ಪಶ್ಚಿಮ ಬಂಗಾಳದಲ್ಲಿ ಜುಲೈ 8ರಂದು ಪಂಚಾಯಿತಿ ಚುನಾವಣೆ (West Bengal Panchayat Polls) ಜುಲೈ 8ರಂದು ನಡೆಯಲಿದೆ. ಈ ರಾಜ್ಯದಲ್ಲಿ ಸಹಜವಾಗಿಯೇ ಹಿಂಸಾಚಾರ ಹೆಚ್ಚು, ಅದರಲ್ಲೂ ಯಾವುದೇ ಮಾದರಿಯ ಚುನಾವಣೆ ಬರಲಿ ಸಾವು-ನೋವು, ಸಂಘರ್ಷ ಮಿತಿಮೀರುತ್ತದೆ. ಈಗ ಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಅಲ್ಲಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಮುಂಬರುವ ಪಂಚಾಯಿತಿ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ನ ಅಭ್ಯರ್ಥಿ (TMC Candidate Killed)ಯಾಗಿ ಕಣಕ್ಕೆ ಇಳಿದಿದ್ದ ಮುಸ್ತಫಾ ಶೇಖ್ನನ್ನು ಮಾಲ್ಡಾ ಜಿಲ್ಲೆಯ, ಕಾಲಿಯಾಚಕ್ ಬಳಿಯ ಸುಜಾಪುರ್ ಎಂಬಲ್ಲಿ ಹತ್ಯೆ ಮಾಡಲಾಗಿದೆ. ಆರೋಪಿಗಳಲ್ಲಿ ಒಬ್ಬನಾದ 48ವರ್ಷದ ಅಬ್ದುಲ್ ಮನ್ನಾನ್ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿ, ವಿಚಾರಣೆಗೆ ಒಳಪಡಿಸಿದ್ದಾರೆ. ಮುಸ್ತಫಾ ಶೇಖ್ನನ್ನು ಅಬ್ದುಲ್ ಮನ್ನಾನ್ ಮತ್ತು ಅವನ ಜತೆಗಿದ್ದ ಇತರರು ಸೇರಿ ಥಳಿಸಿಯೇ ಕೊಂದಿದ್ದಾರೆ ಎನ್ನಲಾಗಿದೆ.
ಮುಸ್ತಫಾ ಶೇಖ್ ಟಿಎಂಸಿ ನಾಯಕ. ಈ ಸಲ ಸುಜಾಪುರ್ನಿಂದ ಅವರಿಗೆ ಟಿಕೆಟ್ ಸಿಕ್ಕಿತ್ತು. ಶನಿವಾರ ಮಧ್ಯಾಹ್ನದ ಹೊತ್ತಲ್ಲಿ ಎಲ್ಲಿಗೋ ಹೋಗಿದ್ದ ಅವರು ವಾಪಸ್ ಬರುತ್ತಿದ್ದಾಗಲೇ ಅಬ್ದುಲ್ ಮತ್ತು ಅವನ ಸಹಚರರು ದಾಳಿ ಮಾಡಿದ್ದಾರೆ. ತೀವ್ರವಾಗಿ ಥಳಿಸಿ ಅಲ್ಲಿಂದ ಪರಾರಿಯಾಗಿದ್ದರು. ಗಾಯಗೊಂಡು ನರಳುತ್ತಿದ್ದ ಮುಸ್ತಫಾ ಶೇಖ್ನನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಪ್ರಯೋಜನ ಆಗಲಿಲ್ಲ. ಘಟನೆ ನಡೆದ ಸ್ಥಳಕ್ಕೆ ಟಿಎಂಸಿ ಸಚಿವೆ ಸಬೀನಾ ಯಾಸ್ಮಿನ್ ಭೇಟಿ ಕೊಟ್ಟು ಪರಿಶೀಲನೆ ಮಾಡಿದ್ದಾರೆ. ಹಾಗೇ, ಈ ದಾಳಿ ನಡೆಸಿದ್ದು ಮಾಜಿ ಟಿಎಂಸಿ ಕಾರ್ಯಕರ್ತರು. ಪಂಚಾಯಿತಿ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಇಲ್ಲಿ ಟಿಕೆಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದರು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಬುಡಕಟ್ಟು ಬಾಲಕಿ ಮೃತಪಟ್ಟಿದ್ದು ವಿಷದಿಂದ ಎಂದ ಪೋಸ್ಟ್ಮಾರ್ಟಮ್ ರಿಪೋರ್ಟ್; ಅತ್ಯಾಚಾರ ನಡೆದಿತ್ತಾ?
