ಚೆನ್ನೈ: ಕುಟುಂಬದಲ್ಲಿ ಶಾಂತಿ ಹಾಳು ಮಾಡುತ್ತಿರುವವನು ಪತಿ ಎಂದಾದ ಮೇಲೆ, ಅವನೇ ಮನೆ ಬಿಟ್ಟು ಹೋಗಬೇಕು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ವೃತ್ತಿಯಲ್ಲಿ ವಕೀಲೆಯಾಗಿರುವ ವಿ. ಅನುಷಾ ಎಂಬುವರು ತಮ್ಮ ವಿವಾಹವನ್ನು ರದ್ದುಗೊಳಿಸಬೇಕು ಎಂದು ಚೆನ್ನೈನ ಕೌಟುಂಬಿಕ ಕೋರ್ಟ್ವೊಂದಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಆ ಅರ್ಜಿಯನ್ನು ತುಂಬ ಸಮಯ ಕಳೆದರೂ ವಿಚಾರಣೆಗೆ ಕೈಗೆತ್ತಿಕೊಳ್ಳದಾಗ, ಮತ್ತೊಂದು ಮನವಿ ಅರ್ಜಿ ಸಲ್ಲಿಸಿ, ‘ನನ್ನ ವಿಚ್ಛೇದನಾ ಅರ್ಜಿ ವಿಚಾರಣೆಗೆ ಬರುವುದು ವಿಳಂಬ ಆಗುತ್ತದೆ ಎಂದಾದರೆ, ದಯವಿಟ್ಟು ನನ್ನ ಪತಿಗೆ ಮನೆ ಬಿಟ್ಟು ಹೋಗುವಂತೆ ಮಧ್ಯಂತರವಾಗಿ ಸೂಚನೆ ನೀಡಿ. ವಿಚ್ಛೇದನ ಸಿಗುವವರೆಗೂ ಆತನೊಂದಿಗೆ ಇರುವುದು ಕಷ್ಟವೆನಿಸುತ್ತದೆ. ಅವನಿಂದಾಗಿ ಇಡೀ ಮನೆ ವಾತಾವರಣ ಹಾಳಾಗಿದೆ. ನನ್ನ ಮಕ್ಕಳ ಹಿತದೃಷ್ಟಿಯಿಂದ ಅವನು ದೂರ ಇರುವುದು ಅತ್ಯಂತ ಅನಿವಾರ್ಯ’ ಎಂದು ಕೇಳಿಕೊಂಡಿದ್ದರು.
ಆದರೆ ಕೌಟುಂಬಿಕ ಕೋರ್ಟ್ ಈಕೆಯ ಪತಿಗೆ ಬುದ್ಧಿವಾದವಷ್ಟನ್ನೇ ಹೇಳಿತ್ತು ಹೊರತು ಮನೆಯಿಂದ ಹೊರ ಹೋಗಬೇಕು ಎಂದು ಸೂಚನೆ ನೀಡಿರಲಿಲ್ಲ. ‘ಮನೆಯಲ್ಲಿ ಮಕ್ಕಳೂ ಇದ್ದಾರೆಂಬುದು ಗಮನದಲ್ಲಿ ಇರಲಿ. ನಿಮ್ಮ ಯಾವುದೇ ಮಾತುಗಳು, ವರ್ತನೆ ಮನೆಯ ಶಾಂತಿಯನ್ನು ಕದಡುವಂತೆ ಇರಬಾರದು’ ಎಂದಷ್ಟೇ ಹೇಳಿತ್ತು. ಹೀಗಾಗಿ ಮಹಿಳೆ ಇದೇ ಅರ್ಜಿಯನ್ನು ಹಿಡಿದು, ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಕೀಲೆ ಅನುಷಾ ಅವರ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಮಂಜುಳಾ, ‘ಅರ್ಜಿದಾರ ಮಹಿಳೆ ಮತ್ತು ಆಕೆಯ ಪತಿಯ ನಡುವೆ ಬಾಂಧವ್ಯ ಉತ್ತಮವಾಗಿಲ್ಲ. ಇವರಿಬ್ಬರಿಗೆ ಇಬ್ಬರು ಮಕ್ಕಳಿದ್ದು, ಮೊದಲ ಮಗುವಿಗೆ 10 ವರ್ಷ, ಇನ್ನೊಂದಕ್ಕೆ 6ವರ್ಷ. ಆದರೆ ಜಗಳ ಮಿತಿಮೀರಿದೆ. ಮನೆಯೆಂಬುದು ಯುದ್ಧಭೂಮಿಯೆಂಬಂತಾಗಿದೆ ಎಂಬುದು, ಮಹಿಳೆ ಸಲ್ಲಿಸಿದ ಅರ್ಜಿಯಿಂದ ಗೊತ್ತಾಗುತ್ತದೆ. ಅಷ್ಟೇ ಅಲ್ಲ, ತನ್ನ ಪತಿ ಒಬ್ಬ ಅಶಿಸ್ತಿನ ಮನುಷ್ಯ ಮತ್ತು ಕಠಿಣ ಸ್ವಭಾವದವನು ಎಂದು ಹೇಳಿಕೊಂಡಿದ್ದಾರೆ. ಆದರೆ ಅದಕ್ಕೆ ಪ್ರತಿಯಾಗಿ ಆಕೆಯ ಪತಿ, ತಾನು ಹಾಗಿಲ್ಲ. ಏನೂ ತೊಂದರೆ ಮಾಡುತ್ತಿಲ್ಲ, ಮಕ್ಕಳು ಮತ್ತು ಪತ್ನಿಗೆ ಬೆಂಬಲವಾಗಿ ಇದ್ದೇನೆ ಎಂದೂ ತಿಳಿಸಿದ್ದಾರೆ. ಒಬ್ಬರಿಗೊಬ್ಬರು ಮಾಡಿದ ಆರೋಪವನ್ನೇ ಆಧಾರವಾಗಿಟ್ಟುಕೊಂಡು, ಅದರ ಅರ್ಹತೆಯ ಮೇಲೆ ಏನೂ ಹೇಳಲು ಸಾಧ್ಯವಿಲ್ಲ. ಆದರೆ ಇವರಿಬ್ಬರ ಕೆಲವು ಮೂಲಭೂತ ನಡವಳಿಕೆಯನ್ನು ಆಧರಿಸಿ ತೀರ್ಪು ಕೊಡಬಹುದು’ ಎಂದು ಹೇಳಿದ್ದಾರೆ.
