Site icon Vistara News

ಇ ಡಿ ರೇಡ್‌ ಮಧ್ಯೆ ಕಳ್ಳರ ಕೈಚಳಕ; ತನಿಖಾ ಏಜೆನ್ಸಿ ತಲುಪುವ ಮೊದಲೇ ಪಾರ್ಥ ಚಟರ್ಜಿ ಮನೆಗೆ ಕನ್ನ

Partha Chatterjee'

ಕೋಲ್ಕತ್ತ: ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಇ ಡಿ ಕೈವಶದಲ್ಲಿದ್ದಾರೆ. ಆದರೆ ಅವರಿಗೆ ಎದೆನೋವು ಕಾಣಿಸಿಕೊಂಡಿರುವುದರಿಂದ ಭುವನೇಶ್ವರದ ಏಮ್ಸ್‌ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇ ಡಿ ಅಧಿಕಾರಿಗಳು ಪಾರ್ಥ ಚಟರ್ಜಿಗೆ ಸೇರಿದ ವಿವಿಧ ಮನೆಗಳು, ಸ್ಥಳಗಳ ಮೇಲೆ ನಿರಂತರವಾಗಿ ರೇಡ್‌ ಮಾಡುತ್ತಿದ್ದಾರೆ. ಇದೆಲ್ಲದರ ಮಧ್ಯೆ ʼಕಂಡವರ ಮದುವೆಯಲ್ಲಿ ಉಂಡವನೇ ಜಾಣʼ ಎಂಬ ಮಾತಿನಂತೆ ಸಿಕ್ಕಿದ್ದೇ ಅವಕಾಶವೆಂದು ಕಳ್ಳರೂ ಪಾರ್ಥ ಚಟರ್ಜಿ ಮನೆಗೆ ಕನ್ನ ಹಾಕಿದ್ದಾರೆ. ಈ ಬಗ್ಗೆ ಪಶ್ಚಿಮ ಬಂಗಾಳ ಪೊಲೀಸರೇ ಮಾಹಿತಿ ನೀಡಿದ್ದಾರೆ.

ದಕ್ಷಿಣ 24ಪರಗಣದಲ್ಲಿರುವ ಗಾರ್ಡನ್‌ ಹೋಂನಲ್ಲಿ ಕಳ್ಳತನವಾಗಿದೆ. ಇದೊಂದು ಐಷಾರಾಮಿ ಮನೆಯಾಗಿದ್ದು ಪಾರ್ಥ ಚಟರ್ಜಿ ಪುತ್ರಿ ಸೋಹಿನಿ ಚಟರ್ಜಿ ಹೆಸರಿನಲ್ಲಿ ಇದೆ. ಸೋಹಿನಿಗೆ ಮದುವೆಯಾಗಿದ್ದು, ಅವರು ವಿದೇಶದಲ್ಲಿ ನೆಲೆಸಿದ್ದಾರೆ. ಹಾಗಂತ ಈ ಮನೆ ಖಾಲಿಯೇನೂ ಇರಲಿಲ್ಲ. ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಪದೇಪದೆ ಇಲ್ಲಿಗೆ ಬರುತ್ತಿದ್ದರು. ಈಗ ಅರ್ಪಿತಾ ಮತ್ತು ಪಾರ್ಥ ಇಬ್ಬರೂ ಇಲ್ಲಿಲ್ಲ ಮತ್ತು ಅವರಿಗೆ ಸಂಬಂಧಪಟ್ಟ ಮನೆಗಳೆಲ್ಲಲ್ಲ ಇ ಡಿ ಶೋಧ ನಡೆಯುತ್ತಿದೆ. ಇದೇ ಹೊತ್ತಲ್ಲಿ ಬುಧವಾರ ಮಧ್ಯರಾತ್ರಿ ನಾಲ್ಕು ಜನ ಈ ಮನೆಗೆ ಒಂದು ಟ್ರಕ್‌ನಲ್ಲಿ ಬಂದು ಇಳಿದಿದ್ದಾರೆ. ಅವರು ಮೊದಲು ಮನೆಯ ಸುತ್ತ ಒಂದು ಲೈನ್‌ ಎಳೆದುಕೊಂಡಿದ್ದಾರೆ. ಬಳಿಕ ಬಾಗಿಲಿಗೆ ಹಾಕಿದ್ದ ಬೀಗ ಒಡೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾಗಿಲು ಒಡೆಯುವ ಶಬ್ದ ಕೇಳಿ ಅಕ್ಕಪಕ್ಕದ ಮನೆಯವರೆಲ್ಲ ಹೊರಗೆ ಬಂದಿದ್ದರು. ಆದರೆ ಮನೆಯ ಸುತ್ತ ಎಳೆದ ಗೆರೆ, ಟ್ರಕ್‌ ಎಲ್ಲ ನೋಡಿ ಈ ವ್ಯಕ್ತಿಗಳ ಇ ಡಿ ಅಧಿಕಾರಿಗಳು ಎಂದೇ ಮೊದಲು ಭಾವಿಸಲಾಗಿತ್ತು. ಆದರೆ ಮನೆಯಿಂದ ಬೆಲೆಬಾಳುವ ಪೀಠೋಪಕರಣಗಳು, ಫ್ರಿಜ್‌ ಮತ್ತಿತರ ವಸ್ತುಗಳನ್ನು ಕೊಂಡೊಯ್ಯುತ್ತಿದ್ದಾಗ ಅನುಮಾನ ಬಂದು ಅವರನ್ನು ಕೇಳಿದ್ದಕ್ಕೆ, ನಮಗೆ ಬೆದರಿಕೆ ಹಾಕಿದರು ಎಂದು ಸ್ಥಳೀಯರು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಹಾಗೇ, ಬರೂಯಿಪುರ್ ಜಿಲ್ಲೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.

