ವಿವಾದ, ತಕರಾರು ಮಧ್ಯೆಯೂ ‘ದಿ ಕೇರಳ ಸ್ಟೋರಿ (The Kerala Story)’ ಸಿನಿಮಾ ರಾಷ್ಟ್ರಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಅದೆಷ್ಟೋ ಜನ ಸಿನಿಮಾವನ್ನು ತಾವು ನೋಡಿ ಬಂದ ಮೇಲೆ, ಉಳಿದವರೂ ನೋಡಿ, ಅದರಲ್ಲೂ ವಿಶೇಷವಾಗಿ ನಿಮ್ಮ ಮನೆ ಹೆಣ್ಣುಮಕ್ಕಳಿಗೆ ತೋರಿಸಿ ಎಂದು ಶಿಫಾರಸ್ಸು ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ದಿ ಕೇರಳ ಸ್ಟೋರಿ ಚಿತ್ರತಂಡ ಎರಡು ದಿನಗಳ ಹಿಂದೆ ಮುಂಬಯಿಯಲ್ಲಿ ಒಂದು ಸುದ್ದಿಗೋಷ್ಠಿಯನ್ನು ನಡೆಸಿದೆ. ಚಿತ್ರ ನಿರ್ದೇಶಕ ಸುದೀಪ್ತೋ ಸೇನ್, ನಿರ್ಮಾಪಕ ವಿಫುಲ್ ಶಾ ಮತ್ತು ಇತರ ಪ್ರಮುಖರೆಲ್ಲ ಇದರಲ್ಲಿ ಇದ್ದರು.
ಕೇರಳದ ಹಿಂದು/ಕ್ರಿಶ್ಚಿಯನ್ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಿ, ಅಫ್ಘಾನಿಸ್ತಾನ-ಸಿರಿಯಾ ದೇಶಗಳಿಗೆ ಕರೆದೊಯ್ದು ಐಸಿಸ್ ಭಯೋತ್ಪಾದಕರ ಸಂಘಟನೆಗೆ ಸೇರಿಸುವ, ಲವ್ ಜಿಹಾದ್ಗೆ ಗುರಿಪಡಿಸುವ ಕಥೆಯನ್ನು ಒಳಗೊಂಡ ದಿ ಕೇರಳ ಸ್ಟೋರಿ ಸಿನಿಮಾ ಬಗ್ಗೆ ವಿವಿಧ ರಾಜಕೀಯ ಪಕ್ಷಗಳು ಸೇರಿ, ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ನೈಜ ಕಥೆಯಾಧಾರಿತ ಸಿನಿಮಾ ಎಂದು ಚಿತ್ರ ತಂಡ ಹೇಳಿಕೊಂಡಿದೆ. ಅದರಲ್ಲೂ ಟ್ರೇಲರ್ ಬಿಡುಗಡೆಯಾದಾಗ ಅದರಲ್ಲಿ ಒಟ್ಟು 32 ಸಾವಿರ ಯುವತಿಯರನ್ನು ಹೀಗೆ ಮತಾಂತರ ಮಾಡಲಾಗಿದೆ ಎಂದು ಹೇಳಿತ್ತು. ಆದರೆ ಅಂಕಿಸಂಖ್ಯೆ ಬಗ್ಗೆ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಇದನ್ನು ಕೈಬಿಡಲಾಗಿತ್ತು. ಆದರೂ ಅನೇಕರು ಇದೊಂದು ನೈಜ ಕಥೆಯಲ್ಲ ಎಂದೇ ವಾದಿಸುತ್ತಿದ್ದಾರೆ.
