ನವ ದೆಹಲಿ: 2019ರ ಲೋಕಸಭೆ ಚುನಾವಣೆ ವೇಳೆಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡುತ್ತ ‘ಎಲ್ಲ ಕಳ್ಳರ ಉಪನಾಮವೂ ಮೋದಿ ಎಂದೇ ಯಾಕೆ ಇರುತ್ತದೆ? ಈ ಬಗ್ಗೆ ನನಗೆ ಅಚ್ಚರಿಯಾಗುತ್ತದೆ’ ಎಂದು ಹೇಳಿದ್ದ ಪ್ರಕರಣದಲ್ಲಿ ರಾಹುಲ್ ಗಾಂಧಿ ದೋಷಿ ಎಂದು ಸೂರತ್ ಕೋರ್ಟ್ ಮಾ.23ರಂದು ತೀರ್ಪು ನೀಡಿದೆ. ರಾಹುಲ್ ಗಾಂಧಿ (Rahul Gandhi)ಗೆ ಕೋರ್ಟ್ 30 ದಿನಗಳ ಜಾಮೀನು ನೀಡಿದೆ. ಅಷ್ಟರೊಳಗೆ ಮೇಲಿನ ಹಂತದ ಕೋರ್ಟ್ನಲ್ಲಿ ಅವರ ಶಿಕ್ಷೆ ರದ್ದಾಗಬೇಕು ಇಲ್ಲವೇ, ಸೂರತ್ ಕೋರ್ಟ್ ತೀರ್ಪಿಗೆ ತಡೆ ಸಿಗಬೇಕು. ಅದಾಗದೆ ಇದ್ದರೆ ರಾಹುಲ್ ಗಾಂಧಿ ತಮ್ಮ ಲೋಕಸಭಾ ಸದಸ್ಯತ್ವವನ್ನೂ ಕಳೆದುಕೊಳ್ಳಲಿದ್ದಾರೆ ಎಂದೂ ಹೇಳಲಾಗುತ್ತಿದೆ.
ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಇಂದು ರಾಹುಲ್ ಗಾಂಧಿಯವರು ಸಂಸತ್ತಿಗೆ ಆಗಮಿಸಿದರು. ಸಂಸತ್ತಿನಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಚೇಂಬರ್ನಲ್ಲಿ ನಡೆದ ಕಾಂಗ್ರೆಸ್ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿಯವರೂ ಪಾಲ್ಗೊಂಡಿದ್ದರು. ಸಭೆಯ ಬಳಿಕ ಸಂಸತ್ತಿನಿಂದ ಹೊರಗೆ ಹೋಗುವಾಗ ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಅವರ ಕೈ ಹಿಡಿದು, ಮೆಟ್ಟಿಲು ಇಳಿಸಿದರು. ಈ ವೇಳೆ ಅವರು ‘ನಾನು ನಿಮ್ಮನ್ನು ಮುಟ್ಟಿದ್ದಕ್ಕೆ, ನಾನು ನನ್ನ ಮೂಗಿನ ಸಿಂಬಳವನ್ನು ನಿಮಗೆ ಒರೆಸಿದೆ ಎಂದು ಹೇಳಿದ್ದಾರೆ ನೋಡಿ, ಅಂದು ನಿಮಗೆ ಸಹಾಯ ಮಾಡಲು ಬಂದೆ, ಆದರೆ ಅವರು ಹೀಗೆ ಹೇಳಿದರು’ ಎಂದು ರಾಹುಲ್ ಗಾಂಧಿಯವರು ಮಲ್ಲಿಕಾರ್ಜುನ್ ಖರ್ಗೆಗೆ ಹೇಳಿದರು.
