ಹೈದರಾಬಾದ್: ತೆಲಂಗಾಣದ ಎಲ್ಲ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯವರೆಗೆ ದ್ವಿತೀಯ ಭಾಷೆಯಾಗಿ ತೆಲುಗು ಭಾಷೆಯನ್ನು ಕಲಿಸುವುದನ್ನು ಕಡ್ಡಾಯಗೊಳಿಸಿ ತೆಲಂಗಾಣ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರಿ ಶಾಲೆಗಳಿಗೆ ಮಾತ್ರವಲ್ಲದೆ, ಖಾಸಗಿ ಶಾಲೆಗಳಿಗೂ ಈ ಆದೇಶ ಅನ್ವಯವಾಗಲಿದೆ. ಸಿಬಿಎಸ್‌ಇ, ಐಸಿಎಸ್‌ಇ, ಐಬಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಬೋರ್ಡ್‌ಗಳಲ್ಲಿ ನೊಂದಾಯಿಸಲ್ಪಟ್ಟಿರುವ ಎಲ್ಲ ಶಾಲೆಗಳಲ್ಲಿಯೂ ದ್ವಿತೀಯ ಭಾಷೆಯಾಗಿ ತೆಲುಗು ಕಲಿಸುವುದು ಕಡ್ಡಾಯ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ತೆಲಂಗಾಣ (ಶಾಲೆಗಳಲ್ಲಿ ಕಡ್ಡಾಯ ತೆಲುಗು ಭಾಷಾ ಶಿಕ್ಷಣ) ಕಾಯ್ದೆ-2018ರ ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದ್ದು, ತೆಲುಗು ಭಾಷೆ ಕಲಿಸದ ಶಾಲೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತೆಲಂಗಾಣ ಶಿಕ್ಷಣ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಶಿಕ್ಷಣ ಇಲಾಖೆಯು ಈಗಾಗಲೇ ತೆಲುಗು ಮಾತೃಭಾಷೆಯಾಗಿರುವ ವಿದ್ಯಾರ್ಥಿಗಳಿಗೆ ಒಂದು, ತೆಲುಗು ಮಾತೃಭಾಷೆಯಲ್ಲದ ವಿದ್ಯಾರ್ಥಿಗಳಿಗೆ ಇನ್ನೊಂದು ಎಂದು ಎರಡು ಸೆಟ್ ಪಠ್ಯಪುಸ್ತಕವನ್ನು ಸಿದ್ಧಪಡಿಸಿಟ್ಟಿದ್ದು, ಇದೇ ಶೈಕ್ಷಣಿಕ ಸಾಲಿನಿಂದಲೇ ಈ ಆದೇಶವನ್ನು ಜಾರಿಗೆ ತರಲು ಸಿದ್ಧತೆ ಮಾಡಿಕೊಂಡಿದೆ.
2017ರಲ್ಲಿ ನಡೆದ ವಿಶ್ವ ತೆಲುಗು ಸಮ್ಮೇಳನದಲ್ಲಿ ಈ ಕುರಿತು ನಿರ್ಣಯ ತೆಗೆದುಕೊಳ್ಳಲಾಗಿತ್ತು. ಈ ಸಂಬಂಧ 2018ರಲ್ಲಿಯೇ ಕಾಯ್ದೆ ರೂಪಿಸಲಾಗಿತ್ತು. 2019ರಿಂದ ಹಂತ ಹಂತವಾಗಿ ಈ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದ್ದು, ಈಗ ಅಂತಿಮವಾಗಿ 1 ರಿಂದ 10ನೇ ತರಗತಿಯವರೆಗೆ ತೆಲುಗು ಕಲಿಕೆಯನ್ನು ಕಡ್ಡಾಯಗೊಳಿಸಲಾಗಿದೆ.
ಇದನ್ನೂ ಓದಿ| ಮಾಂಟೆಸ್ಸರಿ ಸ್ಕೂಲ್ ಆನ್ ವೀಲ್ಸ್, ಇದು ಬಡಮಕ್ಕಳ ಪಾಲಿಗೆ ಪ್ರೀತಿಯ ಅರಮನೆ!