ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ಸಿದ್ಧವಾಗುತ್ತಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಇದೀಗ ವಿಶೇಷವಾಗಿ ಅಯೋಧ್ಯೆಯಲ್ಲಿ ದೇವಸ್ಥಾನಗಳ ವಸ್ತು ಸಂಗ್ರಹಾಲಯವನ್ನೂ (Temple Museum ) ನಿರ್ಮಿಸಲು ನಿರ್ಧರಿಸಲಾಗಿದೆ. ಭಾರತೀಯ ದೇವಾಲಯಗಳ ವಾಸ್ತುಶಿಲ್ಪದ ಪರಂಪರೆ ಮತ್ತು ವೈಜ್ಞಾನಿಕ ಅಂಶಗಳನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಈ ವಸ್ತು ಪ್ರದರ್ಶನಾಲಯವನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ.
ಉತ್ತರ ಪ್ರದೇಶದ ಸರ್ಕಾರ ಈ ಯೋಜನೆಗೆ ಕೈ ಹಾಕಿದೆ. ವರದಿಗಳ ಪ್ರಕಾರ ರಾಜ್ಯದ ಪ್ರವಾಸೋದ್ಯಮ ಇಲಾಖೆ ಈಗಾಗಲೇ ಇದರ ಕೆಲಸ ಪ್ರಾರಂಭಿಸಿದ್ದು, ಶೀಘ್ರದಲ್ಲೇ ವಸ್ತುಸಂಗ್ರಹಾಲಯದ ಕಟ್ಟಡಕ್ಕೆ ಸಂಬಂಧಿಸಿದಂತೆ ವಿವರವಾದ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಿದೆ.
ಇದನ್ನೂ ಓದಿ: Viral video: ವಿಚಾರಣೆಗೆ ತೆರಳಿದ ಪೊಲೀಸರ ಮೇಲೆ ಬೆಂಕಿ ಎಸೆದು ಕೋಲಾಹಲ ಸೃಷ್ಟಿಸಿದ ಮಹಿಳೆ!
ಭಾರತದಲ್ಲಿರುವ ದೇವಾಲಯಗಳ ವಾಸ್ತುಶಿಲ್ಪದ ವೈಭವವು ಪ್ರಪಂಚದಾದ್ಯಂತದ ಜನರನ್ನು ಆಕರ್ಷಿಸಿದೆ. ಹಾಗೆಯೇ ದೇವಾಲಯಗಳು ಸಂಸ್ಕೃತಿಯ ಅಭಿವ್ಯಕ್ತಿಗಳಾಗಿವೆ. ಇದನ್ನು ಗಮನದಲ್ಲಿಟ್ಟುಕೊಂಡು, ಉತ್ತರ ಪ್ರದೇಶ ಸರ್ಕಾರವು ಈ ದೇವಾಲಯದ ವಸ್ತುಸಂಗ್ರಹಾಲಯವನ್ನು ನಿರ್ಮಿಸಲು ಮುಂದಾಗಿದೆ. ಇದು ಜಗತ್ತಿನಾದ್ಯಂತ ಭಾರತೀಯ ದೇವಾಲಯಗಳ ಬಹುಮುಖಿ ಪರಿಕಲ್ಪನೆಗಳನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ. ನಿರ್ದಿಷ್ಟ ಸ್ಥಳಗಳಲ್ಲಿ ದೇವಾಲಯ ನಿರ್ಮಾಣದ ಹಿಂದಿನ ತಾರ್ಕಿಕತೆಯನ್ನು ಯುವ ಪೀಳಿಗೆಗೆ ಈ ವಸ್ತು ಸಂಗ್ರಹಾಲಯ ಹೇಳಿ ಕೊಡಲಿದೆ ಎನ್ನಲಾಗಿದೆ.
ವರದಿಗಳ ಪ್ರಕಾರ ಈ ದೇವಸ್ಥಾನಗಳ ವಸ್ತು ಸಂಗ್ರಹಾಲಯವು 12 ವಿಭಿನ್ನ ಗ್ಯಾಲರಿಗಳನ್ನು ಹೊಂದಿರಲಿದೆ. ಅವುಗಳಲ್ಲಿ ಸನಾತನ ಧರ್ಮದಲ್ಲಿ ದೇವರ ಪರಿಕಲ್ಪನೆ, ಆರಾಧನಾ ವಿಧಾನಗಳ ಮೂಲ ತತ್ವಗಳು, ಆಚರಣೆಗಳನ್ನು ನಿರ್ವಹಿಸಲು ದೇವಾಲಯಗಳ ಅಗತ್ಯತೆ, ವಾಸ್ತುಶಿಲ್ಪದ ಕೌಶಲ್ಯ ಮತ್ತು ಕರಕುಶಲತೆ, ತತ್ವಶಾಸ್ತ್ರದ ಆಧಾರವಾಗಿರುವ ಆಚರಣೆಗಳು, ದೇವಾಲಯಗಳ ಆರಾಧನೆಯನ್ನು ಮೀರಿದ ವಿಶಾಲವಾದ ಸಾಮಾಜಿಕ ಪ್ರಾಮುಖ್ಯತೆಯಂತಹ ವಿಷಯಗಳನ್ನು ಪ್ರತಿನಿಧಿಸಲಾಗುವುದು. ಈ ಗ್ಯಾಲರಿಗಳನ್ನು ಹೊರತಾಗಿ ವಸ್ತು ಸಂಗ್ರಹಾಲಯದಲ್ಲಿ ಉದ್ಯಾನವನ, ಕೆಫೆಟೇರಿಯಾ, ಸರೋವರ ಮತ್ತು ನೆಲಮಾಳಿಗೆ ಪಾರ್ಕಿಂಗ್ ಇರಲಿದೆ ಎನ್ನಲಾಗಿದೆ.