ತ್ರಿಪುರ: ವಿವಿಧ ವೃತ್ತಿಯಲ್ಲಿ ಇದ್ದವರು ಅದನ್ನು ಬಿಟ್ಟು ರಾಜಕೀಯಕ್ಕೆ ಸೇರಿದವರು ಹಲವರಿದ್ದಾರೆ. ವಕೀಲರಾಗಿದ್ದವರು, ವೈದ್ಯರಾಗಿದ್ದವರು, ಪ್ರಾಧ್ಯಾಪಕರಾಗಿದ್ದವರು..ಹೀಗೆತಮ್ಮ ವೃತ್ತಿಯನ್ನು ಬಿಟ್ಟು ರಾಜಕೀಯಕ್ಕೆ ಇಳಿದವರನ್ನು ಅನೇಕರನ್ನು ನೋಡಬಹುದು. ಅಂಥವರಲ್ಲಿ ಒಬ್ಬರು ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಶಾ.
ಡಾ.ಮಾಣಿಕ್ ಶಾ ಅವರು ದಂತವೈದ್ಯರಾಗಿದ್ದವರು. ರಾಜಕೀಯಕ್ಕೆ ಬಂದಮೇಲೆ ಮತ್ತವರು ತಿರುಗಿ ತಮ್ಮ ವೈದ್ಯಕೀಯ ವೃತ್ತಿಯತ್ತ ಕಾಲು ಹಾಕಿರಲಿಲ್ಲ. ಸಕ್ರಿಯವಾಗಿ ರಾಜಕಾರಣದಲ್ಲಿಯೇ ತೊಡಗಿಬಿಟ್ಟಿದ್ದರು. ಆದರೆ ಅವರೀಗ ಸುದೀರ್ಘ ಸಮಯದ ನಂತರ ಮತ್ತೆ ಹಳೇ ವೃತ್ತಿಗೆ ಮರಳಿದ್ದರು. ಹಪಿಯಾನಾದಲ್ಲಿರುವ ತ್ರಿಪುರ ವೈದ್ಯಕೀಯ ಕಾಲೇಜಿನಲ್ಲಿ 10 ವರ್ಷದ ಹುಡುಗನೊಬ್ಬನಿಗೆ ಹಲ್ಲಿಗೆ ಸಂಬಂಧಪಟ್ಟ ಒಂದು ಸರ್ಜರಿ ಮಾಡಿದ್ದಾರೆ. ಹಾಗೇ ಅದರ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡು, ‘ನಾನು ಈ ಹಿಂದೆ ಕೆಲಸ ಮಾಡುತ್ತಿದ್ದ ತ್ರಿಪುರ ವೈದ್ಯಕೀಯ ಕಾಲೇಜಿನಲ್ಲಿ ಹತ್ತು ವರ್ಷದ ಅಕ್ಷಿತ್ ಘೋಶ್ ಎಂಬುವನಿಗೆ ಹಲ್ಲಿಗೆ ಸಂಬಂಧಪಟ್ಟ ಒಂದು ಸರ್ಜರಿ ಮಾಡಿದೆ. ಇದು ನನಗೆ ಖುಷಿಕೊಟ್ಟಿತು. ಇಷ್ಟು ವರ್ಷ ನನ್ನ ವೈದ್ಯಕೀಯ ವೃತ್ತಿಯಿಂದ ದೂರವಿದ್ದರೂ, ನನಗೆ ಸರ್ಜರಿ ಕಷ್ಟ ಎನ್ನಿಸಲೇ ಇಲ್ಲ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ಜನವರಿ 11ರಂದು ಬೆಳಗ್ಗೆ 9ಗಂಟೆ ಹೊತ್ತಿಗೆ ಆಪರೇಶನ್ ಥಿಯೇಟರ್ಗೆ ಹೋದ ಮುಖ್ಯಮಂತ್ರಿ ಮಾಣಿಕ್ ಶಾ ಅವರು ಅರ್ಧಗಂಟೆಯಲ್ಲಿ ಈ ಸರ್ಜರಿ ನಡೆಸಿದ್ದಾರೆ. ಡಾ. ಅಮಿತ್ ಲಾಲ್ ಗೋಸ್ವಾಮಿ, ಡಾ. ಪೂಜಾ ದೇವನಾಥ್, ಡಾ. ರುದ್ರಪ್ರಸಾದ್ ಚಕ್ರವರ್ತಿ ಅವರು ಡಾ. ಮಾಣಿಕ್ ಶಾ ಅವರಿಗೆ ಈ ಸರ್ಜರಿಯಲ್ಲಿ ಸಹಕರಿಸಿದರು. ಹಾಗೇ, ಡಾ. ಸ್ಮಿತಾ ಪೌಲ್, ಡಾ. ಕಾಂಚನಾ ದಾಸ್ ಮತ್ತಿತರರೂ ಈ ಸಂದರ್ಭದಲ್ಲಿ ಹಾಜರಿದ್ದರು.
ಮಾಣಿಕ್ ಶಾ ಅವರು ಕಾಂಗ್ರೆಸ್ನಲ್ಲಿ ಇದ್ದವರು. 2016ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಹಾಗೇ, 2020ರಲ್ಲಿ ತ್ರಿಪುರ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡು, 2022ರ ಮೇ ತಿಂಗಳಲ್ಲಿ ಮುಖ್ಯಮಂತ್ರಿಯಾಗಿದ್ದಾರೆ.
ಇದನ್ನೂ ಓದಿ: ತ್ರಿಪುರ ಹೊಸ ಮುಖ್ಯಮಂತ್ರಿ ಮಾಣಿಕ್ ಸಾಹಾ ಮೂಲತಃ ಹಲ್ಲಿನ ಡಾಕ್ಟರ್