ನವ ದೆಹಲಿ: ಕೇರಳದ ಹಿಂದು/ಕ್ರಿಶ್ಚಿಯನ್ ಯುವತಿಯರನ್ನು ಸಿರಿಯಾ, ಅಫ್ಘಾನ್ಗೆ ಕರೆದುಕೊಂಡು ಹೋಗಿ ಇಸ್ಲಾಮ್ಗೆ ಮತಾಂತರ ಮಾಡುವ ಜತೆ ಐಸಿಸ್ ಭಯೋತ್ಪಾದನಾ ಸಂಘಟನೆಗಳಿಗೆ ಸೇರಿಸುವ, ಲವ್ ಜಿಹಾದ್ಗೆ ಗುರಿಪಡಿಸುವ ಕತೆಯನ್ನು ಒಳಗೊಂಡ ದಿ ಕೇರಳ ಸ್ಟೋರಿ (The Kerala Story) ಸಿನಿಮಾವನ್ನು ನಿಷೇಧಿಸಿದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ (Supreme Court) ನೋಟಿಸ್ ನೀಡಿದೆ.
‘ಇಡೀ ದೇಶದಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ಪ್ರದರ್ಶನ ಕಾಣುತ್ತಿರುವಾಗ ನೀವು ನಿಷೇಧಿಸಲು ಕಾರಣವೇನು’ ಎಂದು ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರಶ್ನಿಸಿದೆ. ದಿ ಕೇರಳ ಸ್ಟೋರಿ ಸಿನಿಮಾವನ್ನು ಮಮತಾ ಬ್ಯಾನರ್ಜಿಯವರು ನಿಷೇಧ ಮಾಡಿದ್ದರು. ಅದರ ಬೆನ್ನಲ್ಲೇ ಚಿತ್ರದ ನಿರ್ಮಾಪಕರು ಕಾನೂನು ಹೋರಾಟ ಶುರು ಮಾಡಿದ್ದರು. ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಮತ್ತು ಜಸ್ಟೀಸ್ ಪಿ.ಎಸ್.ನರಸಿಂಹ ಅವರನ್ನೊಳಗೊಂಡ ಪೀಠ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿತ್ತು.
’ದೇಶದ ಬೇರೆ ರಾಜ್ಯಗಳು/ಪ್ರದೇಶಗಳಿಗಿಂತ ಪಶ್ಚಿಮ ಬಂಗಾಳ ಭಿನ್ನವಾಗಿಯೇನೂ ಇಲ್ಲ. ಅಂದ ಮೇಲೆ ಈ ಸಿನಿಮಾ ಪ್ರದರ್ಶನಕ್ಕೆ ಪಶ್ಚಿಮ ಬಂಗಾಳ ರಾಜ್ಯವೇಕೆ ಅವಕಾಶ ಕೊಡುತ್ತಿಲ್ಲ. ದಿ ಕೇರಳ ಸ್ಟೋರಿಯನ್ನು ನೋಡಬಾರದು ಎಂದು ಜನರಿಗೆ ಅನ್ನಿಸಿದರೆ, ಅವರಿಗೆ ಇಷ್ಟವಾಗದೆ ಇದ್ದರೆ ಜನರೇ ಚಿತ್ರಮಂದಿರಗಳಿಗೆ ಹೋಗುವುದಿಲ್ಲ. ನಿಷೇಧ ಮಾಡುವುದು ಯಾವ ಕಾರಣಕ್ಕೆ?’ ಎಂದು ಸುಪ್ರೀಂಕೋರ್ಟ್ ಪ್ರಶ್ನೆ ಮಾಡಿದೆ.
ಇದನ್ನೂ ಓದಿ: The Kerala Story: ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿ ನಿಷೇಧ; ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಚಿತ್ರತಂಡ
ಹಾಗೇ, ‘ತಮಿಳುನಾಡಿನಲ್ಲಿ ದಿ ಕೇರಳ ಸ್ಟೋರಿ ಬಿಡುಗಡೆ ಬೆನ್ನಲ್ಲೇ ಭುಗಿಲೆದ್ದಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ. ದಿ ಕೇರಳ ಸ್ಟೋರಿ ಪ್ರದರ್ಶನಕ್ಕೆ ಎಷ್ಟರ ಮಟ್ಟಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ’ ಎಂದು ಸುಪ್ರೀಂಕೋರ್ಟ್ ಅಲ್ಲಿನ ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿ ನೋಟಿಸ್ ಕೊಟ್ಟಿದೆ. ತಮಿಳುನಾಡಿನಲ್ಲಿ ಅಲ್ಲಿನ ಸರ್ಕಾರ ಸಿನಿಮಾವನ್ನು ಬ್ಯಾನ್ ಮಾಡಿಲ್ಲ. ಆದರೆ ಮೇ 5ರಂದು ಬಿಡುಗಡೆಯಾಗಿ ಎರಡು ದಿನಕ್ಕೆ ರಾಜ್ಯದ ವಿವಿಧ ಥಿಯೇಟರ್ಗಳ ಬಳಿ ಪ್ರತಿಭಟನೆ ನಡೆದಿತ್ತು. ಹೀಗಾಗಿ ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾ ಪ್ರದರ್ಶನ ರದ್ದುಗೊಳಿಸಲು ಅಲ್ಲಿನ ಮಲ್ಟಿಪ್ಲೆಕ್ಸ್ಗಳ ಮಾಲೀಕರು ನಿರ್ಧಾರ ಮಾಡಿದ್ದಾರೆ. ತಮಿಳುನಾಡಿನಲ್ಲಿ ಪ್ರತಿಭಟನೆ ಶಾಂತಗೊಳಿಸಲು, ಯಾವುದೇ ಗಲಾಟೆ ನಡೆಯದಂತೆ ತಡೆಯಲು ಅಲ್ಲಿನ ಸರ್ಕಾರ ವಿಫಲವಾಗಿದೆ. ಹೀಗಾಗಿಯೇ ರಾಜ್ಯದಲ್ಲಿ ಚಿತ್ರ ಪ್ರದರ್ಶನ ಸರಿಯಾಗಿ ಆಗುತ್ತಿಲ್ಲ ಎಂದು ಚಿತ್ರನಿರ್ಮಾಪಕರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.