ಹೀಗಿರುವಾಗ ಇತ್ತೀಚೆಗೆ ಮುಂಬಯಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡ ಒಟ್ಟು 26 ಸಂತ್ರಸ್ತ ಯುವತಿಯರನ್ನು ಪರಿಚಯಿಸುವ ಮೂಲಕ ಸಿನಿಮಾವನ್ನು ಸಮರ್ಥಿಸಿಕೊಂಡಿದೆ. ಆ ಯುವತಿಯರೆಲ್ಲರೂ ಕೇರಳದವೇ ಆಗಿದ್ದು, ಇಸ್ಲಾಂ ಮೂಲಭೂತವಾದಕ್ಕೆ ಸಿಲುಕಿದವರು. ಐಸಿಸ್ ಕಪಿಮುಷ್ಠಿಯಲ್ಲಿ ಸಿಲುಕಿ, ಅದರ ನಿಯಮಗಳನ್ನು, ಸಿದ್ಧಾಂತಗಳನ್ನು ಉಪದೇಶಿಸಲ್ಪಟ್ಟು, ಬಳಿಕ ರಕ್ಷಿಸಲ್ಪಟ್ಟವರು ಎಂದು ಚಿತ್ರತಂಡ ಹೇಳಿದೆ. ಇವರನ್ನೆಲ್ಲ ಕೊಚ್ಚಿಯಿಂದ ಬಾಂದ್ರಾದ ರಂಗ್ ಶಾರದಾ ಹಾಲ್ಗೆ ಕರೆತಂದು, ಅಲ್ಲಿ ಮಾಧ್ಯಮದವರ ಎದುರು ಹಾಜರುಪಡಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ವಿಫುಲ್ ಶಾ ‘ನಮ್ಮ ಸಿನಿಮಾ ಕೇವಲ ಪ್ರಚಾರಕ್ಕಾಗಿ ಮಾಡಿದ್ದು. ವಾಸ್ತವ ಕಥೆಯನ್ನು ಒಳಗೊಂಡಿಲ್ಲ ಎಂದು ಅನೇಕರು ಹೇಳಿದ್ದರು. ಅಂಥವರಿಗೆ ನಾವೀಗ ಉತ್ತರ ನೀಡುತ್ತಿದ್ದೇವೆ. ಈ 26 ಹೆಣ್ಣುಮಕ್ಕಳೇ ಸಾಕ್ಷಿಯಿದ್ದಾರೆ. ಯಾರೇನೇ ಹೇಳಲಿ, ನಮ್ಮ ಸಿನಿಮಾದಲ್ಲಿ ನಾವು ತೋರಿಸಿದ್ದು ಸತ್ಯ ಕಥೆ’ ಎಂದು ತಿಳಿಸಿದ್ದಾರೆ. ಹಾಗೇ, ನಮ್ಮ ಹೆಣ್ಣುಮಕ್ಕಳನ್ನು ರಕ್ಷಿಸುವುದೇ ನಮ್ಮ ಸಿನಿಮಾದ ಬಹುಮುಖ್ಯ ಉದ್ದೇಶ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: The Kerala Story: ‘ದಿ ಕೇರಳ ಸ್ಟೋರಿ’ ಸಿನಿಮಾ ನೋಡಿ, ದ್ವೇಷ ಭಾಷಣ ಮಾಡಿದ ಸಾಧ್ವಿ ಪ್ರಾಚಿ ವಿರುದ್ಧ ಕೇಸ್ ದಾಖಲು
