ಅಡುಗೆ ಮನೆಯಲ್ಲಿ ಉಪ್ಪು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಈ ಟೊಮ್ಯಾಟೊ ಎಂಬಂಥ ಕಾಲ ಇದು. ಆದರೀಗ ಟೊಮ್ಯಾಟೊ ಬೆಲೆ (Tomato Price)ವಿಪರೀತವಾಗಿ ಏರಿಕೆಯಾಗಿದೆ. ದೇಶದ ಅನೇಕ ಭಾಗಗಳಲ್ಲಿ ಟೊಮ್ಯಾಟೊ ಬೆಲೆ ಕೆಜಿಗೆ 100 ರೂಪಾಯಿ ದಾಟಿದೆ. ಈ ಬೆಲೆ ಏರಿಕೆ ವಿರುದ್ಧ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಅದರಲ್ಲೀಗ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಕಾರ್ಯಕರ್ತರ ಪ್ರತಿಭಟನೆ ಗಮನಸೆಳೆದಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಇಂದು 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ ಬರ್ತ್ ಡೇ ನಿಮಿತ್ತ ಸಮಾಜವಾದಿ ಪಕ್ಷದ ಕಾರ್ಯಕರ್ತರು ವಿವಿಧ ಕಡೆಗಳಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಅದರಲ್ಲಿ ವಾರಾಣಸಿಯಲ್ಲಿ ಸಮಾಜವಾದಿ ಪಾರ್ಟಿ ಕಾರ್ಯಕರ್ತರು ಅಖಿಲೇಶ್ ಯಾದವ್ ಬರ್ತ್ ಡೇ ಆಚರಣೆಯ ಜತೆಜತೆಗೇ, ಟೊಮ್ಯಾಟೊ ಬೆಲೆ ಏರಿಕೆಯ ವಿರುದ್ಧವೂ ವ್ಯಂಗ್ಯ ಪ್ರತಿಭಟನೆ ನಡೆಸಿದರು. ಟೊಮ್ಯಾಟೊ ಕೇಕ್ ಕತ್ತರಿಸಿದರು. ಅಷ್ಟೇ ಅಲ್ಲ, ಒಂದಷ್ಟು ಜನರಿಗೆ ಟೊಮ್ಯಾಟೊ ವಿತರಿಸುವ ಮೂಲಕ ಬೆಲೆ ಏರಿಕೆ ಬಗ್ಗೆ ಗಮನ ಸೆಳೆದರು. ಇಲ್ಲಿ ಟೊಮ್ಯಾಟೊ ಕೇಕ್ ಎಂದರೆ ಟೊಮ್ಯಾಟೊದಿಂದ ತಯಾರಿಸಿದ ಕೇಕ್ ಅಲ್ಲ, ಬದಲಿಗೆ ಟೊಮ್ಯಾಟೊ ಹಣ್ಣಿನ ಮಾದರಿಯ ಕೇಕ್.
ಇದನ್ನೂ ಓದಿ:Tomato Price Hike: 1000 ರೂ. ಗಡಿ ದಾಡಿದ 1 ಬಾಕ್ಸ್ ಟೊಮ್ಯಾಟೊ ದರ!
ಇನ್ನು ಟೊಮ್ಯಾಟೊ ಬೆಲೆ ಏರಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಟೊಮ್ಯಾಟೊ ಬೆಲೆ ಕಡಿಮೆ ಮಾಡಲು ಕ್ರಿಯೇಟಿವ್ ಉಪಾಯಗಳನ್ನು ಕೊಡುವಂತೆ ಜನರ ಬಳಿಯೇ ಕೇಳಿದೆ. ಇದಕ್ಕಾಗಿ ಒಂದು ಅಭಿಯಾನವನ್ನು ಶುರು ಮಾಡಿದ್ದು, ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕರು, ಸಣ್ಣ ಉದ್ಯಮಿಗಳು, ವೃತ್ತಿ ಜೀವನದಲ್ಲಿ ತೊಡಗಿಸಿಕೊಂಡವರು, ಶಿಕ್ಷಕರು, ನವೋದ್ಯಮ ಆರಂಭಿಸಿದವರು ಅಭಿಯಾನದಲ್ಲಿ ಪಾಲ್ಗೊಂಡು, ಟೊಮ್ಯಾಟೊ ಬೆಲೆ ಇಳಿಸಲು ಕ್ರಿಯೇಟಿವ್ ಐಡಿಯಾಗಳನ್ನು ಕೇಂದ್ರಕ್ಕೆ ಕೊಡಬಹುದಾಗಿದೆ.
VIDEO | “It is Samajwadi Party president Akhilesh Yadav’s birthday today, which we always celebrate. However, this time, we are celebrating it by distributing tomatoes to highlight the inflation in the country,” say Samajwadi Party workers as they celebrate party chief’s birthday… pic.twitter.com/zJKrN4EaIn
— Press Trust of India (@PTI_News) July 1, 2023