Site icon Vistara News

The Kerala Story: ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿ ಸಿನಿಮಾಕ್ಕೆ ನಿಷೇಧ; ಮಮತಾ ಬ್ಯಾನರ್ಜಿ ಆದೇಶ

The Kerala Story Ban By CM Mamata Banerjee In West Bengal

#image_title

ದಿ ಕೇರಳ ಸ್ಟೋರಿ (The Kerala Story) ಸಿನಿಮಾವನ್ನು ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಿಷೇಧಿಸಲಾಗಿದೆ (The Kerala Story Ban in West Bengal). ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿ ಪ್ರದರ್ಶನ ರದ್ದುಗೊಳಿಸುತ್ತಿರುವುದಾಗಿ ಇಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (CM Mamata Banerjee) ಘೋಷಣೆ ಮಾಡಿದ್ದಾರೆ. ದಿ ಕೇರಳ ಸ್ಟೋರಿ ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ವಿವಾದ ಸೃಷ್ಟಿಸಿದೆ. ಕೇರಳದ ಸಾವಿರಾರು ಹಿಂದು/ಕ್ರಿಶ್ಚಿಯನ್ ಹುಡುಗಿಯರನ್ನು ಸಿರಿಯಾ-ಅಫ್ಘಾನಿಸ್ತಾನಕ್ಕೆ ಕರೆದುಕೊಂಡು ಇಸ್ಲಾಮ್​ಗೆ ಮತಾಂತರ ಮಾಡುವ, ಲವ್​ ಜಿಹಾದ್​ಗೆ ಒಳಪಡಿಸುವ, ಐಸಿಸ್ ಭಯೋತ್ಪಾದನಾ ಸಂಘಟನೆಗೆ ಸೇರಿಸುವ ಕತೆಗಳನ್ನು ಒಳಗೊಂಡಿರುವ ದಿ ಕೇರಳ ಸ್ಟೋರಿ ಮೇ 5ರಂದು ದೇಶಾದ್ಯಂತ ಬಿಡುಗಡೆಯಾಗಿದೆ.

ಸಿನಿಮಾ ಬಿಡುಗಡೆಗೂ ಮುನ್ನವೇ ಅನೇಕರು ವಿವಿಧ ಹೈಕೋರ್ಟ್, ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಿ, ಚಿತ್ರ ಬಿಡುಗಡೆಗೆ ತಡೆ ನೀಡುವಂತೆ ಕೋರಿದ್ದರು. ಆದರೆ ಫಲಪ್ರದ ವಾಗಿರಲಿಲ್ಲ. ಆದರೆ ದೇಶಕ್ಕೆ ಒಂದು ದಾರಿಯಾದರೆ ಪಶ್ಚಿಮ ಬಂಗಾಳಕ್ಕೇ ಮತ್ತೊಂದು ದಾರಿ ಎಂಬಂತೆ ವರ್ತಿಸುವ ಮಮತಾ ಬ್ಯಾನರ್ಜಿ ಈ ವಿಚಾರದಲ್ಲೂ ಅದನ್ನೇ ಮಾಡಿದ್ದಾರೆ. ಚಿತ್ರ ಬಿಡುಗಡೆಯಾದ ಮೂರು ದಿನಗಳ ಬಳಿಕ ಅದರ ಪ್ರದರ್ಶನವನ್ನು ಪಶ್ಚಿಮ ಬಂಗಾಳದಲ್ಲಿ ಬ್ಯಾನ್ ಮಾಡಿದ್ದಾರೆ. ‘ಪಶ್ಚಿಮ ಬಂಗಾಳದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಸಲುವಾಗಿ, ಕೋಮುಗಲಭೆ, ದ್ವೇಷದ ಘಟನೆಗಳು ನಡೆಯದಂತೆ ತಡೆಯಲು ಚಿತ್ರ ಪ್ರದರ್ಶನ ರದ್ದುಗೊಳಿಸಲಾಗಿದೆ’ ಎಂದು ಹೇಳಿರುವ ಮಮತಾ ಬ್ಯಾನರ್ಜಿ, ರಾಜ್ಯದ ಒಂದೇ ಒಂದು ಸ್ಥಳದಲ್ಲಿಯೂ ದಿ ಕೇರಳ ಸ್ಟೋರಿ ಪ್ರದರ್ಶನಗೊಳ್ಳುತ್ತಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಿ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ಇದಕ್ಕೂ ಮುನ್ನ ದಿ ಕೇರಳ ಸ್ಟೋರಿ ಬಗ್ಗೆ ಮಾತನಾಡಿದ್ದ ಸಿಎಂ ಮಮತಾ ಬ್ಯಾನರ್ಜಿ ‘ದಿ ಕಾಶ್ಮೀರಿ ಫೈಲ್ಸ್ ಬಿಡುಗಡೆಯಾದಾಗ ಅದರ ಪ್ರದರ್ಶನಕ್ಕೆ ಬಿಜೆಪಿ ಹಣ ಸಂದಾಯ ಮಾಡಿತ್ತು. ಅದೇ ಮಾದರಿಯಲ್ಲಿ ಈಗ ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿಯನ್ನು ದೊಡ್ಡಮಟ್ಟದಲ್ಲಿ ಪ್ರದರ್ಶನ ಮಾಡಿಸಲೂ ಪ್ರಯತ್ನ ಮಾಡುತ್ತಿದೆ’ ಎಂದು ಹೇಳಿದ್ದರು. ಈ ಹೇಳಿಕೆ ನೀಡಿ ಕೆಲವೇ ಹೊತ್ತಲ್ಲಿ ಚಿತ್ರವನ್ನೇ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ವಿಸ್ತಾರ Explainer: The Kerala Story: ದಿ ಕಾಶ್ಮೀರ್ ಫೈಲ್ ಬಳಿಕ ಮತ್ತೊಂದು ಸಿನಿ ಸಂಚಲನ: ವಿಶ್ವಾದ್ಯಂತ ತೆರೆಗೆ