ಅದೆಷ್ಟೋ ದಂಪತಿಗಳು ತಮ್ಮ ದಾಂಪತ್ಯ ಜೀವನ ಹಳಸಿದ ಮೇಲೆ ಕೂಡ ಒಂದೇ ಸೂರಿನಡಿ ಬದುಕುತ್ತಿರುತ್ತಾರೆ. ತಮ್ಮ ವೈಯಕ್ತಿಕ ಜೀವನ ಹಾಳಾಗಿದ್ದರೂ, ಕುಟುಂಬದ ಶಾಂತಿ ಕದಡುವುದಿಲ್ಲ. ಮಕ್ಕಳೆದುರು ಸಭ್ಯತೆ ಮೀರುವುದಿಲ್ಲ. ಆದರೆ ಪ್ರಸ್ತುತ ಪ್ರಕರಣ ಹಾಗಿಲ್ಲ, ಇಲ್ಲಿ ಗಂಡನ ನಿರಂತರವಾದ ನಿಂದನಾತ್ಮಕ ಮಾತುಗಳು, ಜಗಳ, ಗಲಾಟೆ ಮಕ್ಕಳ ಮನಸಿನ ಮೇಲೆ ಕೆಟ್ಟ ಪ್ರಭಾವ ಬೀರುತ್ತಿದೆ. ಮಕ್ಕಳು ಮತ್ತು ಅರ್ಜಿದಾರ ಮಹಿಳೆ ಸದಾ ಭಯದಲ್ಲೇ ಬದುಕಲು ಸಾಧ್ಯವಿಲ್ಲ. ಮನೆಯ ಶಾಂತಿ-ವಾತಾವರಣ ಹಾಳಾಗಲು ಪತಿಯೇ ಕಾರಣ ಎಂದಾದರೆ, ಅವನನ್ನು ಮನೆ ಬಿಟ್ಟು ಹೋಗುವಂತೆ ಸೂಚಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಹೀಗಾಗಿ ಪತಿಯೇ ಮನೆಬಿಟ್ಟು ಹೋಗಲಿ’ ಎಂದೂ ನ್ಯಾಯಾಧೀಶರು ತಿಳಿಸಿದ್ದಾರೆ.
ಪತ್ನಿ ಸಲ್ಲಿಸಿದ ಅರ್ಜಿಗೆ ಪ್ರತಿ ಅರ್ಜಿ ಸಲ್ಲಿಸಿದ ಆಕೆಯ ಪತಿ ಮಹಿಳೆ ವಿರುದ್ಧವೂ ಹಲವು ಆರೋಪಗಳನ್ನು ಮಾಡಿದರು. ‘ಅವಳು ಮನೆಯಲ್ಲೇ ಇರುವುದಿಲ್ಲ. ಸದಾ ಹೊರಗೆ ತಿರುಗುತ್ತಿರುತ್ತಾಳೆ. ಇದರಿಂದ ನನಗೆ, ಮಕ್ಕಳಿಗೆ ಎಲ್ಲರಿಗೂ ಕಷ್ಟವಾಗುತ್ತಿದೆ’ ಎಂದೂ ಹೇಳಿದರು. ಆದರೆ ನ್ಯಾಯಾಧೀಶರು ಅದನ್ನು ತುಂಬ ಗಂಭೀರವಾಗಿ ಪರಿಗಣಿಸಲಿಲ್ಲ.
ಇದನ್ನೂ ಓದಿ: ಆಕೆ ತೊಟ್ಟಿದ್ದು ಲೈಂಗಿಕ ಪ್ರಚೋದನಕಾರಿ ಉಡುಪು; ಈ ಕಾರಣ ಕೊಟ್ಟು ಲೇಖಕನಿಗೆ ನಿರೀಕ್ಷಣಾ ಜಾಮೀನು ನೀಡಿದ ಕೋರ್ಟ್