ಮುಸ್ತಫಾ ಶೇಖ್ ಹತ್ಯೆಯಾಗುತ್ತಿದ್ದಂತೆ ಸ್ಥಳೀಯ ಟಿಎಂಸಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಧರಣಿ ನಡೆಸುತ್ತಿದ್ದಾರೆ. ಆರೋಪಿಗಳಾದ ಕಾಂಗ್ರೆಸ್ ಕಾರ್ಯಕರ್ತರನ್ನು ತಕ್ಷಣವೇ ಬಂಧಿಸುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಮಾಲ್ಡಾ ಜಿಲ್ಲಾ ಕಾಂಗ್ರೆಸ್ ಈ ಆರೋಪವನ್ನು ತಳ್ಳಿ ಹಾಕಿದೆ. ‘ಟಿಎಂಸಿಯಲ್ಲಿ ಇರುವ ಆಂತರಿಕ ಕಲಹವೇ ಈ ಕೊಲೆಗೆ ಕಾರಣ. ಇದರಲ್ಲಿ ಕಾಂಗ್ರೆಸ್ ಪಾತ್ರವೇನೂ ಇಲ್ಲ. ನಮ್ಮ ಕಾರ್ಯಕರ್ತರು ಹತ್ಯೆ ಮಾಡಿಲ್ಲ’ ಎಂದು ಹೇಳಿದೆ. ಅಂದಹಾಗೇ, ಮಾಲ್ಡಾದಲ್ಲಿ ಮುಸ್ಲಿಂ ಪ್ರಾಬಲ್ಯವಿದ್ದು, ಕಾಂಗ್ರೆಸ್ ಭದ್ರಕೋಟೆ ಎನ್ನಿಸಿದೆ.
ಇತ್ತೀಚೆಗೆ ಅಂದರೆ ಜೂ.15ರಂದು ಪಶ್ಚಿಮ ಬಂಗಾಳದ ಪಂಚಾಯಿತಿ ಚುನಾವಣೆಯ ನಾಮಪತ್ರ ಸಲ್ಲಿಸಲು ಕೊನೇ ದಿನವಾಗಿತ್ತು. ಅಂದು ಕೂಡ ಹಿಂಸಾಚಾರ ನಡೆದಿತ್ತು. ಎರಡು ಪ್ರತ್ಯೇಕ ಜಿಲ್ಲೆಗಳಿಂದ ಒಟ್ಟು ಮೂವರ ಮೇಲೆ ಗುಂಡು ಹಾರಿಸಿ ಕೊಲ್ಲಲಾಗಿತ್ತು. ನಾಮಪತ್ರ ಸಲ್ಲಿಕೆ ವೇಳೆಯಲ್ಲೇ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ದಕ್ಷಿಣ 24 ಪರಗಣ ಜಿಲ್ಲೆಯ ಭಂಗೋರ್ ಎಂಬಲ್ಲಿ ಇಬ್ಬರು ಮತ್ತು ಉತ್ತರ ದಿನಜ್ಪುರ ಜಿಲ್ಲೆಯ ಚೋಪ್ರಾದಲ್ಲಿ ಒಬ್ಬ ಗುಂಡೇಟಿಗೆ ಬಲಿಯಾಗಿದ್ದರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