ನವ ದೆಹಲಿ: ಜುಲೈ 18ಕ್ಕೆ ನಿಗದಿಯಾಗಿರುವ ರಾಷ್ಟ್ರಪತಿ ಚುನಾವಣೆ (President Election 2022)ಯಲ್ಲಿ ಎನ್‌ಡಿಎ ಅಭ್ಯರ್ಥಿಗೆ ಪ್ರತಿಯಾಗಿ ಪ್ರತಿಪಕ್ಷಗಳ ಸರ್ವ ಸಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಇಂದು (ಜೂನ್ 15) ಆಯೋಜಿಸಿರುವ ಮಹತ್ವಾಕಾಂಕ್ಷೆಯ ಸಭೆಯ ಮೇಲೆ ಎಲ್ಲರ ಕುತೂಹಲದ ಕಣ್ಣುಗಳು ನೆಟ್ಟಿವೆ. ʻವಿಭಜಕ ಶಕ್ತಿಗಳʼ ವಿರುದ್ಧ ಒಟ್ಟಾಗಿ ಹೋರಾಟ ಮಾಡುವ ಉದ್ದೇಶದಿಂದ ಮಮತಾ ಬ್ಯಾನರ್ಜಿ ಅವರು ತುಂಬ ಮುತುವರ್ಜಿಯಿಂದ ಈ ಸಂಘಟಿತ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಬಿಜೆಪಿಯೇತರ ಎಲ್ಲ 22 ರಾಜಕೀಯ ಪಕ್ಷಗಳಿಗೆ ಖುದ್ದಾಗಿ ಪತ್ರ ಬರೆದು, ಕರೆ ಮಾಡಿ ಆಹ್ವಾನ ನೀಡಿರುವ ಮಮತಾ ಬ್ಯಾನರ್ಜಿ ಅವರು ಇದನ್ನೊಂದು ಯಶಸ್ವಿ ಕಾರ್ಯತಂತ್ರವಾಗಿ ರೂಪಿಸಿದ್ದಾರೆ. ಅವರ ಈ ಆಹ್ವಾನಕ್ಕೆ ಬಹುತೇಕ ಎಲ್ಲ ಪಕ್ಷಗಳು ಮನ್ನಣೆ ನೀಡಿವೆ.
ಕಾಂಗ್ರೆಸ್, ಎನ್‌ಸಿಪಿ, ಎಸ್‌ಪಿ, ಆರ್‌ಜೆಡಿ, ನ್ಯಾ಼ಷನಲ್ ಕಾನ್ಫರೆನ್ಸ್, ಸಿಪಿಎಂ, ಸಿಪಿಐ, ಜೆಎಂಎಂ, ಶಿವಸೇನೆ, ಮುಸ್ಲಿಂಲೀಗ್, ಪಿಡಿಪಿ, ಜೆಡಿಎಸ್, ಆರ್‌ಎಲ್‌ಡಿ ಸೇರಿದಂತೆ ಪ್ರಮುಖ ಪಕ್ಷಗಳು ಇಂದಿನ ಮಹತ್ವದ ಸಭೆಯಲ್ಲಿ ಭಾಗವಹಿಸಲು ನಿರ್ಧರಿಸಿವೆ. ಆದರೆ, ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ, ಆಮ್ ಆದ್ಮಿ ಪಾರ್ಟಿ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಈ ಸಭೆಯಿಂದ ದೂರ ಉಳಿಯಲು ನಿರ್ಧರಿಸಿವೆ.
ಕಾಂಗ್ರೆಸ್ ಪೂರ್ಣ ಒಪ್ಪಿಗೆ
ಮಮತಾ ಬ್ಯಾನರ್ಜಿ ಪ್ರಯತ್ನಕ್ಕೆ ಕಾಂಗ್ರೆಸ್ ಸಂಪೂರ್ಣ ಬೆಂಬಲವನ್ನು ಪ್ರಕಟಿಸಿದೆ. ಇಂದಿನ ಸಭೆಗೆ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್, ರಣದೀಪ್ ಸುರ್ಜೇವಾಲ ಅವರೇ ಭಾಗವಹಿಸಲಿದ್ದಾರೆ.
