ನವದೆಹಲಿ: ಮಧ್ಯ ಪ್ರದೇಶದ (Madhya Pradesh) ಉಜ್ಜಯಿನಿಯ ((Ujjain Case)) ಬದ್ನಗರದ ಬಳಿ 15 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ (Sexual Abuse) ಎಸಗಲಾಗಿದೆ. ಇದಾದ ಬಳಿಕ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕಿಯು ಅರೆಬೆತ್ತಲೆಯಾಗಿ ರಸ್ತೆ ಮೇಲೆ ನಡೆದುಕೊಂಡು ಹೋಗಿದ್ದಾಳೆ. ನನಗೆ ಸಹಾಯ ಮಾಡಿ ಎಂದು ಮನೆ ಮನೆಗೆ ತೆರಳಿ ಅಂಗಲಾಚಿದರೂ ಯಾರೊಬ್ಬರು ಕೂಡ ಬಾಲಕಿಗೆ ಸಹಾಯ ಮಾಡಿಲ್ಲ. ಈ ಸುದ್ದಿ ಸಂಚಲನಕ್ಕೆ ಕಾರಣವಾಗಿತ್ತು. ಈ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ ಪ್ರಮುಖ ಆರೋಪಿಯನ್ನು ಪೊಲೀಸರು(MP Police) ಬಂಧಿಸಿದ್ದರು. ಆತನನ್ನು ಪಂಚನಾಮೆಗೆ ಕರೆದುಕೊಂಡು ಹೋದಾಗ ತಪ್ಪಿಸಿಕೊಳ್ಳಲು ಯತ್ನಿಸಿದ ಘಟನೆ ನಡೆದಿದೆ. ಆದರೆ, ಪೊಲೀಸರು ಆತನನ್ನು ಮತ್ತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆಟೋರಿಕ್ಷಾ ಚಾಲಕನಾಗಿದ್ದಾನೆ(autorickshaw driver).
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದ ಪೊಲೀಸರು ಸಾಕ್ಷ್ಯ ಸಂಗ್ರಹಿಸಲು ಮುಂದಾಗಿದ್ದರು. ಅವಕಾಶವನ್ನು ಅರಿತು ಆರೋಪಿ ಸ್ಥಳಕ್ಕಾಗಮಿಸಿದ ಪೊಲೀಸರಿಂದ ಓಡಿಹೋದ. ಬಳಿಕ ಪೊಲೀಸರು ಬೆನ್ನಟ್ಟಿ ಆತನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.
ಬಾಲಕಿಯ ಬಟ್ಟೆಗಳನ್ನು ವಶಪಡಿಸಿಕೊಳ್ಳಲು ಅತ್ಯಾಚಾರ ಘಟನೆ ನಡೆದ ಸ್ಥಳಕ್ಕೆ ನಾವು ಹೋಗಿದ್ದೆವು. ಈ ಅವಕಾಶವನ್ನು ಬಳಸಿಕೊಂಡು, ಆರೋಪಿ ಭರತ್ ಸೋನಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಪೊಲೀಸರು ಆರೋಪಿ ಬೆನ್ನಟ್ಟಿದೆ ಆತನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ, ಆತ ಸಿಮೆಂಟ್ ರಸ್ತೆ ಮೇಲೆ ಬಿದ್ದಿದ್ದಾನೆ. ಆತನ ಕೈಗಳು ಮತ್ತು ಕಾಲುಗಳಿಗೆ ಪೆಟ್ಟಾಗಿದೆ ಎಂದು ಇನ್ಸ್‌ಪೆಕ್ಟರ್ ಅಜಯ್ ಕುಮಾರ್ ಹೇಳಿದ್ದಾರೆ.
ಪ್ರಮುಖ ಆರೋಪಿ ಉಜ್ಜಯಿನಿ ನಗರದವನಾಗಿದ್ದಾನೆ. ಹುಡುಗಿ ಒಂಟಿಯಾಗಿ ಹೋಗುವುದನ್ನು ನೋಡಿದ್ದಾನೆ. ಆಗ ಈ ಕೃತ್ಯ ಎಸಗಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಬಾಲಕಿ ಇನ್ನಷ್ಟೇ ಹೇಳಿಕೆಯನ್ನು ನೀಡಬೇಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಶರ್ಮಾ ಅವರು ತಿಳಿಸಿದ್ದಾರೆ.
ಅತ್ಯಾಚಾರದ ಬಳಿಕ ರಕ್ತಸ್ರಾವದಿಂದ ಬಳಲುತ್ತಿದ್ದ 15 ವರ್ಷದ ಬಾಲಕಿ ಅರೆಬೆತ್ತಲೆಯಾಗಿ ಸಹಾಯಕ್ಕಾಗಿ ಮನೆ ಮನೆಗೆ ಹೋಗುತ್ತಿರುವುದನ್ನು ತೋರಿಸುವ ಭಯಾನಕ ದೃಶ್ಯಗಳು ದೇಶಾದ್ಯಂತ ಭಾರೀ ಆಕ್ರೋಶವನ್ನು ಹುಟ್ಟು ಹಾಕಿದ್ದವು.
ಈ ಸುದ್ದಿಯನ್ನೂ ಓದಿ: Ujjain Case: ರಕ್ತಸಿಕ್ತ ಬಾಲಕಿಯ ನೋಡಿ ಎಲ್ಲರೂ ಸುಮ್ಮನಿದ್ದಾಗ ಆಕೆಯನ್ನು ರಕ್ಷಿಸಿದ್ದು ಹಿಂದು ಸನ್ಯಾಸಿ!
ಅತ್ಯಾಚಾರಕ್ಕೀಡಾದ ಬಾಲಕಿ ಸಹಾಯ ಕೋರುತ್ತಿರುವ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪರೀಕ್ಷಿಸಿದ ಬಳಿಕ ಪೊಲೀಸರು ನಿನ್ನೆ ಆಟೋರಿಕ್ಷಾ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆಟೋದಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಸ್ತ್ರ ಚಿಕಿತ್ಸೆ ಬಳಿಕ ಸಂತ್ರಸ್ತ ಬಾಲಕಿಯ ಆರೋಗ್ಯ ಈಗ ಸ್ಥಿರವಾಗಿದೆ. ಆದರೆ, ಈವರೆಗೂ ಆಕೆಯಿಂದ ಹೇಳಿಕೆಯನ್ನು ಪಡೆಯಲು ಸಾಧ್ಯವಾಗಿಲ್ಲ. ಆಕೆ ಎಲ್ಲಿಂದ ಬಂದಿದ್ದು, ತಂದೆ-ತಾಯಿ ಅಥವಾ ಸಂಬಂಧಿಕರ ಯಾವುದೇ ಮಾಹಿತಿಯನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ, ಬಾಲಕಿಯೊಬ್ಬಳು ಕಾಣೆಯಾದ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶದ ಮತ್ತೊಂದು ಜಿಲ್ಲೆಯಲ್ಲಿ ಈಗಾಗಲೇ ಪೊಲೀಸ್ ದೂರು ದಾಖಲಾಗಿದೆ. ಕಾಣೆಯಾದ ಬಾಲಕಿಯೇ ಈಕೆಯೇ ಎಂಬದನ್ನು ತನಿಖೆಯಿಂದ ಪತ್ತೆ ಹಚ್ಚಬೇಕಾಗಿದೆ. ಕಾಣೆಯಾದ ಬಾಲಕಿಗೆ ಅಜ್ಜಿ ಮತ್ತು ಸಹೋದರನಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.