ನವ ದೆಹಲಿ: ಮೊರ್ಬಿ ಸೇತುವೆ ಕುಸಿತವಾದಾಗ ಎರಡು ದಿನ ಬಿಟ್ಟು ಪ್ರಧಾನಿ ಮೋದಿಗೆ ಅಲ್ಲಿ ಭೇಟಿ ಕೊಟ್ಟಿದ್ದರು. ಆದರೆ ಪ್ರಧಾನಿ ಮೋದಿ ಮೊರ್ಬಿ ಭೇಟಿಯಾದ ಸಂದರ್ಭದಲ್ಲಿ ಖರ್ಚಾದ ಹಣದ ಬಗ್ಗೆ ತಪ್ಪು ಮಾಹಿತಿಯುಳ್ಳ ಟ್ವೀಟ್ ಮಾಡಿದ ಆರೋಪದಡಿ ತೃಣಮೂಲ ಕಾಂಗ್ರೆಸ್ ನಾಯಕ, ವಕ್ತಾರ ಸಾಕೇತ್ ಗೋಖಲೆಯವರನ್ನು ಗುಜರಾತ್ನ ಸೈಬರ್ ಘಟಕದ ಪೊಲೀಸರು ಬಂಧಿಸಿದ್ದಾರೆ. ಡಿ.5ರಂದು ತಡರಾತ್ರಿ ರಾಜಸ್ಥಾನದ ಜೈಪುರ ಏರ್ಪೋರ್ಟ್ನಲ್ಲಿ ಸಾಕೇತ್ ಲ್ಯಾಂಡ್ ಆಗುತ್ತಾರೆ ಎಂಬ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು, ಅಲ್ಲಿ ಹೋಗಿ ಕಾಯುತ್ತಿದ್ದರು. ಸಾಕೇತ್ ಏರ್ಪೋರ್ಟ್ಗೆ ಆಗಮಿಸುತ್ತಿದ್ದಂತೆ ಅವರ ಬಂಧನವಾಗಿದೆ. ಗೋಖಲೆ ಅರೆಸ್ಟ್ ಆದ ಬಗ್ಗೆ ಟಿಎಂಸಿ ರಾಜ್ಯಸಭಾ ಸದಸ್ಯ, ರಾಷ್ಟ್ರೀಯ ವಕ್ತಾರ ಡೆರೆಕ್ ಒಬ್ರಿಯಾನ್ ಇಂದು ಬೆಳಗ್ಗೆ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಗುಜರಾತ್ನಲ್ಲಿ ಮಚ್ಚು ನದಿಗೆ ಅಡ್ಡಲಾಗಿ ಕಟ್ಟಿದ್ದ ಮೊರ್ಬಿ ಸೇತುವೆ ಅಕ್ಟೋಬರ್ನಲ್ಲಿ ಕುಸಿದು 135ಮಂದಿ ಮೃತಪಟ್ಟಿದ್ದು ಒಂದು ಬಹುದೊಡ್ಡ ದುರಂತವಾಗಿದೆ. ಶತಮಾನಗಳಷ್ಟು ಹಳೇ ಮೊರ್ಬಿ ಸೇತುವೆ ಅಕ್ಟೋಬರ್ 30ರಂದು ಕುಸಿದಿತ್ತು. ಅದಾಗಿ ಎರಡು ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿ ಮೊರ್ಬಿಗೆ ಭೇಟಿ ಕೊಟ್ಟು, ಘಟನಾ ಸ್ಥಳ ವೀಕ್ಷಿಸಿದ್ದರು. ಸಿವಿಲ್ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನೂ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ್ದರು.
ಆದರೆ ನರೇಂದ್ರ ಮೋದಿಯವರು ಮೊರ್ಬಿಗೆ ಭೇಟಿ ಕೊಟ್ಟಾಗ, ಅಲ್ಲಿ ವ್ಯವಸ್ಥೆ ಮಾಡಲು 30 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಈ ಬಗ್ಗೆ ಆರ್ಟಿಐ (ಮಾಹಿತಿ ಹಕ್ಕು ಕಾಯ್ದೆಯಡಿ)ನಡಿ ವಿವರ ಪಡೆಯಲಾಗಿದೆ. ಒಟ್ಟೂ ಖರ್ಚು ಮಾಡಲಾದ 30 ಕೋಟಿ ರೂಪಾಯಿಯಲ್ಲಿ, ಕೇವಲ ಮೋದಿಯವರ ಸ್ವಾಗತ ಕಾರ್ಯಕ್ರಮ ಮತ್ತು ಫೋಟೋಗ್ರಫಿಗೆಂದೇ 5.5 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಅದೇ ಮೊರ್ಬಿ ದುರಂತಲ್ಲಿ ಮೃತಪಟ್ಟ 135 ಜನರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿಯಷ್ಟೇ ಪರಿಹಾರ ಕೊಡಲಾಗಿದೆ. (ಪರಿಹಾರ ಕೊಡಲು ಸುಮಾರು 5 ಕೋಟಿ ರೂ. ಮೀಸಲಿಡಲಾಗಿದೆ) ಎಂದು ಆರ್ಟಿಐ ತಿಳಿಸಿದೆ. 135 ಜನರ ಜೀವಕ್ಕೆ ನೀಡಲಾದ ಪರಿಹಾರ ಹಣದಷ್ಟನ್ನು ಪ್ರಧಾನಿ ಮೋದಿಯ ಸ್ವಾಗತಕ್ಕಾಗಿ ಮೀಸಲಿಡಲಾಗಿದೆ ಎಂದರೆ, ಆ 135 ಜನರ ಜೀವಕ್ಕಿಂತಲೂ ಪ್ರಧಾನಿಯ ಭೇಟಿಯೇ ಮುಖ್ಯ ಎಂದಾಯಿತಲ್ಲ ಎಂಬುದು ಸಾಕೇತ್ ಗೋಖಲೆ ಟ್ವೀಟ್ನ ಸಾರಾಂಶವಾಗಿತ್ತು. ಇನ್ನು ಗುಜರಾತ್ ಸಮಾಚಾರ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎನ್ನಲಾದ ಒಂದು ವರದಿಯನ್ನೂ ತಮ್ಮ ಟ್ವೀಟ್ ಜತೆ ಲಗತ್ತಿಸಿದ್ದರು.
