ದೆಹಲಿ: ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರು ಇಂದು ರಾಜೀನಾಮೆ ನೀಡಿದ್ದಾರೆ. ಅವರಿಂದು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಸತ್ಯದೇವ ನಾರಾಯಣ್ ಆರ್ಯಾ ಅವರಿಗೆ ಸಲ್ಲಿಸಿದ್ದಾರೆ. ತ್ರಿಪುರದಲ್ಲಿ 2023ರ ಮಾರ್ಚ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇನ್ನೂ ಕೆಲವೇ ತಿಂಗಳು ಬಾಕಿ ಇರುವಾಗ ಬಿಪ್ಲಬ್ ಕುಮಾರ್ ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ | ಬಿಜೆಪಿಯಿಂದ ಭಯದ ವಾತಾವರಣ ಸೃಷ್ಟಿ, ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ಸೋನಿಯಾ
ತ್ರಿಪುರಕ್ಕೆ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಇಂದು ಸಂಜೆ 5ಗಂಟೆಗೆ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದ್ದು, ಕೇಂದ್ರ ಸಚಿವ ಭೂಪೇಂದರ್ ಯಾದವ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತೌಡೆ ಕೇಂದ್ರ ವೀಕ್ಷಕರಾಗಿ ಈ ಸಭೆಯಲ್ಲಿ ಉಪಸ್ಥಿತರಿರುವರು. ಹಾಗೇ, ಬಿಜೆಪಿ ತ್ರಿಪುರ ರಾಜ್ಯ ಉಸ್ತುವಾರಿ ವಿನೋದ್ ಸೋಂಕರ್ ಕೂಡ ಭಾಗವಹಿಸಲಿದ್ದಾರೆ. ತ್ರಿಪುರ ಸಿಎಂ ರಾಜೀನಾಮೆ ಬಗ್ಗೆ ವಕ್ತಾರ ಸುಬ್ರತಾ ಚಕ್ರವರ್ತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಮಗೂ ಈಗಷ್ಟೇ ವಿಷಯ ಗೊತ್ತಾಗಿದ್ದು. ಬಿಜೆಪಿ ರಾಜ್ಯಾಧ್ಯಕ್ಷರ ಜತೆ ಚರ್ಚಿಸಿ ಮಾಧ್ಯಮಗಳಿಗೆ ವಿವರಿಸುತ್ತೇವೆ ಎಂದಿದ್ದಾರೆ.
ತ್ರಿಪುರದಲ್ಲಿ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಬಳಿಕ ಬಿಪ್ಲಬ್ ಕುಮಾರ್ ದೇಬ್ ಮುಖ್ಯಮಂತ್ರಿ ಹುದ್ದೆಗೆ ಏರಿದ್ದರು. 2018ರವರೆಗೂ 25 ವರ್ಷಗಳಿಂದ ತ್ರಿಪುರದಲ್ಲಿ ಲೆಫ್ಟ್ ಫ್ರಂಟ್ ಸರ್ಕಾರದ ಆಡಳಿತವೇ ಇತ್ತು. ತ್ರಿಪುರ ಸಿಎಂ ಹೆಚ್ಚಾಗಿ ಯಾವುದೇ ವಿವಾದಗಳನ್ನೂ ಮೈಮೇಲೆ ಎಳೆದುಕೊಂಡವರಲ್ಲ. ಗುರುವಾರ ಇವರು ದೆಹಲಿಗೆ ಹೋಗಿ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿಯಾಗಿದ್ದರು. ಆಗಿನಿಂದಲೇ ಸ್ವಲ್ಪ ಗುಸುಗುಸು ಪ್ರಾರಂಭವಾಗಿತ್ತು. ಆದರೂ ಇಂದು ಬಿಪ್ಲಬ್ ಕುಮಾರ್ ದೇಬ್ ರಾಜೀನಾಮೆ ನೀಡಿದ್ದು ತಮಗೂ ಅಚ್ಚರಿಯನ್ನೇ ತಂದಿದೆ ಎಂದು ಅವರ ಕ್ಯಾಬಿನೆಟ್‌ನ ಹಲವು ಸಚಿವರು ತಿಳಿಸಿದ್ದಾರೆ. ತ್ರಿಪುರದಲ್ಲಿ ಮಾತ್ರವಲ್ಲ, ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಗುಜರಾತ್, ಕರ್ನಾಟಕದಲ್ಲಿಯೂ ಮುಖ್ಯಮಂತ್ರಿ ಬದಲಾವಣೆ ಆಗಿದೆ. ಉತ್ತರಾಖಂಡ್‌ನಲ್ಲಿಯೂ ಕೂಡ ಅಲ್ಲಿನ ಅಸೆಂಬ್ಲಿ ಚುನಾವಣೆಗೂ ಮೊದಲು ಮುಖ್ಯಮಂತ್ರಿ ಬದಲಾಗಿದ್ದರು.
ಇದನ್ನೂ ಓದಿ | ರಾಜ್ಯದಲ್ಲಿ ಯಾವುದೇ ಚುನಾವಣೆ ಎದುರಿಸಲು ಬಿಜೆಪಿ ಸಂಪೂರ್ಣ ಸಿದ್ಧ: ನಳಿನ್ ಕುಮಾರ್ ಕಟೀಲ್