Site icon Vistara News

Terror Activities: ಉಗ್ರರ ಬೇಟೆಗೆ 500ಕ್ಕೂ ಹೆಚ್ಚು ಪ್ಯಾರಾ ಕಮಾಂಡೋಗಳು ಗಡಿಯಲ್ಲಿ ಸಜ್ಜು

terror activities

ಶ್ರೀನಗರ: ಜಮ್ಮು-ಕಾಶ್ಮೀರದ (Jammu Kashmir) ದೋಡಾ ಜಿಲ್ಲೆಯಲ್ಲಿ ಯೋಧರು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ (Doda Encounter) ಒಬ್ಬ ಅಧಿಕಾರಿ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಇದರ ಬೆನ್ನಲ್ಲೇ ಉಗ್ರರನ್ನು(Terror Activities) ಮಟ್ಟ ಹಾಕುವ ಪಣ ತೊಟ್ಟಿರುವ ಭಾರತೀಯ ಸೇನೆ 500 ಕ್ಕೂ ಹೆಚ್ಚು ಪ್ಯಾರಾ ಕಮಾಂಡೋಗಳನ್ನು ಜಮ್ಮುವಿನಲ್ಲಿ ನಿಯೋಜಿಸಿದೆ. ಈ ಪ್ಯಾರಾ ಕಮಾಂಡೋಗಳು(Para Commandos) ಪಾಕಿಸ್ತಾನಿ ಮೂಲದ ಉಗ್ರರ ಬೇಟೆಯಲ್ಲಿ ತೊಡಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶದಲ್ಲಿ ಕೆಲವು ದಿನಗಳಿಂದ ಉಗ್ರರ ಉಪಟಳ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದರ ಹಿಂದೆ ಒಂದರಂತೆ ನಿರಂತರ ದಾಳಿಗಳು ನಡೆಯುತ್ತಲೇ ಇವೆ. ಈ ಪ್ರದೇಶದಲ್ಲಿ 50-55 ಉಗ್ರರು ಬೀಡು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಈ ಪ್ರದೇಶಗಳಲ್ಲಿ ಸೇನೆ ಭದ್ರತೆಯನ್ನು ಹೆಚ್ಚಿಸಿದೆ. ಇನ್ನು ಕಳೆದ ವಾರದಿಂದ ನಡೆಯುತ್ತಿರುವ ಉಗ್ರರ ದಾಳಿ ಹಿಂದೆ ಪಾಕಿಸ್ತಾನ ನಿವೃತ ಸೈನಿಕರು ಅಥವಾ ಸೇನಾ ತರಬೇತಿ ಇರುವ ಉಗ್ರರ ಕೈವಾಡ ಇರುವ ಬಗ್ಗೆ ಭಾರತೀಯ ಗುಪ್ತಚರ ಇಲಾಖೆ(Intelligence Bureau) ಶಂಕೆ ವ್ಯಕ್ತಪಡಿಸಿದೆ.

ಬೈನಾಕ್ಯುಲರ್ ಅಳವಡಿಸಲಾಗಿರುವ M-4 US ಕಾರ್ಬೈನ್‌ಗಳು, ಚೈನೀಸ್ ಸ್ಟೀಲ್ ಕೋರ್ ಬುಲೆಟ್‌ಗಳು ಮತ್ತು ನಿಖರವಾದ ಗುಂಡಿನ ದಾಳಿಯನ್ನು ಗಮನಿಸಿದರೆ ಈ ಪ್ರದೇಶದಲ್ಲಿ ಇತ್ತೀಚಿನ ದಾಳಿಗಳಲ್ಲಿ ಭಾಗಿಯಾಗಿರುವ ಭಯೋತ್ಪಾದಕರು ನಿವೃತ್ತ ಪಾಕಿಸ್ತಾನ ಸೇನೆಯ ವಿಶೇಷ ಸೇವಾ ಗುಂಪಿನ (SSG) ಸೇರಿದವರಾಗಿರಬಹುದು ಅಥವಾ ಗೆರಿಲ್ಲಾ ಯುದ್ಧದಲ್ಲಿ ಚೆನ್ನಾಗಿ ತರಬೇತಿ ಪಡೆದ ಭಯೋತ್ಪಾದಕರಾಗಿರಬಹುದು ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.

