‘ಯಾವುದೋ ಕಾರಣಕ್ಕಾಗಿ ಕೆಲಸಕ್ಕೆ ರಜಾ ಹಾಕಿರುತ್ತೀರಿ, ಅದೇ ಮೂಡ್ನಲ್ಲೇ ಬೆಳಗ್ಗೆ ಎದ್ದು ರಿಲ್ಯಾಕ್ಸ್ ಆಗುತ್ತಿರುವ ಹೊತ್ತಲ್ಲೇ, ಕಂಪನಿಯ ಬಾಸ್ ಕಡೆಯಿಂದಲೋ, ಸಹೋದ್ಯೋಗಿಗಳ ಕಡೆಯಿಂದಲೋ ಫೋನ್ ಬರುತ್ತದೆ, ‘ಇದೊಂದು ಕೆಲಸ ಅರ್ಜೆಂಟ್ ಆಗಿ ಆಗಬೇಕಿತ್ತು, ಚೆಕ್ ಮಾಡ್ತೀರಾ’? ಎಂದು ಅತ್ತಲಿನವರು ಹೇಳುತ್ತಾರೆ. ಅಥವಾ ಯಾವುದೋ ಪ್ರಾಜೆಕ್ಟ್ ಸಂಬಂಧಪಟ್ಟ ಮೇಲ್ ಬರುತ್ತದೆ, ಮೆಸೇಜ್ ಬರುತ್ತದೆ. ಅದಕ್ಕೆಲ್ಲ ನೀವು ಉತ್ತರಿಸಬೇಕಾಗುತ್ತದೆ, ನಿಮಗೆ ಇಷ್ಟವಿರುತ್ತದೆಯೋ, ಇಲ್ಲವೋ ಕಂಪನಿ ಕೆಲಸಕ್ಕೆ ಬದ್ಧತೆ ತೋರಿಸಬೇಕಾಗುತ್ತದೆ. ಮೇಲಧಿಕಾರಿಗಳು ಹೇಳಿದ್ದಾರೆಂದು, ರಜಾ ಮೂಡ್ನಿಂದ ಹೊರಬಂದು ಲ್ಯಾಪ್ಟಾಪ್ ಹಿಡಿಯಬೇಕಾಗುತ್ತದೆ., ಅಷ್ಟು ಅನಿವಾರ್ಯವೆಂದರೆ ವಾಪಸ್ ಆಫೀಸಿಗೆ ಹೊರಡಬೇಕಾಗುತ್ತದೆ. ಅಲ್ಲಿಗೆ ನಿಮ್ಮ ರಜಾ ನಿಮಗೆ ತಪ್ಪಿಹೋಗುತ್ತದೆ ಅಥವಾ ಪೂರ್ತಿದಿನ ರಜಾ ಹಾಕಿ ಅದರಲ್ಲೂ ಒಂದಷ್ಟು ಹೊತ್ತು ಕೆಲಸವನ್ನೇ ಮಾಡಬೇಕಾಗಿ ಬರುತ್ತದೆ’-ಇಂಥ ಅನುಭವ ನಮ್ಮ-ನಿಮ್ಮೆಲ್ಲರಿಗೂ ಒಂದಲ್ಲ ಒಂದು ಬಾರಿ ಆಗಿಯೇ ಇರುತ್ತದೆ..!
ಆದರೆ ಡ್ರೀಮ್ 11 ಎಂಬ ಫ್ಯಾಂಟಸಿ ಸ್ಪೋರ್ಟ್ಸ್ ಕಂಪನಿ ತನ್ನ ಉದ್ಯೋಗಿಗಳಿಗೆ ಇಂಥ ಅನುಭವ ಕೊಡಲು ಸಿದ್ಧವಿಲ್ಲ ಎಂದು ಹೇಳಿಕೊಂಡಿದೆ. ಅಷ್ಟೇ ಅಲ್ಲ, ಇದಕ್ಕೆ ಸಂಬಂಧಪಟ್ಟಂತೆ ಒಂದು ಕಠಿಣ ನೀತಿಯನ್ನು ಜಾರಿ ಮಾಡಿದೆ. ಈ ನಿಯಮದ ಅನ್ವಯ ಡ್ರೀಮ್ 11 ಕಂಪನಿಯ ಯಾವುದೇ ಉದ್ಯೋಗಿಗಳು ರಜಾ ಹಾಕಿದ್ದಾಗ, ಅವರನ್ನು ಸಹೋದ್ಯೋಗಿಗಳು, ಮೇಲಧಿಕಾರಿಗಳು ಡಿಸ್ಟರ್ಬ್ ಮಾಡುವಂತೆಯೇ ಇಲ್ಲ. ಹಾಗೊಮ್ಮೆ ಮಾಡಿದ್ದೇ ಆದಲ್ಲಿ, ಅಂಥವರಿಗೆ 1 ಲಕ್ಷ ರೂಪಾಯಿ ದಂಡ ವಿಧಿಸುವುದಾಗಿ ತಿಳಿಸಿದೆ.
