ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿರುವ ಆರ್ಎಸ್ಎಸ್ ಪ್ರಮುಖರು ಹಾಗೂ ಹಲವು ಕಾರ್ಯಕರ್ತರಿಗೆ ಸ್ಥಳೀಯ ಭಯೋತ್ಪಾದಕ ಸಂಘಟನೆಯಾಗಿರುವ (ಲಷ್ಕರೆ ತೊಯ್ಬಾದ ಅಂಗಸಂಸ್ಥೆ)‘ದಿ ರೆಸಿಸ್ಟನ್ಸ್ ಫ್ರಂಟ್ (ಟಿಆರ್ಎಫ್)’ ಬೆದರಿಕೆ ಒಡ್ಡಿದೆ. ಹಾಗೇ, ಆರ್ಎಸ್ಎಸ್ನ 30 ಪ್ರಮುಖರ ಪಟ್ಟಿ ಬಿಡುಗಡೆ ಮಾಡಿದ್ದು, ಇವರೆಲ್ಲರನ್ನೂ ಟಾರ್ಗೆಟ್ ಮಾಡಿದ್ದಾಗಿ ಟಿಆರ್ಎಫ್ ಹೇಳಿಕೊಂಡಿದೆ. ಜಮ್ಮು ಕಾಶ್ಮೀರದ ಆರ್ಎಸ್ಎಸ್ ಉಪಾಧ್ಯಕ್ಷರಾದ ಸಂಗೀತಾ ಆನಂದ್, ಕರುಣಾ ಚೆಟ್ರಿ, ಎಸ್ಟಿ ಮೋರ್ಚಾದ ಕಾರ್ಯದರ್ಶಿ ಮೊಹಮ್ಮದ್ ಹರೂನ್ ಸೇರಿ ಒಟ್ಟು 30 ಪ್ರಮುಖರು ಟಿಆರ್ಎಫ್ನ ಟಾರ್ಗೆಟ್ ಪಟ್ಟಿಯಲ್ಲಿ ಇದ್ದಾರೆ. ‘ನಿಮ್ಮ ರಕ್ತವನ್ನು ಹರಿಸದೆ ಬಿಡುವುದಿಲ್ಲ’ ಎಂದು ಈ ಆರ್ಎಸ್ಎಸ್ ನಾಯಕರಿಗೆ ಬೆದರಿಕೆ ಹಾಕಲಾಗಿದೆ.
ಏಪ್ರಿಲ್ 1ರಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಯುವ ಕ್ರಾಂತಿಕಾರಿ ಹೇಮು ಕಲಾನಿ ಜಯಂತಿ ಹಿನ್ನೆಲೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ ಅಲ್ಲಿನ ಜನರು ಸಂತೋಷವಾಗಿಲ್ಲ. ಭಾರತದಿಂದ ಪಾಕಿಸ್ತಾನ ವಿಭಜನೆಯಾಗಿದ್ದು ಇತಿಹಾಸದಲ್ಲಿ ನಡೆದ ದೊಡ್ಡ ಪ್ರಮಾದ ಎಂಬ ಭಾವ ಅವರಲ್ಲಿ ಈಗಲೂ ಇದೆ’ ಎಂದು ಹೇಳಿದ್ದರು. ‘ಅಂದು ಇದ್ದ ಅಖಂಡ ಭಾರತ ಸತ್ಯ. ಆದರೆ ವಿಭಜಿತ ಭಾರತ ಒಂದು ದುಃಸ್ವಪ್ನ’ ಎಂದೂ ತಿಳಿಸಿದ್ದರು.
1947ರಲ್ಲಿ ನಡೆದ ವಿಭಜನೆಗೂ ಮೊದಲು ಅಖಂಡ ಭಾರತ ಇತ್ತು. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ, ಟಿಬೆಟ್ಗಳೆಲ್ಲ ಭಾರತದ್ದೇ ಭಾಗವಾಗಿದ್ದವು. 1947ರಲ್ಲಿ ಎಲ್ಲವೂ ಛಿದ್ರವಾಯಿತು. ಹೀಗೆ ಅಖಂಡ ಭಾರತದಿಂದ ವಿಭಜಿತವಾಗಿ ಹೋದ ಸ್ಥಳಗಳಲ್ಲಿ ಜನರು ಇಂದು ನಿಜಕ್ಕೂ ಸಂತೋಷವಾಗಿದ್ದಾರಾ?’ ಎಂದು ಮೋಹನ್ ಭಾಗವತ್ ಪ್ರಶ್ನಿಸಿದ್ದರು. ಮೋಹನ್ ಭಾಗವತ್ ಭಾಷಣದ ಬೆನ್ನಲ್ಲೇ ಜಮ್ಮು-ಕಾಶ್ಮೀರದಲ್ಲಿ ಆರ್ಎಸ್ಎಸ್ ಪ್ರಮುಖರಿಗೆ ಜೀವ ಬೆದರಿಕೆ ಬಂದಿದೆ.