Site icon Vistara News

ಉನ್ನತ ಹುದ್ದೆಗಳಿಗಾಗಿ ಮುಸ್ಲಿಮರು ಸಹಿಷ್ಣುತೆಯ ಮುಖವಾಡ ಹಾಕಿಕೊಳ್ಳುತ್ತಾರೆ: ವಿವಾದ ಸೃಷ್ಟಿಸಿದ ಕೇಂದ್ರ ಸಚಿವ

Satya Pal Singh Baghel

#image_title

ನವ ದೆಹಲಿ: ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಇಲಾಖೆ ಸಹಾಯಕ ಸಚಿವ ಸತ್ಯಪಾಲ್ ಸಿಂಗ್ ಬಾಘೇಲ್​ (Satya Pal Singh Baghel) ಅವರು ಮುಸ್ಲಿಮರ ಕುರಿತಾಗಿ ನೀಡಿದ ಹೇಳಿಕೆಯೊಂದು ವಿವಾದ ಸೃಷ್ಟಿಸಿದೆ. ‘‘ದೇಶದಲ್ಲಿ ಬೆರಳೆಣಿಕೆಯಷ್ಟು ಸಂಖ್ಯೆಯ ಮುಸ್ಲಿಮರು (Muslims) ಮಾತ್ರ ಸಹಿಷ್ಣುಗಳಾಗಿದ್ದಾರೆ. ಅದರಲ್ಲೂ ಅನೇಕರು ‘ಹುದ್ದೆ’ಗಳಿಗಾಗಿ ಈ ಸಹಿಷ್ಣುತೆಯ ಮುಖವಾಡ ಹಾಕಿಕೊಂಡಿರುತ್ತಾರೆ’’ ಸತ್ಯಪಾಲ್ ಸಿಂಗ್​ ಹೇಳಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸತ್ಯಪಾಲ್ ಸಿಂಗ್ ಬಾಘೇಲ್​ ‘ಸಹಿಷ್ಣುತೆಯನ್ನು ಮೈಗೂಡಿಸಿಕೊಂಡ ಮುಸ್ಲಿಮರು ಸಾವಿರ ಸಂಖ್ಯೆಯಲ್ಲಿ ಇಲ್ಲ. ಹಾಗೇ ತಾವು ಸಹಿಷ್ಣುಗಳು ಎಂದು ಹೇಳಿಕೊಳ್ಳುವ ಎಲ್ಲ ಮುಸ್ಲಿಮರೂ ನಿಜದಲ್ಲಿ ಸಹಿಷ್ಣುಗಳು ಆಗಿರುವುದಿಲ್ಲ. ರಾಜ್ಯಪಾಲರು, ಉಪರಾಷ್ಟ್ರಪತಿ, ಉಪಕುಲಪತಿ ಮತ್ತಿತರರ ಹುದ್ದೆಗಳಿಗಾಗಿ ಅವರು ಸಹಿಷ್ಣುತೆಯ ಮುಖವಾಡ ಹಾಕಿಕೊಂಡಿರುತ್ತಾರೆ. ಅದು ಹುದ್ದೆಗಾಗಿ ಅವರು ಮಾಡುತ್ತಿರುವ ತಂತ್ರವಾಗಿರುತ್ತದೆ. ಹುದ್ದೆಯಿಂದ ನಿವೃತ್ತರಾದ ಮೇಲೆ ಅವರ ನಿಜಬಣ್ಣ ಬಯಲಾಗುತ್ತದೆ. ಮನಸೊಳಗೆ ಏನಿದೆಯೋ ಅದನ್ನು ಮಾತನಾಡಲು ಶುರು ಮಾಡುತ್ತಾರೆ’ ಹೇಳಿದ್ದಾರೆ.

ಇದನ್ನೂ ಓದಿ: Kerala Train Fire: ರೈಲಿಗೆ ಬೆಂಕಿ ಇಟ್ಟ ಶಾರುಖ್ ಸೈಫಿ ಇಸ್ಲಾಂ ಮೂಲಭೂತವಾದಿ ಜಾಕೀರ್ ನಾಯ್ಕ್‌ನ ಅನುಯಾಯಿ

ಈ ಸಮಾರಂಭದಲ್ಲಿ ಸತ್ಯಪಾಲ್ ಸಿಂಗ್ ಬಾಘೇಲ್ ಮಾತಾಡುವುದಕ್ಕೂ ಮುಂಚಿತವಾಗಿ ಮಾತನಾಡಿದ್ದ ಕೇಂದ್ರ ಮಾಹಿತಿ ಆಯೋಗದ ಆಯುಕ್ತ ಉದಯ್​ ಮಹುಕರ್ ಅವರು ‘ಭಾರತವು ಇಸ್ಲಾಂ ಮೂಲಭೂತವಾದದ ವಿರುದ್ಧ ಪ್ರಬಲವಾಗಿ ಹೋರಾಡಬೇಕು. ಆದರೆ ಸಹಿಷ್ಣು ಮುಸ್ಲಿಮರನ್ನು ನಮ್ಮ ಜತೆಯಲ್ಲೇ ಕರೆದುಕೊಂಡು ಮುನ್ನಡೆಯಬೇಕು’ ಎಂದಿದ್ದರು. ಹಾಗೇ, ಅಕ್ಬರ ತನ್ನ ಆಡಳಿತದಲ್ಲಿ ಹಿಂದು-ಮುಸ್ಲಿಂ ಸಮುದಾಯದ ನಡುವೆ ಒಗ್ಗಟ್ಟು ರೂಪಿಸಲು ಮುಂದಾಗಿದ್ದ ಎಂದೂ ಹೇಳಿದ್ದರು. ಆದರೆ ಸತ್ಯಪಾಲ್ ಅವರು ತಮ್ಮ ಮಾತಿನಲ್ಲಿ ಉದಯ್​​ ಮಹುಕರ್​ ಹೇಳಿಕೆಗಳನ್ನು ನಿರಾಕರಿಸಿದ್ದಾರೆ. ಸಹಿಷ್ಣುತೆ ಎಂಬುದು ಮುಸ್ಲಿಮರು ಹಾಕಿಕೊಂಡ ಮುಖವಾಡ ಮತ್ತು ಅಕ್ಬರ್​ನದ್ದು ಕೇವಲ ರಾಜಕೀಯ ತಂತ್ರಗಾರಿಕೆ ಎಂದು ಹೇಳಿದ್ದಾರೆ.

Exit mobile version