ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಮೇ 5ರಂದು ಬಿಡುಗಡೆಯಾಗಿ ದೇಶಾದ್ಯಂತ ಥಿಯೇಟರ್ಗಳು, ಮಲ್ಟಿಪ್ಲೆಕ್ಸ್ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕೇರಳದಿಂದ ಸಾವಿರಾರು ಹಿಂದು/ಕ್ರಿಶ್ಚಿಯನ್ ಯುವತಿಯರನ್ನು ಅಫ್ಘಾನಿಸ್ತಾನ, ಸಿರಿಯಾದಂಥ ದೇಶಗಳಿಗೆ ಕರೆದುಕೊಂಡು ಹೋಗಿ, ಇಸ್ಲಾಮ್ಗೆ ಮತಾಂತರ ಮಾಡಿ, ಐಸಿಸ್ ಭಯೋತ್ಪಾದನಾ ಸಂಘಟನೆಗಳಿಗೆ ಸೇರಿಸುವ, ಲವ್ ಜಿಹಾದ್ಗೆ ಅವರನ್ನು ಒಳಪಡಿಸುವ ಕಥೆಯನ್ನು ಒಳಗೊಂಡ ದಿ ಕೇರಳ ಸ್ಟೋರಿ, ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ವಿವಾದ ಸೃಷ್ಟಿಸಿದೆ. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸಿನಿಮಾ ಪ್ರದರ್ಶನವನ್ನೇ ನಿಷೇಧಿಸಲಾಗಿದೆ. ತಮಿಳುನಾಡಿನ ಹಲವು ಮಲ್ಟಿಪ್ಲೆಕ್ಸ್ಗಳಲ್ಲಿ ಬ್ಯಾನ್ ಮಾಡಲಾಗಿದೆ. ಇಷ್ಟರ ಮಧ್ಯೆ ಈಗ ದಿ ಕೇರಳ ಸ್ಟೋರಿ ಚಿತ್ರತಂಡದಲ್ಲಿ ಇರುವ ಒಬ್ಬರಿಗೆ ಜೀವ ಬೆದರಿಕೆ ಬಂದಿದೆ ಎಂದು ಅದರ ನಿರ್ದೇಶಕ ಸುದೀಪ್ತೋ ಸೇನ್ ತಿಳಿಸಿದ್ದಾರೆ.
‘ನಮ್ಮ ದಿ ಕೇರಳ ಸ್ಟೋರಿ ಚಿತ್ರ ತಂಡದ ಸದಸ್ಯರೊಬ್ಬರಿಗೆ ಸಂದೇಶ ಕಳಿಸಲಾಗಿದೆ. ನೀವು ದಿ ಕೇರಳ ಸ್ಟೋರಿಯಲ್ಲಿ ಒಳ್ಳೆಯದನ್ನು ತೋರಿಸಿಲ್ಲ. ಮನೆಯಿಂದ ಒಬ್ಬರೇ ಹೊರಗೆ ಬರಬೇಡಿ, ನಾವು ನಿಮ್ಮನ್ನು ಬಿಡುವುದಿಲ್ಲ’ ಎಂದು ಅಪರಿಚಿತ ನಂಬರ್ನಿಂದ ಮೆಸೇಜ್ ಬಂದಿದೆ ಎಂದು ಸುದಿಪ್ತೋ ಸೇನ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದೀಪ್ತೋ ಸೇನ್ ಅವರು ಯಾವುದೇ ಲಿಖಿತ ದೂರು ಕೊಡದ ಕಾರಣ ಪೊಲೀಸರು ಕೂಡ ಎಫ್ಐಆರ್ ದಾಖಲಿಸಿಲ್ಲ. ಆದರೆ ಬೆದರಿಕೆ ಸಂದೇಶ ಬಂದಿರುವ ಸದಸ್ಯನಿಗೆ ಭದ್ರತೆಯನ್ನು ಒದಗಿಸಿದ್ದಾರೆ.
ದಿ ಕೇರಳ ಸ್ಟೋರಿ ಸಿನಿಮಾದ ಟ್ರೇಲರ್ ಏಪ್ರಿಲ್ನಲ್ಲಿ ಬಿಡುಗಡೆಯಾಗಿತ್ತು. ಕೇರಳದ 32 ಸಾವಿರ ಯುವತಿಯರನ್ನು ಲವ್ ಜಿಹಾದ್ಗೆ ಒಳಪಡಿಸಿ, ಐಸಿಸ್ಗೆ ಸೇರಿಸಲಾಗಿದೆ ಎಂದು ಅದರಲ್ಲಿ ಪ್ರತಿಪಾದಿಸಲಾಗಿತ್ತು. ಇದು ನೈಜ ಕತೆ ಎಂದು ಚಿತ್ರತಂಡ ಹೇಳಿಕೊಂಡಿದ್ದು ವಿವಾದ ಸೃಷ್ಟಿಸಿತ್ತು. ಸಿನಿಮಾದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ ಮತ್ತು ಸೋನಿಯಾ ಬಾಲಾನಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: The Kerala Story: ʻದಿ ಕೇರಳ ಸ್ಟೋರಿʼ ಮೂರನೇ ದಿನದ ಗಳಿಕೆ ಏನು?
ಸಿನಿಮಾವನ್ನು ವಿಫುಲ್ ಅಮೃತ್ಲಾಲ್ ಶಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾವನ್ನು ಹಲವು ಸ್ವರೂಪದ ಅಧ್ಯಯನಗಳ ನಂತರ ನಿರ್ಮಾಣ ಮಾಡಿದ್ದಾಗಿ ಹೇಳಿಕೊಂಡಿರುವ ಅವರು ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಬ್ಯಾನ್ ಆಗಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿ ‘ಈ ಬಗ್ಗೆ ನಾವು ಕಾನೂನು ಮಾರ್ಗ ಹುಡುಕಿಕೊಳ್ಳುತ್ತೇವೆ. ನಿಷೇಧದ ವಿರುದ್ಧ ಏನು ಮಾಡಬಹುದು ಎಂದು, ಕಾನೂನು ತಜ್ಞರಿಂದ ಸಲಹೆ ಪಡೆದು ಮುಂದುವರಿಯುತ್ತೇವೆ’ ಎಂದಿದ್ದಾರೆ.