ಈ ಮನೆ ಇನ್ನೂ ಶೋಧವಾಗಿರಲಿಲ್ಲ
ಪಾರ್ಥ ಚಟರ್ಜಿಗೆ ಸೇರಿದ ಒಂದೊಂದೇ ಫ್ಲ್ಯಾಟ್‌, ಮನೆಗಳನ್ನು ರೇಡ್‌ ಮಾಡುತ್ತಿರುವ ಇ ಡಿ ಅಧಿಕಾರಿಗಳು ಇನ್ನೂ ಈ ಮನೆಗೆ ಬಂದಿರಲಿಲ್ಲ. ಇನ್ನೆರಡು ದಿನಗಳಲ್ಲಿ ಈ ಮನೆ ಕೂಡ ಶೋಧ ನಡೆಸಲು ನಿರ್ಧರಿಸಿದ್ದರು. ಆದರೆ ಅಷ್ಟರಲ್ಲಿಯೇ ದುಷ್ಕರ್ಮಿಗಳು ತಮ್ಮ ಕೈಚಳಕ ತೋರಿಸಿದ್ದಾರೆ. ಇ ಡಿ ಅಧಿಕಾರಿಗಳ ಸೋಗಿನಲ್ಲಿಯೇ ಬಂದು ಹಣ, ಪೀಠೋಪಕರಣಗಳನ್ನು ಕೊಂಡೊಯ್ದಿದ್ದಾರೆ. ಅಂದಹಾಗೇ, ಈ ಕಳ್ಳತನವನ್ನು ರಾಜಕೀಯ ಪಕ್ಷಗಳು ಖಂಡಿಸಿವೆ. ಸಿಪಿಐ (ಎಂ) ಪಕ್ಷದ ನಾಯಕ ಸುಜನ್‌ ಚಕ್ರವರ್ತಿ, ಇದೊಂದು ಉದ್ದೇಶ ಪೂರ್ವಕವಾಗಿ ನಡೆದ ಕಳ್ಳತನ ಎಂದೇ ಹೇಳಿದ್ದಾರೆ.

ಇದನ್ನೂ ಓದಿ: SSC scam | ಸಚಿವ ಸ್ಥಾನ ಕಳೆದುಕೊಂಡ ಪಾರ್ಥ ಚಟರ್ಜಿ; ಸಿಎಂ ಮಮತಾ ಬ್ಯಾನರ್ಜಿ ಆದೇಶ

Exit mobile version