ಡೆಹ್ರಾಡೂನ್: ಪ್ರಸಕ್ತ ಬಾರಿಯ ಜಿ 20ಶೃಂಗಸಭೆಯ (G-20 Meet) ಆತಿಥ್ಯವನ್ನು ವಹಿಸಿರುವ ಭಾರತ, ಅದರ ಪೂರ್ವಭಾವಿಯಾಗಿ ವಿವಿಧ ರಾಜ್ಯಗಳಲ್ಲಿ ಸಭೆಗಳನ್ನು ಆಯೋಜಿಸುತ್ತಿದೆ. ಅದರಂತೆ ಇಂದಿನಿಂದ (ಮಾ.28) ಮಾ.30ರವರೆಗೆ ಉತ್ತರಾಖಂಡ್ನಲ್ಲಿ ಮೂರುದಿನಗಳ ಜಿ-20 ಪೂರ್ವಸಿದ್ಧತಾ ಸಭೆ ನಡೆಯಲಿದ್ದು, ಆ ಸಭೆಗೆ ಖಲಿಸ್ತಾನಿ ಉಗ್ರರಿಂದ ಬೆದರಿಕೆ ಬಂದಿದೆ. ಈ ಸಭೆ ಉತ್ತರಾಖಂಡ್ನ ರಾಮನಗರದಲ್ಲಿ ನಡೆಯಲಿದ್ದು, ಪತ್ರಕರ್ತರು ಸೇರಿ, ನೂರಾರು ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
ಸಭೆಯಲ್ಲಿ ಪಾಲ್ಗೊಳ್ಳಲಿರುವ ಅನೇಕರಿಗೆ ಕರೆ ಹೋಗಿದೆ. ಕರೆ ಸ್ವೀಕರಿಸುತ್ತಿದ್ದಂತೆ, ಸಿಖ್ ಫಾರ್ ಜಸ್ಟೀಸ್ ಸಂಘಟನೆಯ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನು ಧ್ವನಿ ಕೇಳುತ್ತದೆ. ರಾಮನಗರ ಉತ್ತರಖಾಂಡ್ನ ಭಾಗವಲ್ಲ. ಇದು ಖಲಿಸ್ತಾನಕ್ಕೆ ಸೇರಬೇಕಾಗಿರುವ ಪ್ರದೇಶ. ಪಂಜಾಬ್ ಭಾರತದಿಂದ ಮುಕ್ತವಾಗುತ್ತಿದ್ದಂತೆ ನಾವು ರಾಮನಗರವನ್ನು ನಮ್ಮದಾಗಿಸಿಕೊಳ್ಳುತ್ತೇವೆ. ಇಲ್ಲೇನಾದರೂ ಜಿ 20 ಸಭೆ ನಡೆಸಿದ್ದೇ ಆದರೆ, ನಾವು ಈ ಸಂದರ್ಭದಲ್ಲಿ ನಾವು ಇಲ್ಲಿನ ಏರ್ಪೋರ್ಟ್ಗಳು, ರೈಲ್ವೆ ನಿಲ್ದಾಣಗಳು ಮತ್ತಿ ಇತರ ಪ್ರಮುಖ ಭಾಗಗಳಲ್ಲೆಲ್ಲ ಖಲಿಸ್ತಾನಿ ಧ್ವಜ ಹಾರಿಸುತ್ತೇವೆ ಎಂಬ ಮಾತುಗಳು ಕೇಳಿಬರುತ್ತವೆ. ಅಷ್ಟೇ ಅಲ್ಲ, ನೀವು ನಮ್ಮ ಮಾತನ್ನೂ ಮೀರಿ ಸಭೆ ನಡೆಸಿದ್ದೇ ಆದಲ್ಲಿ, ನಾವು ನಮ್ಮ ಖಲಿಸ್ತಾನಿ ಹೋರಾಟದ ವಿಷಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶುರು ಮಾಡುತ್ತೇವೆ ಎಂದೂ ಆತ ಹೇಳುತ್ತಾನೆ ಎಂದು ವರದಿಯಾಗಿದೆ.
ಖಲಿಸ್ತಾನಿಗಳಿಂದ ಬಂದ ಬೆದರಿಕೆ ಕರೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ, ಯಾರೂ ಹೆದರುವ ಅಗತ್ಯವಿಲ್ಲ. ಜಿ20ಶೃಂಗದ ಪೂರ್ವಭಾವಿ ಸಭೆಗೆ ಸಕಲ ಸಿದ್ಧತೆಗಳೂ ಆಗಿವೆ. ಭದ್ರತೆ ಮತ್ತು ಆಡಳಿತಾತ್ಮಕವಾಗಿ ಎಲ್ಲ ವ್ಯವಸ್ಥೆ ಮಾಡಿದ್ದೇವೆ. ಗುಲ್ತಚರ ದಳದ ಅಧಿಕಾರಿಗಳು ಮತ್ತು ಪೊಲೀಸರು ಇಂಚಿಂಚೂ ಟ್ರ್ಯಾಕ್ ಮಾಡುತ್ತಿದ್ದಾರೆ. ಭದ್ರತೆಯಲ್ಲಿ ಯಾವುದೇ ಲೋಪ ಆಗುವುದಿಲ್ಲ. ಏನೂ ತೊಂದರೆಯೂ ಆಗೋದಿಲ್ಲ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಗಿ ಭದ್ರತೆ ನಡುವೆಯೂ ಕೆನಡಾದಲ್ಲಿ ಖಲಿಸ್ತಾನಿಗಳ ಪ್ರತಿಭಟನೆ; ನಮ್ಮ ದೇಶದಲ್ಲಿರುವ ಹೈಕಮಿಷನರ್ಗೆ ಸಮನ್ಸ್ ನೀಡಿದ ಭಾರತ
ಹಾಗೇ, ಉತ್ತರಾಖಂಡ್ನ ಡಿಐಜಿ ಸೆಂಥಿಲ್ ಅಬುದೈ ಕೃಷ್ಣರಾಜ್ ಎಸ್ ಈ ಬಗ್ಗೆ ಮಾತನಾಡಿ ‘ಸಿಖ್ ಫಾರ್ ಜಸ್ಟೀಸ್ ಸಂಘಟನೆಯ ಮುಖ್ಯಸ್ಥ ಮೊದಲೇ ಮೆಸೇಜ್ ರೆಕಾರ್ಡ್ ಮಾಡಿದ್ದಾನೆ. ಬಳಿಕ ಅದನ್ನು ಇಂದಿನ ಸಭೆಯಲ್ಲಿ ಪಾಲ್ಗೊಳ್ಳುವ ಹಲವರಿಗೆ ಕರೆ ಮಾಡಿ ಅದೇ ಮೆಸೇಜ್ ಆನ್ ಮಾಡಲಾಗಿದೆ. ಕಾಲ್ ಬಂದಿರುವ ನಂಬರ್ನ್ನು ಟ್ರೇಸ್ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಲೆಂದೇ ವಿಶೇಷ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಜಿ 20 ಸಭೆ ಅಂತಾರಾಷ್ಟ್ರೀಯ ಮಟ್ಟದ್ದಾಗಿದ್ದರಿಂದ, ಪನ್ನು ಇದೇ ಸಂದರ್ಭದಲ್ಲಿ ಪಬ್ಲಿಸಿಟಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಖಲಿಸ್ತಾನಿಗಳಿಂದ ಸಭೆಗೆ ಏನೂ ತೊಂದರೆಯಾಗದಂತೆ ಎಲ್ಲ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದಿದ್ದಾರೆ.
ಖಲಿಸ್ತಾನಿ ನಾಯಕ ಅಮೃತ್ಪಾಲ್ ಸಿಂಗ್ನನ್ನು ಪೊಲೀಸರು ಬೆನ್ನತ್ತಿರುವ ಬೆನ್ನಲ್ಲೇ ಆ ಹೋರಾಟಗಾರರ ಕುಕೃತ್ಯವೂ ಜಾಸ್ತಿಯಾಗುತ್ತಿದೆ. ವಿದೇಶಗಳಲ್ಲೂ ಖಲಿಸ್ತಾನಿಗಳು ಭಾರತ ವಿರೋಧಿ ಕೃತ್ಯಗಳನ್ನು ಎಸಗುತ್ತಿದ್ದಾರೆ. ಲಂಡನ್, ಕೆನಡಾ, ಯುಎಸ್ಗಳಲ್ಲಿ ಈಗಾಗಲೇ ಭಾರತದ ರಾಯಭಾರಿ ಕಚೇರಿಗಳನ್ನು ಗುರಿಯಾಗಿಸಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಹಿಂದೂ ದೇವಸ್ಥಾನಗಳನ್ನು ಧ್ವಂಸ ಮಾಡುತ್ತಿದ್ದಾರೆ.