ಶ್ರೀನಗರ: ಕಾಶ್ಮೀರಿ ಪಂಡಿತ ಸಮುದಾಯಕ್ಕೆ ‘ಕಾಶ್ಮೀರ ಫೈಟ್’ ಎಂಬ ಉಗ್ರಸಂಘಟನೆ ಮತ್ತೊಮ್ಮೆ ಬೆದರಿಕೆ ಹಾಕಿದೆ. ನಿಮ್ಮ ಪುನರ್ವಸತಿ ಕಾಲೋನಿಗಳನ್ನೆಲ್ಲ ಸ್ಮಶಾನಗಳನ್ನಾಗಿ ಪರಿವರ್ತಿಸುತ್ತೇವೆ ಎಂದು ಆ ಉಗ್ರಸಂಘಟನೆ ಪತ್ರ ಬರೆದಿದೆ.
ಕಾಶ್ಮೀರಿ ಪಂಡಿತ್ ಸಮುದಾಯದ ಸರ್ಕಾರಿ ಉದ್ಯೋಗಿಗಳಿಗಾಗಿ ಜಮ್ಮು-ಕಾಶ್ಮೀರ ಆಡಳಿತದಿಂದ ಬಾರಾಮುಲ್ಲಾ, ಬಂಡಿಪೋರಾ ಸೇರಿ ವಿವಿಧೆಡೆ ಪುನರ್ವಸತಿ ಕಾಲೋನಿಗಳನ್ನು ನಿರ್ಮಿಸಲಾಗುತ್ತಿದೆ. ಈ ವಸತಿ ಕಟ್ಟಡಗಳ ಕಾಮಗಾರಿ ಇನ್ನೂ ನಿರ್ಮಾಣ ಹಂತದಲ್ಲಿದೆ. ಈ ಮಧ್ಯೆ ಬಂಡಿಪೋರಾ ಜಿಲ್ಲೆಯ ಒಡಿನಾ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಕಾಶ್ಮೀರಿ ಪಂಡಿತ್ ಸರ್ಕಾರಿ ಉದ್ಯೋಗಿಗಳ ಪುನರ್ವಸತಿ ಕಾಲೋನಿಗೆ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಭೇಟಿಯಾಗಿ ಸ್ಥಳ ಪರಿಶೀಲನೆ ನಡೆಸಿದ್ದರು. ಅದರ ಬೆನ್ನಲ್ಲೇ ಭಯೋತ್ಪಾದಕರು ಬೆದರಿಕೆ ಪತ್ರ ಕಳಿಸಿದ್ದಾರೆ.
ಕಾಶ್ಮೀರಿ ಪಂಡಿತ್ ಸಮುದಾಯದವರನ್ನು ಪಿಎಂ ಪ್ಯಾಕೇಜ್ಗಳ ಬಲಿಪಶುಗಳು ಎಂದು ಕರೆದಿರುವ ಭಯೋತ್ಪಾದಕ ಸಂಘಟನೆ, ನೀವು ನಿಮ್ಮ ಪುನರ್ವಸತಿ ಕೇಂದ್ರದಲ್ಲಿ ಸುಖವಾಗಿ ಬದುಕಬಹುದು ಎಂದು ಕನಸು ಕಾಣಬೇಡಿ ಎಂದು ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲ, ಕಾಶ್ಮೀರಿ ಪಂಡಿತರಿಗಾಗಿ ಕಾಲೋನಿಗಳನ್ನು ನಿರ್ಮಾಣ ಮಾಡುವ ಜವಾಬ್ದಾರಿ ಹೊತ್ತ ಗುತ್ತಿಗೆದಾರರಿಗೂ ಹತ್ಯೆ ಬೆದರಿಕೆ ಹಾಕಿದೆ.
ಕಾಶ್ಮೀರದಲ್ಲಿ ಭಯೋತ್ಪಾದಕರು ನಾಗರಿಕರನ್ನು ಗುರಿಯಾಗಿಸಿಕೊಂಡು ಟಾರ್ಗೆಟ್ ಮಾಡುವ ಪ್ರಮಾಣ ಹೆಚ್ಚಿದೆ. ಪದೇಪದೆ ಕಾಶ್ಮೀರಿ ಪಂಡಿತ್ ಸಮುದಾಯಕ್ಕೆ ಬೆದರಿಕೆಯನ್ನೂ ಹಾಕುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಈ ಸಮುದಾಯದ 9 ಮಂದಿ ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದಾರೆ. ಅದರಲ್ಲೂ ಸರ್ಕಾರಿ ಉದ್ಯೋಗಿಗಳೇ ಇವರ ಟಾರ್ಗೆಟ್.
ಇದನ್ನೂ ಓದಿ: ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಹತ್ಯೆ; ಎಲ್ಲೆಡೆ ಪ್ರತಿಭಟನೆ, ಬಿಜೆಪಿ ವಿರುದ್ಧ ಆಕ್ರೋಶ