೈಡ್ರಾಮಾವೇ ಸೃಷ್ಟಿಯಾಗಿತ್ತು. ನೂರಾರು ಕಾರ್ಯಕರ್ತರು ಬಂಡಿ ಸಂಜಯ್ ಮನೆಯ ಬಳಿ ಜಮಾಯಿಸಿ ಪ್ರತಿಭಟನೆ ಮಾಡಿದ್ದರು. ಪೊಲೀಸರು ಸಂಜಯ್ ಕುಮಾರ್ ಅವರನ್ನು ಎತ್ತಿಕೊಂಡು ಹೋಗಿ ವಾಹನದೊಳಗೆ ಕೂರಿಸಿದ್ದರು. ಕೆಲವೇ ದಿನಗಳ ಹಿಂದೆ ಸಂಜಯ್ ಕುಮಾರ್ ಅವರು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಸ್ನಾತಕೋತ್ತರ ಪದವಿ ಪ್ರಮಾಣಪತ್ರಕ್ಕಾಗಿ ಆಗ್ರಹಿಸಿದ್ದರು. ಅಷ್ಟೇ ಅಲ್ಲ, ತೆಲಂಗಾಣ ರಾಜ್ಯ ಸಾರ್ವಜನಿಕ ಸೇವಾ ಆಯೋಗ (TSPSC)ಮತ್ತು 10ನೇ ತರಗತಿ ಪ್ರಶ್ನೆ ಪತ್ರಿಕೆ ಲೀಕ್ ಆಗಲು ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಸರ್ಕಾರವೇ ನೇರಹೊಣೆ ಎಂದು ಆರೋಪಿಸಿದ್ದರು. ಅದರ ಬೆನ್ನಲ್ಲೇ, ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್ನ್ನು ಸಂಜಯ್ಕುಮಾರ್ ಮೇಲೆಯೇ ಹೊರಿಸಿ, ಅವರನ್ನು ಅರೆಸ್ಟ್ ಮಾಡಲಾಗಿತ್ತು.
ಬಂಧನದ ಬಳಿಕ ಬಂಡಿ ಸಂಜಯ್ ಅವರನ್ನು ವಾರಾಂಗಲ್ನಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಜಾಮೀನಿಗಾಗಿ ಅವರೂ ಕೂಡ ಅರ್ಜಿ ಸಲ್ಲಿಸಿದ್ದರು. ಇದೀಗ ಅವರಿಗೆ 20 ಸಾವಿರ ರೂಪಾಯಿ ಶ್ಯೂರಿಟಿ ಬಾಂಡ್ ನೀಡುವ ಜತೆ, ಜಾಮೀನು ಮಂಜೂರು ಮಾಡಿದೆ. ಹಾಗೇ, ‘ದೇಶ ತೊರೆಯುವಂತಿಲ್ಲ, ತನಿಖೆಗೆ ಸಂಪೂರ್ಣವಾಗಿ ಸಹಕರಿಸಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕುವಂತಿಲ್ಲ’ ಎಂಬಿತ್ಯಾದಿ ಷರತ್ತು ವಿಧಿಸಿದೆ.
ಇದನ್ನೂ ಓದಿ: Bandi Sanjay Kumar: ತೆಲಂಗಾಣ ಸಿಎಂ ಪದವಿ ಪ್ರಮಾಣ ಪತ್ರಕ್ಕಾಗಿ ಆಗ್ರಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಬಂಧನ
ಅಮಿತ್ ಶಾ ಕರೆ
ಬಂಡಿ ಸಂಜಯ್ ಕುಮಾರ್ ಅವರು ಕರೀಮ್ನಗರ ಲೋಕಸಭಾ ಕ್ಷೇತ್ರದ ಸಂಸದ. ಮಂಗಳವಾರ ಮೊದಲು ಅವರನ್ನು ಪೊಲೀಸರು ವಶಕ್ಕೆ ಪಡೆದರು. ಆದರೆ ನಂತರ ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್ನಲ್ಲಿ ಪ್ರಮುಖ ಆರೋಪಿ ಎಂದು ಕೇಸ್ ದಾಖಲಿಸಿ, ಬಂಧಿಸಿ ಜಿಲ್ಲಾ ಕಾರಾಗೃಹದಲ್ಲಿ ಇಡಲಾಗಿತ್ತು. ‘ಕೆಸಿಆರ್ ಸರ್ಕಾರದ ದೋಷ, ತಪ್ಪುಗಳನ್ನು ನಾನು ಎತ್ತಿ ತೋರಿಸುವ ಕಾರಣಕ್ಕೇ ನನ್ನನ್ನು ಬಂಧಿಸಲಾಗಿದೆ’ ಎಂದು ಬಂಡಿ ಸಂಜಯ್ ಟ್ವೀಟ್ ಮಾಡಿದ್ದರು. ಇಂದು ಅವರು ಬಿಡುಗಡೆಯಾಗುತ್ತಿದ್ದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಸ್ಮೃತಿ ಇರಾನಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಇತರ ಗಣ್ಯರು ಕರೆ ಮಾಡಿ ವಿಚಾರಿಸಿದ್ದಾರೆ ಎಂದು ವರದಿಯಾಗಿದೆ.