ನವ ದೆಹಲಿ: ಇಂಗ್ಲೆಂಡ್ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಶುಕ್ರವಾರ ಅಲ್ಲಿನ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ಮಾಡಿದರು. ಹೀಗೆ ಉಪನ್ಯಾಸ ಮಾಡುವ ವೇಳೆ ಅವರು ತಮ್ಮ ಭಾರತ್ ಜೋಡೋ ಯಾತ್ರೆಯ ಕ್ಷಣಗಳನ್ನು ನೆನಪಿಸಿಕೊಂಡರು. ಅದರಲ್ಲೂ ಜಮ್ಮು-ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆ ಹೇಗಿತ್ತು ಎಂಬ ಬಗ್ಗೆ ಅನುಭವ ಹಂಚಿಕೊಂಡರು. ‘ನಾನು ಉಗ್ರರನ್ನು ನೋಡಿದೆ, ಅವರೂ ನನ್ನನ್ನು ನೋಡಿದರು..’ ಎಂದು ಹೇಳಿಕೊಂಡಿದ್ದಾರೆ.
ನಮ್ಮ ಭಾರತ್ ಜೋಡೋ ಯಾತ್ರೆ ಜಮ್ಮು-ಕಾಶ್ಮೀರವನ್ನು ಪ್ರವೇಶಿಸುತ್ತಿದ್ದಂತೆ, ಅಲ್ಲಿನ ಭದ್ರತಾ ಸಿಬ್ಬಂದಿ ನನ್ನ ಬಳಿ ‘ಇಲ್ಲಿ ಪಾದಯಾತ್ರೆ ನಡೆಸಬೇಡಿ. ಉಗ್ರದಾಳಿಯ ಅಪಾಯವಿದೆ’ ಎಂದು ಹೇಳಿದರು. ಆಗ ನಾನು ನನ್ನೊಂದಿಗೆ ಇದ್ದ ಇತರ ಪ್ರಮುಖ ನಾಯಕರ ಬಳಿ ಈ ವಿಚಾರ ಚರ್ಚಿಸಿದೆ. ನಾನು ಕಾಲ್ನಡಿಗೆಯಲ್ಲೇ ಭಾರತ್ ಜೋಡೋ ಯಾತ್ರೆ ಮಾಡಬೇಕು ಎಂದು ಹೇಳಿದೆ. ಹಾಗೇ, ಪಾದಯಾತ್ರೆ ಮುಂದುವರಿಸಿದೆವು.
ಹೀಗೆ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ನನ್ನ ಎದುರು ಬಂದು, ನಿಮ್ಮ ಬಳಿ ಮಾತನಾಡಬೇಕು ಎಂದು ಹೇಳಿದ. ನೀವೆಲ್ಲ ಕಾಂಗ್ರೆಸ್ ನಾಯಕರು ನಿಜಕ್ಕೂ ಈ ಕೇಂದ್ರಾಡಳಿತ ಪ್ರದೇಶದ ಜನರ ಸಮಸ್ಯೆಗಳನ್ನು ಆಲಿಸಲು ಬಂದಿದ್ದೀರಾ ಎಂದು ಆ ವ್ಯಕ್ತಿ ನನ್ನ ಬಳಿ ಪ್ರಶ್ನಿಸಿದ. ಅಷ್ಟೇ ಅಲ್ಲ, ಅಲ್ಲೇ ಸ್ವಲ್ಪ ದೂರದಲ್ಲಿ ನಿಂತಿದ್ದ ಒಂದಷ್ಟು ಜನರನ್ನು ನನಗೆ ತೋರಿಸಿ, ಅವರೆಲ್ಲರೂ ಭಯೋತ್ಪಾದಕರು ಎಂದು ಹೇಳಿದ. ನಾನು ಅವರನ್ನು ನೋಡಿದೆ, ಅವರೂ ನನ್ನನ್ನು ನೋಡಿದರು. ನಾನು ಆ ಕ್ಷಣಕ್ಕೆ ಅಂದುಕೊಂಡೆ, ನನಗೇನೋ ಅಪಾಯ ಎದುರಾಗಬಹುದು, ಆ ಉಗ್ರರು ನನ್ನನ್ನು ಇಲ್ಲೇ ಕೊಂದು ಬಿಡಬಹುದು ಎಂದು ಮನಸಲ್ಲಿ ಒಂದು ಯೋಚನೆ ಬಂತು. ಆದರೆ ಅವರು ನನಗೇನೂ ಮಾಡಲಿಲ್ಲ. ಆ ವ್ಯಕ್ತಿ ನನ್ನ ಬಳಿ ಬಂದಾಗ ಅವನೇನು ಹೇಳುತ್ತಾನೆ ಎಂಬುದನ್ನು ನಾನು ಕೇಳಿಸಿಕೊಂಡೇ. ಹೀಗಾಗಿ ಉಗ್ರರು ನನಗೇನೂ ಮಾಡಲಿಲ್ಲ. ಇನ್ನೊಬ್ಬರ ಕಷ್ಟಗಳನ್ನು ಕೇಳಿಸಿಕೊಳ್ಳುವುದಕ್ಕೆ ಇರುವ ಶಕ್ತಿ ಇದೇ’ ಎಂದು ರಾಹುಲ್ ಗಾಂಧಿ ಕೇಂಬ್ರಿಜ್ ವಿವಿಯಲ್ಲಿ ತಿಳಿಸಿದ್ದಾರೆ.
ಇನ್ನು ರಾಹುಲ್ ಗಾಂಧಿ ಕೇಂಬ್ರಿಜ್ ಯೂನಿವರ್ಸಿಟಿಯಲ್ಲಿ ಮಾತನಾಡುತ್ತ ‘ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಪೆಗಾಸಸ್ ಬೇಹುಗಾರಿಕೆ ಮೂಲಕ ನನ್ನ ಮತ್ತು ಇತರ ರಾಜಕಾರಣಿಗಳು, ಪತ್ರಕರ್ತರ ಮೇಲೆ ಕಣ್ಗಾವಲು ಇಡಲಾಗಿದೆ ಎಂಬಿತ್ಯಾದಿ ವಿಷಯಗಳನ್ನು ಹೇಳಿದ್ದಾರೆ. ಅವರ ಇಂಥ ಭಾಷಣದಿಂದ ಭಾರತಕ್ಕೆ ಅವಮಾನ ಆಗುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.