ಇನ್ನು ತಮಿಳುನಾಡಿನ ಹಲವು ಮಲ್ಟಿಪ್ಲೆಕ್ಸ್​ಗಳಲ್ಲಿ ಈಗಾಗಲೇ ದಿ ಕೇರಳ ಸ್ಟೋರಿ ಚಿತ್ರ ಪ್ರದರ್ಶನ ಸ್ಥಗಿತಗೊಂಡಿದೆ. ವಿವಾದಿತ ಸಿನಿಮಾವನ್ನು ನಾವು ಪ್ರದರ್ಶನ ಮಾಡುವುದಿಲ್ಲ ಎಂದು ರಾಜ್ಯದ ವಿವಿಧ ಮಲ್ಟಿಪ್ಲೆಕ್ಸ್​​ಗಳ ಮಾಲೀಕರು ಹೇಳಿದ್ದಾರೆ ಎಂದು ತಮಿಳುನಾಡು ಥಿಯೇಟರ್​ ಮತ್ತು ಮಲ್ಟಿಪ್ಲೆಕ್ಸ್​ ಮಾಲೀಕರ ಸಂಘದ ಅಧ್ಯಕ್ಷ ಎಂ.ಸುಬ್ರಹ್ಮಣಿಯಂ ಅವರು ಭಾನುವಾರ ಹೇಳಿಕೆ ಬಿಡುಗಡೆ ಮಾಡಿದ್ದರು. ಇನ್ನೊಂದೆಡೆ ಈ ಸಿನಿಮಾವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಮಧ್ಯಪ್ರದೇಶದಲ್ಲಿ ತೆರಿಗೆ ಮುಕ್ತ ಎಂದು ಘೋಷಿಸಲಾಗಿದೆ.

ಇದನ್ನೂ ಓದಿ: The Kerala Story: ʻದಿ ಕಾಶ್ಮೀರ್ ಫೈಲ್ಸ್‌ʼ ದಾಖಲೆಯನ್ನು ಮುರಿಯಲಿದೆಯೇ ʻದಿ ಕೇರಳ ಸ್ಟೋರಿʼ: ತಜ್ಞರು ಹೇಳೋದೇನು?

Exit mobile version