Site icon Vistara News

ಶಿವಸೇನೆ ಶಾಸಕರು ತಂಗಿರುವ ಹೋಟೆಲ್‌ ಎದುರು ಟಿಎಂಸಿ ಸದಸ್ಯರಿಂದ ಬಿಜೆಪಿ ವಿರೋಧಿ ಪ್ರತಿಭಟನೆ

TMC Workers Protest

ಗುವಾಹಟಿ: ಮಹಾರಾಷ್ಟ್ರದ ಶಿವಸೇನೆಯ ಬಂಡಾಯ ನಾಯಕರು ತಂಗಿರುವ ಅಸ್ಸಾಂನ ಗುವಾಹಟಿಯಲ್ಲಿರುವ ರಾಡಿಸನ್‌ಬ್ಲ್ಯೂ ಹೋಟೆಲ್‌ನ ಹೊರಗಡೆ ತೃಣಮೂಲ ಕಾಂಗ್ರೆಸ್‌ನ ಸದಸ್ಯರು ಮತ್ತು ಕಾರ್ಯಕರ್ತರು ಬಿಜೆಪಿ ವಿರುದ್ಧ ಪ್ರತಿಭಟನೆ (TMC Workers Protest)ನಡೆಸಿದ್ದಾರೆ. ಅಸ್ಸಾಂನಲ್ಲಿ ಮಳೆ-ಪ್ರವಾಹದಿಂದ ಜನಜೀವನ ಸಂಕಷ್ಟಕ್ಕೀಡಾಗಿದೆ. ಜೀವವೇ ಹೋಗುತ್ತಿದೆ. ಆದರೆ ರಾಜ್ಯ ಬಿಜೆಪಿ ನಾಯಕರು ಅಸ್ಸಾಂನ ರೆಸಾರ್ಟ್‌ನಲ್ಲಿ ಶಿವಸೇನೆ ಶಾಸಕರ ಮಾರಾಟ-ಖರೀದಿಯಲ್ಲಿ ತೊಡಗಿದ್ದಾರೆ ಎಂದು ಟಿಎಂಸಿ ನಾಯಕರು ಆರೋಪಿಸಿದ್ದಾರೆ.

ಟಿಎಂಸಿ ಅಸ್ಸಾಂ ರಾಜ್ಯ ಅಧ್ಯಕ್ಷ ರಿಪುನ್‌ಬೋರಾ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ವೇಳೆ ಮಾತನಾಡಿದ ಬೋರಾ, ʼಅಸ್ಸಾಂನಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ 20ಲಕ್ಷಕ್ಕೂ ಅಧಿಕ ಜನರ ಜೀವನ ಅಸ್ತವ್ಯಸ್ತ ಮಾಡಿದೆ. ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸುವ ಕೆಲಸದಲ್ಲಿ ಬ್ಯೂಸಿ ಇದ್ದಾರೆ. ಅಲ್ಲಿಂದ ಇಲ್ಲಿಗೆ ಬಂದಿರುವ ಶಾಸಕರಿಗೆ ಉಪಚಾರ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಬಳಿಕ ಪ್ರತಿಭಟನಾ ಸ್ಥಳಕ್ಕೆ ಬಂದ ಪೊಲೀಸರು ಬಿಪುನ್‌ ಬೋರಾ ಸೇರಿ ಹಲವರನ್ನು ವಶಕ್ಕೆ ಪಡೆದಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆ ಸಚಿವ ಏಕನಾಥ್‌ ಶಿಂಧೆ ಜೂ.20ರಂದು ತಮ್ಮ ಬೆಂಬಲಿಗ ಶಾಸಕರೊಂದಿಗೆ ಮೊದಲು ಗುಜರಾತ್‌ನ ಸೂರತ್‌ನಲ್ಲಿರುವ ರೆಸಾರ್ಟ್‌ಗೆ ಹೋಗಿದ್ದರು. ಅಲ್ಲಿಂದ ಗುವಾಹಟಿಗೆ ಹೋಗಿ ತಂಗಿದ್ದಾರೆ. ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸಲು ಬಿಜೆಪಿ ಆಪರೇಶನ್‌ ಕಮಲ ಶುರುಮಾಡಿದೆ ಎಂದೇ ಹೇಳಲಾಗುತ್ತಿದ್ದರೂ, ಇತ್ತ ಬಿಜೆಪಿ ಮಾತ್ರ, ʼನಾವೇನೂ ಮಾಡಿಲ್ಲ. ಶಿವಸೇನೆಯ ಆಂತರಿಕ ವಿಚಾರ ಇದುʼ ಎಂದು ಹೇಳಿ ನುಣುಚಿಕೊಂಡಿದೆ.

ಇದನ್ನೂ ಓದಿ: ಮಹಾರಾಷ್ಟ್ರ ರಾಜಕಾರಣ ಬಿಕ್ಕಟ್ಟು, ಮುಂಬಯಿಗೆ ತೆರಳಿದ ರಮೇಶ್‌ ಜಾರಕಿಹೊಳಿ

Exit mobile version