ಹೆಸರು ಹೇಳಲು ನಿರಾಕರಿಸಿದ ಹಿರಿಯ ಪೊಲೀಸ್ ಅಧಿಕಾರಿ ಕೂಡ ಗುಪ್ತಚರ ಸಂಸ್ಥೆಗಳ ಹೇಳಿಕೆಗಳನ್ನು ದೃಢಪಡಿಸಿದ್ದಾರೆ. ಎಂ4 ಕಾರ್ಬೈನ್ ಮತ್ತು ಚೈನೀಸ್ ಸ್ಟೀಲ್ ಕೋರ್ ಬುಲೆಟ್‌ಗಳನ್ನು ಪಾಕಿಸ್ತಾನಿ ಭಯೋತ್ಪಾದಕರು ಮೊದಲು ಬಳಸಿದ್ದು, ಏಪ್ರಿಲ್ 20, 2023 ರಂದು. ಪೂಂಚ್‌ನ ತೋಟಾ ಗಲಿ ಪ್ರದೇಶದಲ್ಲಿ ಸೇನಾ ಟ್ರಕ್‌ನ ಮೇಲೆ ನಡೆಸಲಾದ ದಾಳಿಯಲ್ಲಿ ಐವರು ಸೈನಿಕರು ಹುತಾತ್ಮರಾಗಿದ್ದರು.

ಭಯೋತ್ಪಾದಕರಲ್ಲಿ ಕೆಲವು ಪಾಕ್ ಸೇನೆಯ ಮಾಜಿ ಅಧಿಕಾರಿಗಳು ಇದ್ದಾರೆ ಎಂಬುದನ್ನು ನಾವು ಖಚಿತವಾಗಿ ಖಚಿತಪಡಿಸಲು ಸಾಧ್ಯವಾಗದಿದ್ದರೂ, ಜಮ್ಮುವಿನಲ್ಲಿ ಇತ್ತೀಚಿನ ದಾಳಿಗಳಲ್ಲಿ ಭಯೋತ್ಪಾದಕರು ಬಳಸುತ್ತಿರುವ ಗೆರಿಲ್ಲಾ ಯುದ್ಧ ತಂತ್ರಗಳು ಅವರು ಬಂದೂಕುಗಳನ್ನು ಹೊತ್ತೊಯ್ಯುವ ಶೈಲಿ ಇವೆಲ್ಲವೂ ಸಾಮಾನ್ಯ ಉಗ್ರರಂತೆ ಕಾಣುತ್ತಿಲ್ಲ ಎಂದು ಹೇಳಲಾಗಿದೆ.

ಅವರು ಪಾಕ್ ಸೇನೆಯ ಮಾಜಿ ಯೋಧರು ಅಥವಾ ಗೆರಿಲ್ಲಾ ಯುದ್ಧದಲ್ಲಿ ಚೆನ್ನಾಗಿ ತರಬೇತಿ ಪಡೆದ ಭಯೋತ್ಪಾದಕರು ಎಂದು ತೋರುತ್ತದೆ. ನಾವು ದಟ್ಟವಾದ ಕಾಡಿನಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ ಯುದ್ಧ-ಕಠಿಣ ಭಯೋತ್ಪಾದಕರನ್ನು ಎದುರಿಸುತ್ತಿದ್ದೇವೆ ಎಂದು ಸೇನೆಯ ಮೂಲ ಹೇಳಿದೆ.

ದೋಡಾ ಜಿಲ್ಲೆಯ ದೇಸಾ ಎಂಬ ಪ್ರದೇಶದ ಅರಣ್ಯದಲ್ಲಿ ಉಗ್ರರು ಅಡಗಿರುವ ಕುರಿತು ನಿಖರ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿಯು ಸೋಮವಾರ (ಜುಲೈ 16) ರಾತ್ರಿಯೇ ಕಾರ್ಯಾಚರಣೆ ಆರಂಭಿಸಿದ್ದರು. ಉಗ್ರರಿಗಾಗಿ ನಡೆದ ಕಾರ್ಯಾಚರಣೆ ವೇಳೆ ಭಯೋತ್ಪಾದಕರು ಯೋಧರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾರೆ. ಇದೇ ವೇಳೆ ಯೋಧರು ಕೂಡ ಗುಂಡಿನ ದಾಳಿ ಆರಂಭಿಸಿದ್ದಾರೆ. ರಾತ್ರೋರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದರು.

ಇದನ್ನೂ ಓದಿ: Bangladesh Protests: ಬಾಂಗ್ಲಾದಲ್ಲಿ ಹಿಂಸಾಚಾರ ಉಲ್ಬಣ, 105 ಸಾವು; 300 ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ

Exit mobile version