ಕೆಲಸದ ದಿನಗಳಲ್ಲಿ ಉದ್ಯೋಗಿಗಳು ನಿರಂತರವಾಗಿ ಅದರಲ್ಲೇ ತೊಡಗಿಕೊಂಡಿರುತ್ತಾರೆ. ಕಂಪನಿ ನಿಯಮಗಳಿಗೆ ಒಳಪಟ್ಟು, ನೂರೆಂಟು ಒತ್ತಡ ಹೊತ್ತುಕೊಂಡು ಕೆಲಸ ಮಾಡುತ್ತಾರೆ. ಹೀಗಾಗಿ ಅವರು ರಜಾ ಹಾಕಿದಾಗ ತಮ್ಮ ಕುಟುಂಬದವರಿಗೆ ಸಾಕಷ್ಟು ಸಮಯ ಕೊಟ್ಟು, ಅವರೊಂದಿಗೆ ಸಂತೋಷದಿಂದ ಕಾಲ ಕಳೆಯಬೇಕಾಗುತ್ತದೆ. ಅವರ ವೈಯಕ್ತಿಕ ಕೆಲಸಗಳನ್ನೂ ಮಾಡಿಕೊಳ್ಳುವ ಅಗತ್ಯ ಇರುತ್ತದೆ. ಒಬ್ಬ ಉದ್ಯೋಗಿಯ ವೃತ್ತಿ ಜೀವನ ಎಷ್ಟು ಮುಖ್ಯವೋ, ಅಷ್ಟೇ ಪ್ರಾಮುಖ್ಯತೆ ಅವರ ವೈಯಕ್ತಿಕ ಜೀವನಕ್ಕೂ ಇದ್ದೇಇದೆ ಎಂದು ಹೇಳಿರುವ ಡ್ರೀಮ್ 11, ತನ್ನ ಉದ್ಯೋಗಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ಕೊಟ್ಟಿದೆ. ನಮ್ಮ ಕಂಪನಿಯಲ್ಲಿ ರಜೆಯಲ್ಲಿರುವ ಉದ್ಯೋಗಿಗಳಿಗೆ, ಇತರ ಉದ್ಯೋಗಿಗಳು ಕೆಲಸದ ವಿಚಾರಕ್ಕೆ ಕರೆ ಮಾಡುವಂತಿಲ್ಲ. ಹಾಗೊಮ್ಮೆ ಮಾಡಿದ್ದೇ ಆದಲ್ಲಿ ಅಂಥವರು 1 ಲಕ್ಷ ರೂಪಾಯಿ ದಂಡ ನೀಡಬೇಕು ಎಂದು ಕಂಪನಿಯ ಸಹ ಸಂಸ್ಥಾಪಕರಾದ ಹರ್ಷ ಜೈನ್ ಮತ್ತು ಭವಿತ್ ಸೇಠ್ ತಿಳಿಸಿದ್ದಾರೆ.
ಈ ಬಗ್ಗೆ ಕಂಪನಿ ತನ್ನ ಲಿಂಕ್ಡ್ಇನ್ನಲ್ಲಿ ಮಾಹಿತಿ ಹಂಚಿಕೊಂಡಿದೆ. ‘ಯಾವ ಉದ್ಯೋಗಿಗಳು ರಜಾ ಇರುತ್ತಾರೋ, ಅವರನ್ನು ಕಂಪನಿಯೇ ಲಾಗ್ಆಫ್ ಮಾಡುತ್ತದೆ. ಅವರನ್ನು ಇತರ ಉದ್ಯೋಗಿಗಳು ವಾಟ್ಸ್ಆ್ಯಪ್ ಮೂಲಕವಾಗಲಿ, ಇಮೇಲ್, ಫೋನ್ ಕಾಲ್ ಇನ್ನಿತರ ಯಾವುದೇ ಮಾರ್ಗದ ಮೂಲಕ ಸಂಪರ್ಕಿಸದಂತೆ ಮಾಡಲಾಗುತ್ತದೆ. ಉದ್ಯೋಗಿಗಳು ತಮ್ಮ ರಜಾದಿನದಲ್ಲಿ ಸಂಪೂರ್ಣವಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕು. ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯ ಕಳೆಯಬೇಕು, ಅವರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಕಾರಣಕ್ಕೇ ಈ ನೀತಿ ಜಾರಿ ಮಾಡಲಾಗಿದೆ. ನಾವು ಈ ನೀತಿ ಜಾರಿ ಮಾಡಿದ್ದರಿಂದ ಖಂಡಿತ ಉದ್ಯೋಗಿಗಳು ಸಂತೋಷಪಡುತ್ತಾರೆ ಎಂಬ ನಂಬಿಕೆ ಇದೆ ಎಂದು ಡ್ರೀಮ್ 11 ಸಂಸ್ಥೆ ಹೇಳಿಕೊಂಡಿದೆ.
ಇದನ್ನೂ ಓದಿ: Viral post | ಬೆಂಗಳೂರಲ್ಲಿ ಬಾಡಿಗೆ ಮನೆ ಬೇಕೆಂದರೆ ಐಐಟಿ, ಐಐಎಂನಲ್ಲಿ ಓದಿರಬೇಕಾ?!