ಶ್ರೀನಗರ: ಸದ್ಯ ಕಾಶ್ಮೀರ ಕಣಿವೆಯಲ್ಲಿ 81 ಮಂದಿ ಉಗ್ರರು ಸಕ್ರಿಯರಾಗಿದ್ದಾರೆ. ಅದರಲ್ಲಿ ಸ್ಥಳೀಯ ಉಗ್ರರು 29 ಮಂದಿ ಮತ್ತು ವಿದೇಶಿ ಉಗ್ರರು 52 ಜನರು ಎಂದು ಕಾಶ್ಮೀರ ವಲಯದ ಹೆಚ್ಚುವರಿ ಡಿಜಿಪಿ ವಿಜಯ್ಕುಮಾರ್ ಶನಿವಾರ ತಿಳಿಸಿದ್ದಾರೆ. ಹಾಗೇ, ಕಾಶ್ಮೀರದಲ್ಲಿ ಸ್ಥಳೀಯ ಉಗ್ರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವ ಬಗ್ಗೆ ಮಾಹಿತಿ ನೀಡಿದ ಅವರು ‘ಕಾಶ್ಮೀರದಲ್ಲಿ ಸ್ಥಳೀಯ ಭಯೋತ್ಪಾದಕರ ಸಂಖ್ಯೆ 2018ರಲ್ಲಿ 109 ಇತ್ತು. ಅದೀಗ 29ಕ್ಕೆ ಇಳಿದಿದೆ. 2018ರಿಂದ ಇಲ್ಲಿಯವರೆಗೆ ಸ್ಥಳೀಯ ಉಗ್ರರ ಸಂಖ್ಯೆಯಲ್ಲಿ ಶೇ.73ರಷ್ಟು ಕಡಿಮೆ ಆಗಿದೆ’ ಎಂದು ಮಾಹಿತಿ ನೀಡಿದ್ದಾರೆ. ಹಾಗೇ, ಇನ್ನೆರಡು ವರ್ಷಗಳಲ್ಲಿ ಜಮ್ಮು-ಕಾಶ್ಮೀರವನ್ನು ಸಂಪೂರ್ಣ ಭಯೋತ್ಪಾದನಾ ಮುಕ್ತ ಮಾಡುವುದು ನಮ್ಮ ಗುರಿ ಎಂದು ತಿಳಿಸಿದ್ದಾರೆ.
ಬಂಡಿಪೋರಾ, ಕುಪ್ವಾರಾ, ಗಂದರ್ಬಾಲ್ ಜಿಲ್ಲೆಗಳಲ್ಲಿ ಸ್ಥಳೀಯ ಉಗ್ರರು ಒಬ್ಬರೂ ಇಲ್ಲ. ಅನಂತ್ನಾಗ್, ಶ್ರೀನಗರ, ಬಾರಾಮುಲ್ಲಾ ಮತ್ತು ಬಡ್ಗಾಂವ್ಗಳಲ್ಲಿ ತಲಾ ಒಬ್ಬ ಉಗ್ರರು ಸಕ್ರಿಯವಾಗಿದ್ದಾರೆ. ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ, ಕಮಾಂಡರ್ ಫಾರೂಕ್ ನಲ್ಲಿ, ಲಷ್ಕರೆ ತೊಯ್ಬಾದ ಕಮಾಂಡರ್ಗಳಾದ ರಿಜಾಯ್ ಸಾತ್ರಿ ಮತ್ತು ಜಾವೇದ್ ಮಟ್ಟೂ ಸದ್ಯ ಕಾಶ್ಮೀರ ಕಣಿವೆಯಲ್ಲಿ ಇದ್ದಾರೆ. ಇದರಲ್ಲಿ ಜಾವೇದ್ ಮಟ್ಟೂ ಅನಾರೋಗ್ಯಕ್ಕೀಡಾಗಿದ್ದು, ಸದ್ಯ ಆತ ಅಷ್ಟೊಂದು ಸಕ್ರಿಯನಾಗಿಲ್ಲ ಎಂದು ಹೇಳಿರುವ ಕಾಶ್ಮೀರ ವಲಯ ಡಿಜಿಪಿ ವಿಜಯ್ಕುಮಾರ್,‘ಕಳೆದ ಎರಡು ವರ್ಷಗಳ ಹಿಂದೆ 80 ಉಗ್ರ ಕಮಾಂಡರ್ಗಳು ಇಲ್ಲಿ ಸಕ್ರಿಯರಾಗಿದ್ದರು. ಆ ಸಂಖ್ಯೆ ಗಮನಾರ್ಹವಾಗಿ ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ದೃಢಗೊಳಿಸಲಾಗಿದೆ. ಸದಾ ಕಣ್ಗಾವಲು ಇರುತ್ತದೆ. ಮೊದಲಿನಂತೆ ಮನೆ ಮಾಲೀಕರು ಉಗ್ರರಿಗೆ ಮನೆ ನೀಡುತ್ತಿಲ್ಲ. ಹಾಗೊಮ್ಮೆ ಉಗ್ರರಿಗೆ, ಉಗ್ರ ಕೃತ್ಯಗಳಿಗೆ ನೆರವು ನೀಡಿದ್ದು ಗೊತ್ತಾದರೆ ಆ ಮನೆ ಮಾಲೀಕನ ಆಸ್ತಿ ಮುಟ್ಟುಗೋಲು ಹಾಕಲಾಗುತ್ತಿದೆ. ಅವರ ಮನೆಯನ್ನು ವಶಪಡಿಸಿಕೊಳ್ಳಲಾಗುತ್ತದೆ. ಇದೇ ಭಯಕ್ಕೆ ಮನೆ ಮಾಲೀಕರು ಎಚ್ಚೆತ್ತುಕೊಂಡಿದ್ದಾರೆ. ಇದೂ ಕೂಡ ಸ್ಥಳೀಯ ಭಯೋತ್ಪಾದಕರ ಸಂಖ್ಯೆ ಕಡಿಮೆಯಾಗಲು ಕಾರಣ ಎಂದು ಡಿಜಿಪಿ ಮಾಹಿತಿ ನೀಡಿದ್ದಾರೆ.
ಹಾಗಿದ್ದಾಗ್ಯೂ ಪಾಕಿಸ್ತಾನಿ ಮೂಲದ ಭಯೋತ್ಪಾದಕರು ಡ್ರೋನ್ಗಳ ಮೂಲಕ ಇಲ್ಲಿಗೆ ಶಸ್ತ್ರಗಳನ್ನು ಕಳಿಸುವುದು, ಸ್ಫೋಟಕಗಳು, ಮಾದಕ ವಸ್ತುಗಳನ್ನು ಸಾಗಣೆ ಮಾಡುವ ಪ್ರವೃತ್ತಿ ಮುಂದುವರಿದಿದೆ. ಟೆಲಿಗ್ರಾಂನಲ್ಲಿ ಸದಾ ಬೆದರಿಕೆ ಸಂದೇಶಗಳು, ಕರೆಗಳು ಬರುತ್ತವೆ. ಕಾಶ್ಮೀರ ಹೋರಾಟಕ್ಕೆ ಸಂಬಂಧಪಟ್ಟು ಫೇಕ್ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಈ ಸವಾಲುಗಳ ವಿರುದ್ಧವೂ ನಾವು ಹೋರಾಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Cooker Bomb In Kashmir | ಮಂಗಳೂರು ಬೆನ್ನಲ್ಲೇ ಕಾಶ್ಮೀರದಲ್ಲೂ ಕುಕ್ಕರ್ ಬಾಂಬ್ ಪತ್ತೆ, ತಪ್ಪಿದ ಭಾರಿ ದುರಂತ