ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನಾಯಕನೊಬ್ಬ ಎರಡು ಬಿರ್ಯಾನಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ. ಹೀಗೆ ಅಂಗಡಿ ಬಂದ್ ಮಾಡಿಸಲು ಅವರು ಕೊಟ್ಟ ಕಾರಣ ಮಾತ್ರ ತುಂಬ ವಿಚಿತ್ರವಾಗಿದೆ. ‘ಬಿರ್ಯಾನಿಯಲ್ಲಿ ತುಂಬ ಮಸಾಲಾಯುಕ್ತ ಪದಾರ್ಥಗಳನ್ನು ಹಾಕಲಾಗುತ್ತದೆ. ಇಂಥ ಮಸಾಲೆ ಸೇವನೆ ಮಾಡುವುದರಿಂದ ಪುರುಷರಲ್ಲಿ ಲೈಂಗಿಕಾಸಕ್ತಿ ಕಡಿಮೆಯಾಗುತ್ತದೆ’ ಎಂಬ ಮಾತು ಕೇಳಿಬರುತ್ತಿದೆ ಎಂದು ಆ ಟಿಎಂಸಿ ನಾಯಕ ಹೇಳಿದ್ದಾರೆ. ಅದೇ ಕಾರಣಕ್ಕೇ ಅವರು ಕೂಚ್ ಬೆಹಾರ್ನಲ್ಲಿರುವ ಎರಡು ಬಿರ್ಯಾನಿ ಅಂಗಡಿಗಳನ್ನು ಅವರು ಬಂದ್ ಮಾಡಿಸಿದ್ದು…!
ತೃಣಮೂಲ ಕಾಂಗ್ರೆಸ್ ನಾಯಕ ರಬೀಂದ್ರನಾಥ ಘೋಷ್ ಮಾಜಿ ಸಚಿವರೂ ಹೌದು. ಇವರೇ ಈಗ ಅಂಗಡಿಗಳನ್ನು ಮುಚ್ಚಿಸಿದ್ದು. ಕೂಚ್ ಬೆಹಾರ್ನ ಈ ಎರಡು ಅಂಗಡಿಗಳಲ್ಲಿ ಬಿರ್ಯಾನಿ ತಯಾರಿಸಲು ಬಳಸುವ ಹಲವು ವಿಧದ ಮಸಾಲೆ ಪದಾರ್ಥಗಳು ಪುರುಷತ್ವ ಕುಗ್ಗಿಸುತ್ತವೆ. ಲೈಂಗಿಕಾಸಕ್ತಿಯನ್ನು ಕುಂಠಿತಗೊಳಿಸುತ್ತವೆ ಎಂದು ಅನೇಕರು ಆರೋಪ ಮಾಡುತ್ತಿದ್ದಾರೆ. ಈ ಅಂಗಡಿಗಳಲ್ಲಿ ಬಿರ್ಯಾನಿ ತಯಾರಿಕೆಗೆ ಅದ್ಯಾವ ಮಸಾಲೆ ಉಪಯೋಗ ಮಾಡುತ್ತಿದ್ದಾರೆ ಗೊತ್ತಿಲ್ಲ. ಆದರೆ ಅದನ್ನು ತಿನ್ನುವವರ ಲೈಂಗಿಕಾಸಕ್ತಿ ಕಡಿಮೆಯಾಗುತ್ತಿದೆ ಎಂಬ ದೂರು ನನ್ನ ಬಳಿಯೂ ಬಂದಿದೆ. ಹಾಗಾಗಿ ಅಂಗಡಿಗಳನ್ನು ಬಂದ್ ಮಾಡಿಸಿದ್ದೇನೆ’ ಎಂದು ರಬೀಂದ್ರನಾಥ ಘೋಷ್ ತಿಳಿಸಿದ್ದಾರೆ.
ಕೂಚ್ ಬೆಹಾರ್ ಮುನ್ಸಿಪಲ್ಟಿಯ ಅಧ್ಯಕ್ಷರೂ ಆಗಿರುವ ರಬೀಂದ್ರನಾಥ ಘೋಷ್, ‘ಬಿಹಾರ, ಉತ್ತರ ಪ್ರದೇಶದಿಂದ ಬಂದ ಕೆಲವರೂ ಇಲ್ಲಿ ಬಿರ್ಯಾನಿ ಅಂಗಡಿ ನಡೆಸುತ್ತಿದ್ದಾರೆ. ಸದ್ಯ ಎರಡು ಅಂಗಡಿಗಳ ಬಗ್ಗೆ ದೂರ ಬಂದಿತ್ತು. ಹೋಗಿ ಪರಿಶೀಲನೆ ಮಾಡಿದಾಗ ಅವರಿಗೆ ಲೈಸೆನ್ಸ್ ಕೂಡ ಇರಲಿಲ್ಲ. ಅದೇ ಕಾರಣಕ್ಕೆ ಮುಚ್ಚಿಸಿದ್ದೇನೆ. ಈ ಬಗ್ಗೆ ಇನ್ನಷ್ಟು ಹೆಚ್ಚಿನ ತನಿಖೆ ನಡೆಸಲಾಗುವುದು’ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ಮುರುಘಾಶ್ರೀ ಪ್ರಕರಣ | ಏನಿದು ಪುರುಷತ್ವ ಪರೀಕ್ಷೆ? ಯಾಕೆ ಮಾಡ್ತಾರೆ? ಈ ಟೆಸ್ಟ್‌ನಿಂದ ರೇಪ್ ಸಾಬೀತಾಗುತ್ತದೆಯೇ?