ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಪೊಲೀಸ್ ಪೇದೆಯೊಬ್ಬರ ಬಂದೂಕು ಕಸಿದುಕೊಂಡು, ಪೊಲೀಸರ ಗುಂಪಿನ ಮೇಲೆಯೇ ಗುಂಡಿನ ದಾಳಿ ನಡೆಸಿದ್ದ ಪಾಕಿಸ್ತಾನದ ಉಗ್ರನನ್ನು ಭದ್ರತಾ ಸಿಬ್ಬಂದಿಯು (Terrorist Killed) ಹೊಡೆದುರುಳಿಸಿದ್ದಾರೆ. ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರೋನ್‌ಗಳ ಮೂಲಕ ಎಸೆದ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆ ವೇಳೆ ಪಾಕ್ ಉಗ್ರ ಮೊಹಮ್ಮದ್ ಅಲಿ ಹುಸೇನ್ (Mohammad Ali Hussain) ಎಂಬುವನು ಪೇದೆಯ ಬಂದೂಕು ಕಸಿದು, ಪೊಲೀಸರ ಗುಂಪಿನ ಮೇಲೆಯೇ ದಾಳಿ ನಡೆಸಿದ್ದ. ಇದಾದ ಬಳಿಕ ಭದ್ರತಾ ಸಿಬ್ಬಂದಿಯು ಹತ್ಯೆಗೈದಿದ್ದಾರೆ.
“ಶಸ್ತ್ರಾಸ್ತ್ರಗಳ ಪತ್ತೆ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ದಾಳಿಯಿಂದ ಪೊಲೀಸ್ ಪೇದೆ ಹಾಗೂ ಜಮ್ಮುವಿನ ಕೊತ್ ಭಲ್ವಾಲ್ ಜೈಲಿನಲ್ಲಿ ಇರಿಸಲಾಗಿದ್ದ ಉಗ್ರ ಮೊಹಮ್ಮದ್ ಅಲಿ ಹುಸೇನ್ ಗಾಯಗೊಂಡಿದ್ದರು. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ಉಗ್ರ ಮೃತಪಟ್ಟಿದ್ದಾನೆ” ಎಂದು ಎಡಿಜಿಪಿ ಮುಕೇಶ್ ಸಿಂಗ್ ತಿಳಿಸಿದ್ದಾರೆ.
ಪಾಕಿಸ್ತಾನದ ಡ್ರೋನ್‌ಗಳ ಮೂಲಕ ಎಸೆದ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಿ, ವಶಪಡಿಸಿಕೊಳ್ಳಲು ಪೊಲೀಸರು ಉಗ್ರನನ್ನು ಕರೆದುಕೊಂಡು ಹೋಗಿ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಉಗ್ರನು ಪೇದೆಯ ಬಂದೂಕು ಕಸಿದಿದ್ದ. ಆದಾಗ್ಯೂ, ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ ಎಸೆದಿದ್ದನ್ನು ಉಗ್ರನು ಒಪ್ಪಿಕೊಂಡಿದ್ದಾನೆ. ಕಾರ್ಯಾಚರಣೆಯಲ್ಲಿ ಸ್ಫೋಟಕ ಸೇರಿ ಹಲವು ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ | ಕಾಶ್ಮೀರದಲ್ಲಿ ಎನ್‌ಕೌಂಟರ್: ಹಿಜ್ಬುಲ್ ಮುಜಾಹಿದೀನ್ ಉಗ್ರನ ಹತ್ಯೆ