ಗಾಂಧಿನಗರ: ಗುಜರಾತ್‌ನ ಸೂರತ್‌ನಲ್ಲಿ ಹಿಂದು ಮಹಿಳೆಯೊಬ್ಬರನ್ನು ಮದುವೆಯಾಗಲು ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿದ ಮುಸ್ಲಿಂ ಯುವಕನನ್ನು ಆಗಸ್ಟ್ 25ರಂದು ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಮೊಹಮ್ಮದ್ ತೊಹಿದುಲ್ ಅಜೀಜ್ ಹಕ್ (Mohammad Tohidul Ajij Haq) ಎಂಬಾತನು ಸೂರತ್‌ನಲ್ಲಿ ಹಿಂದು ವ್ಯಕ್ತಿಯ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಮಹಿಳೆಯೊಬ್ಬರಿಗೆ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಪ್ರಕರಣದ ಹಿಂದೆ ಲವ್ ಜಿಹಾದ್ (Love Jihad) ಷಡ್ಯಂತ್ರ ಇದೆ ಎಂಬ ಆರೋಪಗಳೂ ಕೇಳಿಬಂದಿವೆ.
ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯು ಮೊದಲು ಸೂರತ್‌ನಲ್ಲಿ ಹಿಂದುಗಳೇ ಹೆಚ್ಚು ವಾಸಿಸುವ ಪ್ರದೇಶಕ್ಕೆ ಆಗಮಿಸಿದ್ದಾನೆ. ಅಲ್ಲಿ, ಕ್ರಿಕೆಟಿಗ ರೋಹಿತ್ ಶರ್ಮಾ ಎಂಬ ಹೆಸರಿಟ್ಟುಕೊಂಡು, ಅದೇ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಸಿದ್ದಾನೆ. ಅಷ್ಟೇ ಅಲ್ಲ, ಹಿಂದು ಮಹಿಳೆಯೊಬ್ಬರಿಗೆ ತಾನೂ ಹಿಂದು ಎಂದೂ, ತನ್ನ ಹೆಸರು ರೋಹಿತ್ ಶರ್ಮಾ ಎಂದೂ ನಂಬಿಸಿದ್ದಾನೆ. ಬಳಿಕ ಮಹಿಳೆಯನ್ನು ಮದುವೆಯಾಗಿದ್ದಾನೆ.
ಮಹಿಳೆಯನ್ನು ಮದುವೆಯಾದ ಬಳಿಕ ಆತ ಮುಸ್ಲಿಮರು ಹೆಚ್ಚಿರುವ ಪ್ರದೇಶಕ್ಕೆ ತೆರಳಿದ್ದಾನೆ. ಆ ಪ್ರದೇಶದಲ್ಲಿ ಮುಸ್ಲಿಮರೇ ಹೆಚ್ಚಾಗಿರುವುದು, ಪತಿಯೂ ಅದೇ ಆಚರಣೆಗಳನ್ನು ಪಾಲಿಸಿದಾಗ ಮಹಿಳೆಗೆ ಅನುಮಾನ ಬಂದಿದೆ. ಇದಾದ ನಂತರ ಪರಿಶೀಲಿಸಿದಾಗ ಪತಿಯು ಮುಸ್ಲಿಂ ಎಂದೂ, ಆತನ ಹೆಸರು ತೊಹಿದುಲ್ ಅಜೀಜ್ ಹಕ್ ಎಂದೂ ಗೊತ್ತಾಗಿದೆ. ಬಳಿಕ ಮಹಿಳೆಯು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Love Jihad: ಹೊಸ ಕಾನೂನಿನಲ್ಲಿ ಲವ್ ಜಿಹಾದ್‌ಗೆ ಬ್ರೇಕ್; ನಕಲಿ ಐಡೆಂಟಿಟಿ ತೋರಿಸಿ ಮದುವೆಯಾದರೆ ಜೈಲು ಗ್ಯಾರಂಟಿ
ದೂರಿನ ಬಳಿಕ ಸೂರತ್ ಪೊಲೀಸರು ತೊಹಿದುಲ್ ಅಜೀಜ್ ಹಕ್‌ನನ್ನು ಬಂಧಿಸಿದ್ದಾರೆ. ಬಂಧಿಸಿ ವಿಚಾರಣೆ ನಡೆಸಿದಾಗ ಆತನು ನಕಲಿ ಆಧಾರ್ ಕಾರ್ಡ್ ಮೂಲಕ ಮಾಡಿರುವ ವಂಚನೆಯನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ, ಸ್ಪಾ ಒಂದರಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಈತ ಅಹ್ಮದ್ ಖಾನ್ ಎಂಬ ಹೆಸರಿನಲ್ಲಿ ಮತ್ತೊಂದು ನಕಲಿ ಆಧಾರ್ ಕಾರ್ಡ್ ಮಾಡಿಸಿದ್ದ. ಇದಕ್ಕಾಗಿ ಕಾಮರಾಜ್ ಎಂಬಾತನಿಗೆ 1,500 ರೂಪಾಯಿ ಕೊಟ್ಟಿದ್ದ ಎಂಬುದು ಕೂಡ ತನಿಖೆಯಿಂದ ತಿಳಿದುಬಂದಿದೆ. ಸ್ಥಳೀಯರು ಈತನ ವಿರುದ್ಧ ಲವ್ ಜಿಹಾದ್ ಆರೋಪವನ್ನೂ ಮಾಡಿದ್ದಾರೆ ಎನ್ನಲಾಗಿದೆ.