ಸಂತ್ರಸ್ತ ಯುವತಿಯಲ್ಲಿ ಒಬ್ಬಳಾದ ಅನಘಾ ಜೈಗೋಪಾಲ್ ಮಾತನಾಡಿ ‘ದಿ ಕೇರಳ ಸ್ಟೋರಿಯಲ್ಲಿ ಆದಾ ಶರ್ಮಾ ಮಾಡಿದ ಶಾಲಿನಿ ಪಾತ್ರಕ್ಕೂ, ನನ್ನ ಜೀವನಕ್ಕೂ ಏನೇನೂ ವ್ಯತ್ಯಾಸ ಇರಲಿಲ್ಲ. ನಾನು ಎರಡು ವರ್ಷಗಳ ಹಿಂದೆ ಗರ್ಭಿಣಿಯಾಗಿದ್ದೆ. ಈ ಸಿನಿಮಾದಲ್ಲಿ ತೋರಿಸಿದ ಆಸಿಫಾಳಂತ ಹೆಣ್ಣುಮಕ್ಕಳು ನಮ್ಮ ಹಾಸ್ಟಲ್ನಲ್ಲಿ ಇದ್ದರು. ಅವರೆಲ್ಲರೂ ಇಸ್ಲಾಂ ಬಗ್ಗೆ ನಮ್ಮ ತಲೆಗೆ ತುಂಬುತ್ತಿದ್ದರು. ಮತಾಂತರವೊಂದು ಸಾಮಾನ್ಯ ಪ್ರಕ್ರಿಯೆ ಎಂಬಂತೆ ಮಾತನಾಡುತ್ತಿದ್ದರು. ಅವರ ಸಿದ್ಧಾಂತಗಳನ್ನು ಹೇಳುತ್ತಿದ್ದರು. ಆದರೆ ನನ್ನಲ್ಲಿ ಅರಿವಿನ ಕೊರತೆ ಇದ್ದಿದ್ದರಿಂದ ಪ್ರತಿಯಾಗಿ ವಾದಿಸಲು ಸಾಧ್ಯವಾಗಿರಲಿಲ್ಲ’ ಎಂದು ಹೇಳಿದ್ದಾರೆ. ‘ಆ ಹೆಣ್ಣು ಮಕ್ಕಳು ನನ್ನ ಬಳಿ ಬಂದು ಕುರಾನ್ ಬಗ್ಗೆ ಮಾತಾಡುತ್ತಿದ್ದರು. ದೇವರೆಂದರೆ ಅಲ್ಲಾ ಮಾತ್ರ ಎನ್ನುತ್ತಿದ್ದರು. ಬರುಬರುತ್ತ ನಾನು ಇಸ್ಲಾಂ ಬಗ್ಗೆ ಒಲವು ಬೆಳೆಸಿಕೊಂಡು, ಆ ಮತವನ್ನು ಒಪ್ಪಿಕೊಂಡಿದ್ದೆ. ಮನೆಯಲ್ಲಿ ಕೆಳಗೆ ಪೂಜೆ ನಡೆಯುತ್ತಿದ್ದರೆ, ಟೆರೇಸ್ ಮೇಲೆ ನಮಾಜ್ ಮಾಡುತ್ತಿದ್ದೆ‘ ಎಂದು ಹೇಳಿದ್ದಾರೆ.
ಮುಂದುವರಿದು ಮಾತಾಡಿದ ಅನಘಾ ‘ನಾನು ನನ್ನ ಹೆತ್ತವರನ್ನೇ ಕಾಫೀರರು ಎನ್ನುತ್ತಿದ್ದೆ. ಅವರು ನನ್ನ ಕಾಲಿಗೆ ಬಿದ್ದು, ಇದನ್ನು ಮಾಡಬೇಡ..ನೀನು ಹಿಂದು’ ಎಂದು ಕಣ್ಣೀರು ಹಾಕುತ್ತಿದ್ದರು. ಆದರೆ ನನ್ನ ಕಣ್ಣಿಗೆ ಇಸ್ಲಾಂ ಮಂಕು ಕವಿದಿತ್ತು. ‘ನೀವೆಲ್ಲ ಇಸ್ಲಾಂ ಒಪ್ಪಿಕೊಳ್ಳದೆ ಇದ್ದರೆ ನರಕಕ್ಕೆ ಹೋಗುತ್ತೀರಿ’ ಎಂದು ಅಪ್ಪ-ಅಮ್ಮ, ಮನೆಯವರಿಗೆಲ್ಲ ಹೇಳುತ್ತಿದ್ದೆ. ಎಲ್ಲದರಿಂದ ಎದ್ದು ಬಂದಿದ್ದೇನೆ. ಇದೀಗ ದಿ ಕೇರಳ ಸ್ಟೋರಿ ನೋಡಿದ ಮೇಲೆ ಬಿಕ್ಕಿಬಿಕ್ಕಿ ಅತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇನ್ನೊಬ್ಬಳು ಮಾತನಾಡಿ ‘ಬರಿ ಹುಡುಗಿಯರಷ್ಟೇ ಅಲ್ಲ, ಹುಡುಗರನ್ನೂ ಮತಾಂತರ ಮಾಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.