ಅದರ ಬೆನ್ನಲ್ಲೇ ಪಿಐಬಿ (ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ) ಡಿಸೆಂಬರ್ 1ರಂದು ಫ್ಯಾಕ್ಟ್ಚೆಕ್ ನಡೆಸಿತ್ತು. ಸತ್ಯ ಶೋಧದ ವರದಿಯನ್ನು ಟ್ವೀಟ್ ಮಾಡಿದ್ದ ಪಿಐಬಿ, ‘ಪ್ರಧಾನಿ ನರೇಂದ್ರ ಮೋದಿ ಮೊರ್ಬಿಗೆ ಭೇಟಿ ಕೊಟ್ಟಾಗ ಅಲ್ಲಿನ ವ್ಯವಸ್ಥೆ ಮಾಡಲು 30 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಆರ್ಟಿಐ ಮಾಹಿತಿ ನೀಡಿದೆ ಎಂಬುದು ಅಕ್ಷರಶಃ ಸುಳ್ಳು. ಅಂಥ ಯಾವುದೇ ವಿವರವನ್ನೂ ಆರ್ಟಿಐನಿಂದ ಕೊಡಲಾಗಿದೆ. ಹೀಗಾಗಿ ಟಿಎಂಸಿ ನಾಯಕ ಮಾಡಿದ ಟ್ವೀಟ್ ಫೇಕ್ ಮಾಹಿತಿ ಒಳಗೊಂಡಿದೆ’ ಎಂದು ಹೇಳಿತ್ತು.
ಇನ್ನು ಈ ಟ್ವೀಟ್ ಮಾಡಿದ್ದ ಸಾಕೇತ್ ಗೋಖಲೆ ವಿರುದ್ಧ ಬಿಜೆಪಿಯ ಹಿರಿಯ ಕಾರ್ಯಕಾರಿ ಭಾಲಾಭಾಯಿ ಕೋಠಾರಿ ಅವರು ಅಹ್ಮದಾಬಾದ್ನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪರಿಶೀಲನೆ ಪ್ರಾರಂಭ ಮಾಡಿದ ಪೊಲೀಸರು ಗುಜರಾತ್ ಸಮಾಚಾರ್ ಕಚೇರಿಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ನಾವು ಅಂಥ ಸುದ್ದಿಯನ್ನು ಪ್ರಕಟಿಸಿಯೇ ಇಲ್ಲ ಎಂದು ಗುಜರಾತ್ ಸಮಾಚಾರ್ ಪೊಲೀಸರಿಗೆ ತಿಳಿಸುವ ಜತೆ, ಅದಕ್ಕೆ ಪುರಾವೆಯನ್ನೂ ಕೊಟ್ಟಿದೆ. ‘ಗೋಖಲೆಯನ್ನು ವಿಚಾರಣೆಗೆ ಒಳಪಡಿಸಲು ವಶಕ್ಕೆ ಪಡೆದಿದ್ದೇವೆ‘ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸಾಕೇತ್ ಅರೆಸ್ಟ್ ಆದ ಬಗ್ಗೆ ಟಿಎಂಸಿ ನಾಯಕ ಡೆರೆಕ್ ಒಬ್ರಿಯಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ದೆಹಲಿಯಿಂದ ಜೈಪುರಕ್ಕೆ ಹೋಗಿದ್ದರು. ಜೈಪುರದಲ್ಲಿ ಅವರನ್ನು ಗುಜರಾತ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದಾದ ಬಳಿಕ ಸೋಮವಾರ ತಡರಾತ್ರಿ 2 ಗಂಟೆ ಹೊತ್ತಿಗೆ ಸಾಕೇತ್ ತಾಯಿಗೆ ಕರೆ ಮಾಡಲು ಅವಕಾಶ ಕೊಟ್ಟಿದ್ದಾರೆ. ಅದೂ ಎರಡು ನಿಮಿಷ ಮಾತ್ರ. ಸಾಕೇತ್ರನ್ನು ಸದ್ಯ ಅಹ್ಮದಾಬಾದ್ಗೆ ಕರೆದುಕೊಂಡು ಹೋಗಿದ್ದಾಗಿ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Gujarat Election 2022 | ಮೊರ್ಬಿ ಸೇತುವೆ ಕುಸಿದಾಗ ನದಿಗೆ ಹಾರಿ ಜನರ ಪ್ರಾಣ ಉಳಿಸಿದ ವ್ಯಕ್ತಿಗೆ ಬಿಜೆಪಿ ಟಿಕೆಟ್