ಕೆಲವು ದಿನಗಳ ಹಿಂದೆ ರಾಹುಲ್ ಗಾಂಧಿಯವರು ಮಲ್ಲಿಕಾರ್ಜುನ್ ಖರ್ಗೆ ಅವರ ಬಳಿ ‘ನಮ್ಮ ಕಾರಿನಲ್ಲಿಯೇ ನಿಮ್ಮನ್ನು ಮನೆಗೆ ಡ್ರಾಪ್ ಮಾಡುತ್ತೇನೆ ಎಂದು ಹೇಳಿದ್ದರು. ಆಗ ಅವರು ಖರ್ಗೆಯವರ ಬೆನ್ನನ್ನು ಮುಟ್ಟಿದ್ದರು. ಆದರೆ ಖರ್ಗೆಯವರ ಬೆನ್ನನ್ನೂ ಮುಟ್ಟುವುದಕ್ಕು ಮೊದಲು ರಾಹುಲ್ ಗಾಂಧಿ ತಮ್ಮ ಮೂಗಿನಲ್ಲಿ ಬೆರಳು ಹಾಕಿದ್ದರು ಎಂದು ಹೇಳಿದ್ದ ಬಿಜೆಪಿ, ರಾಹುಲ್ ಗಾಂಧಿಯವರು ಮಲ್ಲಿಕಾರ್ಜುನ್ ಖರ್ಗೆಯನ್ನು ಟಿಶ್ಯೂ ಪೇಪರ್ನಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿತ್ತು. ಇಂದು ರಾಹುಲ್ ಗಾಂಧಿ ಇದೇ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಅಂದು ವೈರಲ್ ಆಗಿದ್ದ ವಿಡಿಯೊ:
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ರಾಹುಲ್ ಗಾಂಧಿಗೆ ಜೈಲು ಶಿಕ್ಷೆ: ಬೇಕಾಬಿಟ್ಟಿ ಹೇಳಿಕೆ ನೀಡುವ ರಾಜಕಾರಣಿಗಳಿಗೆ ಎಚ್ಚರಿಕೆಯ ಪಾಠ
ರಾಹುಲ್ ಗಾಂಧಿಯವರು ಇಂದು ಕೆಲ ಹೊತ್ತುಗಳ ಕಾಲ ಮಾತ್ರ ಸಂಸತ್ತಿನಲ್ಲಿ ಇದ್ದರು. ಆದರೆ ಅವರೀಗ ಸದ್ಯ ಇಕ್ಕಟ್ಟಿನ ಸ್ಥಿತಿಯಲ್ಲಿಯೇ ಇದ್ದಾರೆ. ಒಂದೊಮ್ಮೆ ಅವರಿಗೆ ವಿಧಿಸಲಾದ ಜೈಲು ಶಿಕ್ಷೆ 30 ದಿನಗಳ ಒಳಗೆ ರದ್ದಾಗದೆ ಇದ್ದರೆ, ಅವರು ಸಹಜವಾಗಿಯೇ ಸಂಸದನ ಸ್ಥಾನದಿಂದ ಅನರ್ಹರಾಗುತ್ತಾರೆ ಎಂದು ವಕೀಲ, ಮಾಜಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಕೂಡ ಹೇಳಿದ್ದಾರೆ. ಅಷ್ಟೇ ಅಲ್ಲ, ರಾಹುಲ್ ಗಾಂಧಿಯವರು 8ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸಬಹುದಾಗಿದೆ. ಇನ್ನು ರಾಹುಲ್ ಗಾಂಧಿಯವರು ಈಗಾಗಲೇ ಸೂರತ್ ಕೋರ್ಟ್ ತೀರ್ಪಿನ ವಿರುದ್ಧ ಸೆಷನ್ಸ್ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಪ್ಲ್ಯಾನ್ ಮಾಡುತ್ತಿದ್ದಾರೆ. ಹಾಗೊಮ್ಮೆ ಸೆಷನ್ಸ್ ಕೋರ್ಟ್ ಈ ಅರ್ಜಿ ವಿಚಾರಣೆಗೆ ನಿರಾಕರಿಸಿದರೆ, ನೇರವಾಗಿ ಸುಪ್ರೀಂಕೋರ್ಟ್ಗೇ ಹೋಗಲಿದ್ದಾರೆ ಎಂದು ಹೇಳಲಾಗಿದೆ.