ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿ ಚುನಾವಣೆ (West Bengal Panchayat Election 2023) ಜುಲೈ 8ಕ್ಕೆ ನಡೆಯಲಿದೆ. ಹಾಗೇ, ದಿನೇದಿನೆ ಹಿಂಸಾಚಾರದ ಪ್ರಮಾಣವೂ ಏರಿಕೆಯಾಗುತ್ತಿದೆ. ಇಲ್ಲಿನ ದಕ್ಷಿಣ 24 ಪರಗಣ ಜಿಲ್ಲೆಯ ಬಸಂತಿ ಎಂಬ ಗ್ರಾಮಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನೊಬ್ಬನ ಹತ್ಯೆಯಾಗಿದೆ. ಐದು ದಿನಗಳ ಹಿಂದೆ ಇಲ್ಲಿನ ಕೂಚ್ ಬೆಹಾರಾದ ದಿನ್ಹಟಾ ಎಂಬಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರ ಮಧ್ಯೆ ಮಾರಾಮಾರಿ, ಗುಂಡಿನ ಚಕಮಕಿ ನಡೆದಿತ್ತು. ಅದರಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಜೀವ ಕಳೆದುಕೊಂಡಿದ್ದ. ಈಗ ಇನ್ನೊಬ್ಬನ ಹತ್ಯೆಯಾಗಿದೆ.
ಜುಲೈ 8ರಂದು ನಡೆಯಲಿರುವ ಪಶ್ಚಿಮ ಬಂಗಾಳ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನವಾದ ಜೂನ್ 15ರಿಂದಲೂ ರಾಜ್ಯಾದ್ಯಂತ ವಿವಿಧ ಕಡೆಗಳಲ್ಲಿ ಹಿಂಸಾಚಾರ ನಡೆಯುತ್ತಲೇ ಇದೆ. ಸಾಲುಸಾಲು ಹೆಣಗಳು ಬೀಳುತ್ತಿವೆ. ಈ ವಿಷಯವನ್ನು ಕೋಲ್ಕತ್ತ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ಗಳು ಗಂಭೀರವಾಗಿ ಪರಿಗಣಿಸಿವೆ. ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರ ನಿಯಂತ್ರಣ ಮತ್ತು ಪಂಚಾಯಿತಿ ಚುನಾವಣೆ ಅಭ್ಯರ್ಥಿಗಳು ಈಗಾಗಲೇ ಸಲ್ಲಿಸಿರುವ ನಾಮಪತ್ರಗಳು ಇಲ್ಲದಂತಾಗಿರುತ್ತಿರುವುದರ ಬಗ್ಗೆ ಹೈಕೋರ್ಟ್ಗೆ ದೂರು ಸಲ್ಲಿಕೆಯಾಗಿದೆ. ಅದರ ಅರ್ಜಿ ನಡೆಸಿದ ಹೈಕೋರ್ಟ್ ಈ ಪರಿಯ ಹಿಂಸಾಚಾರ ರಾಜ್ಯಕ್ಕೆ ನಾಚಿಕೆಗೇಡು ಎಂದಿತ್ತು. ಇನ್ನು ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಮೀಸಲು ಪಡೆಗಳ ನಿಯೋಜನೆಗೆ ಕೇಂದ್ರಕ್ಕೆ ಮನವಿ ಮಾಡಿ ಎಂದು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಕೋಲ್ಕತ್ತ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ಗಳು ಸೂಚನೆ ನೀಡಿವೆ.
ಇದೆಲ್ಲದರ ಮಧ್ಯೆ ಹಿಂಸಾಚಾರ ಮುಂದುವರಿದಿದೆ. ಇದೀಗ ಮೃತಪಟ್ಟ ಟಿಎಂಸಿ ನಾಯಕನ ಹೆಸರು ಜಿಯಾರುಲ್ ಮೊಲ್ಲಾ ಎಂದು ಗುರುತಿಸಲಾಗಿದೆ. ಗುಂಡೇಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಈತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ರಾಜಕೀಯ ದ್ವೇಷಕ್ಕೇ ಜಿಯಾರುಲ್ ಮೊಲ್ಲಾ ಕೊಲೆಯಾಗಿದೆ ಎಂದು ಅವರ ಕುಟುಂಬ ಪ್ರತಿಪಾದಿಸುತ್ತಿದೆ.
ಇದನ್ನೂ ಓದಿ: Bengal Panchayat Polls: ಪಶ್ಚಿಮ ಬಂಗಾಳ ರಣರಂಗ; ಟಿಎಂಸಿ ಕಾರ್ಯಕರ್ತನ ಕೊಲೆ
ಜಿಯಾರುಲ್ ಪುತ್ರ ಮಾಧ್ಯಮಗಳೊಂದಿಗೆ ಮಾತನಾಡಿ ‘ನನ್ನ ತಂದೆ ತೃಣಮೂಲ ಕಾಂಗ್ರೆಸ್ನ ಯುವಮೋರ್ಚಾದ ಅಧ್ಯಕ್ಷರಾಗಿದ್ದರು.ಅವರಿಗೆ ತುಂಬ ಜನ ಶತ್ರುಗಳಿದ್ದರು. ಅವರೆಲ್ಲರೂ ರಾಜಕೀಯ ವಿಷಯಕ್ಕೆ ಶತ್ರುತ್ವ ಕಟ್ಟಿಕೊಂಡವರೇ ಆಗಿದ್ದಾರೆ. ಪದೇಪದೆ ಫೋನ್ನಲ್ಲಿ ಅವರಿಗೆ ಬೆದರಿಕೆ ಕರೆ ಬರುತ್ತಿತ್ತು’ ಎಂದು ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.