Site icon Vistara News

ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್‌ ಪ್ರಕರಣ; ಯುಎಇಯಿಂದ ಆಗಮಿಸಿದ್ದ ವ್ಯಕ್ತಿಯಲ್ಲಿ ಸೋಂಕು

Monkeypox

ತಿರುವನಂತಪುರಂ: ಭಾರತದಲ್ಲಿ ಮಂಕಿಪಾಕ್ಸ್‌ ಸೋಂಕಿತರ ಸಂಖ್ಯೆ ಮೂರಕ್ಕೇರಿಕೆಯಾಗಿದೆ. ಈ ಬಾರಿಯೂ ಕೇರಳದಲ್ಲೇ ದಾಖಲಾಗಿದೆ. ಯುಎಇಯಿಂದ ಮಲಪ್ಪುರಮ್‌ಗೆ ಜುಲೈ 6ರಂದು ಆಗಮಿಸಿದ್ದ 35ವರ್ಷದ ವ್ಯಕ್ತಿಯೊಬ್ಬರಲ್ಲಿ ಈಗ ಸೋಂಕು ದೃಢಪಟ್ಟಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ತಿಳಿಸಿದ್ದಾರೆ. ಇವರಿಗೆ ಜುಲೈ 13ರಿಂದ ತುಂಬ ಜ್ವರ ಕಾಣಿಸಿಕೊಂಡಿತ್ತು. ಮಂಕಿಪಾಕ್ಸ್‌ ಲಕ್ಷಣ ಕಂಡುಬಂದಿದ್ದರಿಂದ ಅವರ ರಕ್ತದ ಮಾದರಿಯನ್ನು ಪುಣೆಗೆ ಕಳಿಸಲಾಗಿತ್ತು. ಅದರ ವರದಿ ಬಂದಿದ್ದು, ಮಂಕಿಪಾಕ್ಸ್‌ ಇರವುದು ದೃಢಪಟ್ಟಿದೆ. ಸದ್ಯ ಅವರು ಮಂಜೇರಿಯಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೊಟ್ಟಮೊದಲು ಇಂಗ್ಲೆಂಡ್‌ನಲ್ಲಿ ಪತ್ತೆಯಾಗದ ಮಂಕಿಪಾಕ್ಸ್‌ ಭಾರತದಲ್ಲಿ ಕಾಣಿಸಿಕೊಂಡಿದ್ದು ಜುಲೈ 15ರಂದು. ಅಂದು ಕೂಡ ಯುಎಇಯಿಂದ ಬಂದ ವ್ಯಕ್ತಿಯಲ್ಲೇ ಸೋಂಕು ಕಾಣಿಸಿತ್ತು. ಅದಾದ ಮೇಲೆ ಎರಡನೇ ಕೇಸ್‌ ದಾಖಲಾಗಿದ್ದು ಜುಲೈ 18ಕ್ಕೆ. ದುಬೈನಿಂದ ಮಂಗಳೂರಿಗೆ ಆಗಮಿಸಿ, ಅಲ್ಲಿಂದ ಕೇರಳದ ಕಣ್ಣೂರಿಗೆ ಹೋಗಿದ್ದ 31ವರ್ಷದ ವ್ಯಕ್ತಿಯಲ್ಲೂ ಮಂಕಿಪಾಕ್ಸ್‌ ಇರುವುದು ದೃಢಪಟ್ಟಿತ್ತು. ಮಂಕಿಪಾಕ್ಸ್‌ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಏರ್‌ಪೋರ್ಟ್‌ಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಕೇರಳದಲ್ಲಿ ಕೂಡ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ.

ಇದನ್ನೂ ಓದಿ: Monkeypox | ಕರ್ನಾಟಕಕ್ಕೆ ಮಂಕಿಪಾಕ್ಸ್​ ಆತಂಕ: ರಾಜ್ಯದ 21 ಪ್ರಯಾಣಿಕರ ಮೇಲೆ ನಿಗಾ

ಮಂಕಿಪಾಕ್ಸ್‌ ಲಕ್ಷಣಗಳೇನು?
1. ಜ್ವರ, ಆಯಾಸ, ತಲೆ ನೋವು, ಮಾಂಸ ಖಂಡಗಳಲ್ಲಿ ನೋವು, ಚಳಿ, ಬೆನ್ನು ನೋವು, ಗಂಟಲು ನೋವು, ಒಣ ಕೆಮ್ಮು, ಉಸಿರಾಟದ ತೊಂದರೆ.
2.ಮೈಮೇಲೆ ಸಣ್ಣ ಗುಳ್ಳೆಗಳು ಏಳುತ್ತವೆ. ಬಳಿಕ ಅದು ದೊಡ್ಡದಾಗಿ ಕೀವು ತುಂಬುತ್ತದೆ.
3.ಬಾಯಿಯ ಒಳಗೆ, ಕಣ್ಣಿನ ಒಳಭಾಗ, ಗುದದ್ವಾರಗಳಲ್ಲಿ ಈ ಗುಳ್ಳೆ, ದದ್ದು ಉಂಟಾಗುತ್ತದೆ.

ಹೇಗೆ ಹರಡುತ್ತದೆ?
ಮಂಕಿಪಾಕ್ಸ್‌ ರೋಗ ಒಬ್ಬರಿಂದ ಒಬ್ಬರಿಗೆ ಪ್ರಸರಣಗೊಳ್ಳುತ್ತದೆ. ಮಂಕಿಪಾಕ್ಸ್‌ ಸೋಂಕಿತ ಮನುಷ್ಯ ಅಥವಾ ಪ್ರಾಣಿಯ ಗಾಯದಿಂದ ಒಸರುವ ದ್ರವ ತಗುಲಿದರೆ, ಉಸಿರಾಟದ ಹನಿಗಳು, ಎಂಜಲು ಅಥವಾ ಸೋಂಕಿತ ಮಲಗಿದ್ದ ಜಾಗದಲ್ಲೇ ಇನ್ನೊಬ್ಬರು ಮಲಗಿದಾಗ ರೋಗ ಹರಡುತ್ತದೆ. ಸದ್ಯ ಭಾರತದಲ್ಲಿ ಕಾಣಿಸಿಕೊಂಡ ಮೂರೂ ಪ್ರಕರಣಗಳು ಕೇರಳದಲ್ಲೇ ದಾಖಲಾಗಿವೆ ಮತ್ತು ಈ ಮೂವರೂ ಹೊರದೇಶದಿಂದಲೇ ಬಂದವರಾಗಿದ್ದಾರೆ.

ಇದನ್ನೂ ಓದಿ: Monkeypox: ಕೇರಳದಲ್ಲಿ ಪತ್ತೆಯಾಯ್ತು ಮತ್ತೊಂದು ಮಂಕಿಪಾಕ್ಸ್‌ ಪ್ರಕರಣ; ದೇಶದಲ್ಲಿದು 2ನೇ ಕೇಸ್‌

Exit mobile version