Site icon Vistara News

The Kerala Story: ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿ ನಿಷೇಧ; ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಚಿತ್ರತಂಡ

The Kerala Story makers move Supreme Court Over Ban in West Bengal

#image_title

ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿ (The Kerala Story) ಸಿನಿಮಾವನ್ನು ನಿಷೇಧ ಮಾಡಿದ್ದನ್ನು ಪ್ರಶ್ನಿಸಿ ಚಿತ್ರ ನಿರ್ಮಾಪಕರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ದಿ ಕೇರಳ ಸ್ಟೋರಿ ಸಿನಿಮಾಕ್ಕೆ ಪಶ್ಚಿಮ ಬಂಗಾಳದಲ್ಲಿ (West Bengal)ಹೇರಿದ ನಿಷೇಧವನ್ನು ತೆರವುಗೊಳಿಸಲು ಸೂಚಿಸಬೇಕು ಎಂದ ಅವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಹಾಗೇ, ತಮಿಳುನಾಡಿನಲ್ಲಿ ಕೆಲವು ಮಲ್ಟಿಪ್ಲೆಕ್ಸ್​​ಗಳು ಸಿನಿಮಾ ಪ್ರದರ್ಶನ ರದ್ದುಗೊಳಿಸಿದ್ದನ್ನೂ ಉಲ್ಲೇಖ ಮಾಡಿರುವ ಅವರು ‘ದಿ ಕೇರಳ ಸ್ಟೋರಿ ಸಿನಿಮಾ ಪ್ರದರ್ಶನದ ಬಳಿಕ ಆಗಬಹುದಾದ ಗಲಾಟೆಗೆ ಹೆದರಿಯೇ ಅನೇಕರು ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾ ಹಾಕುತ್ತಿಲ್ಲ. ಹೀಗಾಗಿ ರಾಜ್ಯಾದ್ಯಂತ ಎಲ್ಲ ಥಿಯೇಟರ್​, ಮಲ್ಟಿಪ್ಲೆಕ್ಸ್​ಗಳಿಗೆ ರಕ್ಷಣೆ ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಸುಪ್ರೀಂಕೋರ್ಟ್​ಗೆ ಮನವಿ ಮಾಡಿದ್ದಾರೆ.

ಕೇರಳದ ಹಿಂದು/ಕ್ರಿಶ್ಚಿಯನ್ ಯುವತಿಯರನ್ನು ಸಿರಿಯಾ/ಅಫ್ಘಾನಿಸ್ತಾನಕ್ಕೆ ಕಳಿಸಿ ಇಸ್ಲಾಮ್​ಗೆ ಮತಾಂತರ ಮಾಡುವ/ಲವ್ ಜಿಹಾದ್​ಗೆ ಗುರಿಪಡಿಸುವ ಕಥೆಯನ್ನು ಒಳಗೊಂಡ ದಿ ಕೇರಳ ಸ್ಟೋರಿ ಸಿನಿಮಾ ಒಳಗೊಂಡಿದೆ. ಈ ಚಿತ್ರದ ಬಿಡುಗಡೆಗೆ ಕಾಂಗ್ರೆಸ್​, ಇತರ ಕಮ್ಯೂನಿಸ್ಟ್ ಪಕ್ಷಗಳು ವಿರೋಧಿಸಿದ್ದವು. ಇದರಲ್ಲಿ ಇಸ್ಲಾಮ್​​​ನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿದ್ದರು. ಬಿಡುಗಡೆಗೂ ಮುನ್ನವೇ ಮದ್ರಾಸ್, ಕೇರಳ ಹೈಕೋರ್ಟ್​ಗಳಿಗೆ, ಸುಪ್ರೀಂಕೋರ್ಟ್​ಗೆ ಹಲವರು ಅರ್ಜಿ ಸಲ್ಲಿಸಿದ್ದರು. ಆದರೆ ಯಾವುದೇ ಕೋರ್ಟ್​ಗಳೂ ಪ್ರದರ್ಶನಕ್ಕೆ ತಡೆ ನೀಡಿರಲಿಲ್ಲ. ಮೇ 5ರಂದು ಬಿಡುಗಡೆಯಾಗಿತ್ತು.

ಇದನ್ನೂ ಓದಿ: The Kerala Story: ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಿಷೇಧ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ‘ದಿ ಕೇರಳ ಸ್ಟೋರಿ’ ತೆರಿಗೆ ಮುಕ್ತ

ಆದರೆ ಅದಾಗಿ ಮೂರು ದಿನಕ್ಕೆ, ಅಂದರೆ ಮೇ 8ರಂದು ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ಪ್ರದರ್ಶನವನ್ನು ನಿಷೇಧಿಸಿ ಸಿಎಂ ಮಮತಾ ಬ್ಯಾನರ್ಜಿ ಆದೇಶ ಹೊರಡಿಸಿದ್ದರು. ಈ ಸಿನಿಮಾದಿಂದ ದ್ವೇಷ, ಹಿಂಸಾಚಾರ ಘಟನೆಗಳು ನಡೆಯುವ ಸಾಧ್ಯತೆ ದಟ್ಟವಾಗಿದೆ. ಅಂಥ ಸನ್ನಿವೇಶಗಳು ಎದುರಾಗದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಸಿನಿಮಾ ಬ್ಯಾನ್ ಮಾಡಿದ್ದೇವೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದರು. ದಿ ಕೇರಳ ಸ್ಟೋರಿಯನ್ನು ನಿಷೇಧಿಸಿದ ಮೊದಲ ರಾಜ್ಯ ಪಶ್ಚಿಮ ಬಂಗಾಳ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಚಿತ್ರ ನಿರ್ಮಾಪಕ ವಿಫುಲ್ ಶಾ ‘ನಾವು ಕಾನೂನು ಸಲಹೆ ಪಡೆದು ಮುಂದುವರಿಯುತ್ತೇವೆ. ನಿಷೇಧದ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ’ ಎಂದಿದ್ದರು.

ಇನ್ನು ಪಶ್ಚಿಮ ಬಂಗಾಳದಲ್ಲಿ ಚಿತ್ರವನ್ನು ನಿಷೇಧ ಮಾಡಿದ ಬಗ್ಗೆ ಟೀಕಿಸಿದ್ದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ‘ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರಿಗೆ ಭಯೋತ್ಪಾದಕ ಸಂಘಟನೆಗಳ ಬಗ್ಗೆ ಯಾಕೆ ಸಹಾನುಭೂತಿ? ಕೇರಳದ ಮುಗ್ಧ ಹೆಣ್ಣುಮಕ್ಕಳ ಬಗ್ಗೆ ಯಾಕೆ ಕನಿಕರ ಇಲ್ಲ’ ಎಂದು ಪ್ರಶ್ನಿಸಿದ್ದರು. ಅಷ್ಟೇ ಅಲ್ಲ, ದೆಹಲಿಯಲ್ಲಿ ಅವರು ಸಿನಿಮಾ ನೋಡಿದ್ದಾರೆ.

Exit mobile version