ನವ ದೆಹಲಿ: ನವೆಂಬರ್ 26ರಂದು ನ್ಯೂಯಾರ್ಕ್ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ವಯಸ್ಸಾದ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದ 24 ವರ್ಷದ ಶಂಕರ್ ಮಿಶ್ರಾ ಈಗ ನಾಪತ್ತೆಯಾಗಿದ್ದಾನೆ. ಆತ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ, ದೆಹಲಿ ಪೊಲೀಸರ ತಂಡವೊಂದು ಇಲ್ಲಿಗೆ ಆಗಮಿಸಿ, ಪತ್ತೆ ಕಾರ್ಯ ಪ್ರಾರಂಭ ಮಾಡಿದೆ. ಹಾಗೇ, ಇನ್ನೊಂದು ತಂಡ ಆತನ ತಂದೆಯನ್ನು ವಿಚಾರಣೆ ನಡೆಸಲು, ಮುಂಬಯಿಗೆ ತೆರಳಿದೆ.
ಈ ಮಧ್ಯೆ ರಾಷ್ಟ್ರೀಯ ಮಾಧ್ಯಮ ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ಶಂಕರ್ ಮಿಶ್ರಾ ತಂದೆ ಶ್ಯಾಮ್ ಮಿಶ್ರಾ, ‘ಇದೊಂದು ಸುಳ್ಳು ಕೇಸ್. ನನ್ನ ಮಗ ಹಾಗೆಲ್ಲ ಮಾಡಲು ಸಾಧ್ಯವೇ ಇಲ್ಲ’ ಎಂದು ಹೇಳಿಕೊಂಡಿದ್ದಾರೆ. ಮಗನನ್ನು ಸಮರ್ಥನೆ ಮಾಡಿಕೊಂಡ ಶ್ಯಾಮ್ ಮಿಶ್ರಾ ‘ನನ್ನ ಮಗ ಯುಎಸ್ನಿಂದ ಬರುತ್ತಿದ್ದಾನೆ ಎಂದು ನನಗೆ ಗೊತ್ತಿತ್ತು. ಕಳೆದ ಮೂರು ದಿನಗಳಿಂದ ನನ್ನ ಪುತ್ರ ನಿದ್ದೆ ಮಾಡಿರಲಿಲ್ಲ. ಹೀಗಾಗಿ ವಿಮಾನದಲ್ಲಿ ಮದ್ಯಪಾನ ಮಾಡಿ, ಮಲಗಿರಬಹುದು. ಆಮೇಲೆ ಏನಾಯಿತು ಎಂಬುದು ಅವನಿಗೂ ಗೊತ್ತಿಲ್ಲ. ಆತ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಎಂಬುದನ್ನು ಸಾಬೀತುಪಡಿಸುವುದು ತುಂಬ ಕಷ್ಟ. ಇದೊಂದು ಸುಳ್ಳು ಕೇಸ್’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಆ ಮಹಿಳೆಗೆ 72 ವರ್ಷ ಎನ್ನುತ್ತೀರಿ. ನನ್ನ ಮಗನಿಗೆ ಆಕೆ ತಾಯಿ ಸಮಾನ. ಅಂಥದ್ದರಲ್ಲಿ ಹೋಗಿ ಅವನು ಅವರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಾನೆ ಎಂದರೆ ನಂಬಲು ಸಾಧ್ಯವಿಲ್ಲ. ಅಲ್ಲಿ ಆ ಘಟನೆಯನ್ನು ಕಣ್ಣಾರೆ ಕಂಡವರೂ ಯಾರೂ ಇಲ್ಲ’ ಎಂದೇ ಪ್ರತಿಪಾದಿಸಿದ್ದಾರೆ.
ಶಂಕರ್ ಮಿಶ್ರಾ ಅಮೆರಿಕ ಮೂಲದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದವನು ನ.26ರಂದು ಏರ್ ಇಂಡಿಯಾ ದೆಹಲಿಗೆ ವಾಪಸ್ ಬರುತ್ತಿದ್ದ. ಈ ವೇಳೆ ಆತ ತನ್ನ ಸಹಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂಬ ಆರೋಪ ಬಂದಿದೆ. ಆ ಮಹಿಳೆ ಏರ್ ಇಂಡಿಯಾ ಅಧ್ಯಕ್ಷರಿಗೆ ಪತ್ರ ಬರೆದು ದೂರು ಕೊಟ್ಟಿದ್ದರು. ಇನ್ನು ಆತ ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದಾಗಿನ ಸನ್ನಿವೇಶವನ್ನು ಏರ್ ಇಂಡಿಯಾ ಸಿಬ್ಬಂದಿ ಸರಿಯಾಗಿ ನಿಭಾಯಿಸಲಿಲ್ಲ ಎಂದೂ ಹೇಳಿದ್ದರು. ಅದರ ಬೆನ್ನಲ್ಲೇ ಶಂಕರ್ ಮಿಶ್ರಾ ವಿರುದ್ಧ ಕೇಸ್ ದಾಖಲಾಗಿದೆ. ಹಾಗೇ, ಅವನ ಕಂಪನಿಯೂ ಅವನನ್ನು ವಜಾಗೊಳಿಸಿದೆ.
ಇದನ್ನೂ ಓದಿ: Air India | ಕುಡುಕ ಮೈಮೇಲೆ ಮೂತ್ರ ವಿಸರ್ಜಿಸಿದರೂ, ಮಹಿಳೆಗೆ ಬೇರೆ ಸೀಟು ನಿರಾಕರಿಸಿದ್ದ ಏರ್ ಇಂಡಿಯಾ ಪೈಲಟ್!