ನವ ದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ 2021ರಲ್ಲಿ ಜಾರಿಗೆ ತಂದಿದ್ದ ನೂತನ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿರುವ ಆರೋಪದಡಿ ತನಿಖೆ ನಡೆಸುತ್ತಿರುವ ಸಿಬಿಐ, ಇಂದು ಬೆಳಗ್ಗೆ ದೆಹಲಿ ಉಪಮುಖ್ಯಮಂತ್ರಿ, ಅಬಕಾರಿ ಸಚಿವ ಮನೀಷ್ ಸಿಸೋಡಿಯಾಗೆ ಸೇರಿದ ಒಟ್ಟು 20 ಸ್ಥಳಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ದೆಹಲಿ ಮತ್ತು ಇನ್ನಿತರ ಏಳು ರಾಜ್ಯಗಳಲ್ಲಿ ಏಕಕಾಲದಲ್ಲಿ ಸಿಬಿಐ ರೇಡ್ ಆಗಿದೆ. ಇದು ರಾಜಕೀಯ ದ್ವೇಷದ ದಾಳಿ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ. ಆದರೂ ಮನೀಷ್ ಸಿಸೋಡಿಯಾ ಮೇಲಿನ ಸಿಬಿಐ ದಾಳಿಗೆ ಕಾರಣಗಳೇನು? ಅವರ ವಿರುದ್ಧ ಆರೋಪಗಳೇನು? ಈ ಬಗ್ಗೆ ಸ್ಥೂಲವಾಗಿ ಐದು ವಿಭಾಗಗಳಲ್ಲಿ ವಿಂಗಡಿಸಿ, ವಿವರಿಸಬಹುದು.
1. ದೆಹಲಿಯ ನೂತನ ಅಬಕಾರಿ ನೀತಿಯಡಿ, ಮದ್ಯ ಮಾರಾಟಕ್ಕೆ ಪರವಾನಗಿ ಪಡೆಯಲು ಟೆಂಡರ್ಗೆ ಅರ್ಜಿ ಸಲ್ಲಿಸಿದವರ ಸುಮಾರು 143.46 ಕೋಟಿ ರೂಪಾಯಿ ಶುಲ್ಕವನ್ನು ಒಂದೇ ಬಾರಿಗೆ ಮನ್ನಾ ಮಾಡಿದ್ದು.
2. ಇದು ಕಾನೂನು ಬಾಹಿರವಾಗಿದ್ದರೂ, ಅಕ್ರಮವಲ್ಲ ಎಂದು ತೋರಿಸಲು ಅಬಕಾರಿ ನೀತಿಯನ್ನು ತಿರುಚಿದ ಆರೋಪ.
3. ಮದ್ಯ ಮಾರಾಟ ಹೊಂದಿದ್ದರೂ ಏರ್ಪೋರ್ಟ್ಗಳಿಗೆ ಮದ್ಯ ತೆಗೆದುಕೊಂಡು ಹೋಗಲು ವಿಶೇಷ ಲೈಸೆನ್ಸ್ ಬೇಕಾಗುತ್ತದೆ. ಹಾಗೆ, ಲೈಸೆನ್ಸ್ ಇಲ್ಲದೆಯೂ ವಿಮಾನ ನಿಲ್ದಾಣಕ್ಕೆ ಲಿಕ್ಕರ್ ತೆಗೆದುಕೊಂಡು ಹೋದವರ ಬಳಿಯಿಂದ ಅದನ್ನು ಮುಟ್ಟುಗೋಲು ಹಾಕಿಕೊಳ್ಳುವ ಬದಲು, ಸುಮಾರು 30 ಕೋಟಿ ರೂಪಾಯಿಯನ್ನು ಮನ್ನಾ ಮಾಡಿದ ಆರೋಪ.
4. ಆಮದು ಮಾಡಿಕೊಂಡ ಬಿಯರ್ ಬೆಲೆಯನ್ನು ಕಡಿಮೆ ಮಾಡಿದ್ದು.
5. ಪರವಾನಗಿಗಳನ್ನು ಮರು ಪರಿಷ್ಕರಣ ಮಾಡಲು ಅವಧಿ ಮೀರಿದರೂ ಹೆಚ್ಚೆಚ್ಚು ಸಮಯ ನೀಡಿದ್ದು.
2021ರ ಏಪ್ರಿಲ್ 15ರಿಂದ ದೆಹಲಿಯಲ್ಲಿ ಜಾರಿಯಾದ ನೂತನ ಅಬಕಾರಿ ನೀತಿಯಲ್ಲಿ ನಡೆದ ಅಕ್ರಮದಲ್ಲಿ ಮುಖ್ಯವಾಗಿ ಕೇಳಿಬಂದಿದ್ದು ಮನೀಷ್ ಸಿಸೋಡಿಯಾ, ಆಯ್ದ ಅಧಿಕಾರಿಗಳು ಮತ್ತು ಕೆಲವು ಖಾಸಗಿ ಮಾರಾಟಗಾರರ ಹೆಸರು. ಹಾಗೇ ಲಿಕ್ಕರ್ ನೂತನ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮೊದಲು ಆರೋಪಿಸಿದ್ದು ದೆಹಲಿ ಲೆಫ್ಟಿನೆಂಟ್ ಗವರ್ನರ್. ಕೊವಿಡ್ 19 ಸಾಂಕ್ರಾಮಿಕ ರೋಗದ ಕಾರಣವೊಡ್ಡಿ, ಮದ್ಯ ವ್ಯಾಪಾರಿಗಳ ಪರವಾನಗಿ ಶುಲ್ಕ 144.36 ಕೋಟಿ ರೂಪಾಯಿ ಮನ್ನಾ ಮಾಡಲಾಗಿದೆ. ಈ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಅಬಕಾರಿ ನೀತಿ | ಮನೀಷ್ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