ಮಮತಾ ನಿರ್ಧಾರಕ್ಕೆ ಸೈ ಎಂದ ಎಸ್‌ಪಿ
ಸಮಾಜವಾದಿ ಪಾರ್ಟಿ ಮಮತಾ ಬ್ಯಾನರ್ಜಿ ಅವರ ಯಾವುದೇ ನಿರ್ಧಾರವನ್ನು ಬೆಂಬಲಿಸುವುದಾಗಿ ಪ್ರಕಟಿಸಿದೆ. ಅರವಿಂದ್ ಕೇಜ್ರಿವಾಲ್ ಅವರು ತಾನು ಪಂಜಾಬ್‌ನಲ್ಲಿರುವುದರಿಂದ ಸಭೆಗೆ ಬರಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಪವಾರ್ ನಿರ್ಧಾರದಿಂದ ಹಿನ್ನಡೆ
ಮಮತಾ ಬ್ಯಾನರ್ಜಿ ಅವರ ಪ್ರಯತ್ನವನ್ನು ಎಲ್ಲರೂ ಬೆಂಬಲಿಸಿದ್ದಾರೆ. ಎನ್‌ಸಿಪಿ ಕೂಡಾ ಬೆನ್ನಿಗೆ ನಿಂತಿದೆ. ಆದರೆ, ರಾಷ್ಟ್ರಪತಿ ಸ್ಥಾನಕ್ಕೆ ಸರ್ವ ಸಮ್ಮತ ಆಯ್ಕೆಯ ಮುಂಚೂಣಿ ಸಾಧ್ಯತೆ ಆಗಿರುವ ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ತಾನು ಸ್ಪರ್ಧಿಸುವುದಿಲ್ಲ ಎಂದು ಹೇಳಿರುವುದು ಭಾರಿ ಹಿನ್ನಡೆಯಾಗಿದೆ. ಮಮತಾ ಬ್ಯಾನರ್ಜಿ ಅವರು ಮಂಗಳವಾರವೇ ದಿಲ್ಲಿಗೆ ಬಂದು ಶರದ್ ಪವಾರ್ ಅವರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದರೂ ಪವಾರ್ ಅವರನ್ನು ಒಪ್ಪಿಸಲು ಸಾಧ್ಯವಾಗಿಲ್ಲ. ಎಲ್ಲ ಪಕ್ಷಗಳ ನಾಯಕರ ಜತೆ ಉತ್ತಮ ಸಂಬಂಧ ಹೊಂದಿರುವ ಶರದ್ ಪವಾರ್ ಅವರನ್ನು ಎಲ್ಲರೂ ಒಪ್ಪಬಹುದು ಎನ್ನುವುದು ನಿರೀಕ್ಷೆಯಾಗಿತ್ತು. ಆದರೆ, ಅವರೇ ಒಪ್ಪದಿರುವುದು ಹಿನ್ನಡೆಯಾಗಿದೆ.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ; ಮಮತಾ ಬ್ಯಾನರ್ಜಿ ಕರೆದ ಸಭೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಒಪ್ಪಿಗೆ
ಟಿಆರ್‌ಎಸ್, ಬಿಜೆಡಿ, ಯಾಕಿಲ್ಲ?
ನವೀನ್ ಪಟ್ನಾಯಕ್ ಅವರ ಬಿಜೆಡಿ ಈ ಸಭೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದೆ. ಬಿಜೆಡಿ ಒಡಿಶಾದಲ್ಲಿ ಬಿಜೆಪಿಗೆ ವಿರುದ್ಧವಾಗಿದ್ದರೂ ರಾಷ್ಟ್ರ ಮಟ್ಟದಲ್ಲಿ ತೀವ್ರವಾಗಿ ವಿರೋಧಿಸುತ್ತಿಲ್ಲ ಮತ್ತು ತೀರಾ ಅಗತ್ಯದ ಸಂದರ್ಭದಲ್ಲಿ ಬಿಜೆಪಿ ಬೆಂಬಲಕ್ಕೆ ನಿಂತಿರುವ ಉದಾಹರಣೆಗಳಿವೆ.
ಮಂಗಳವಾರ ತಡ ರಾತ್ರಿಯವರೆಗೆ ಸಭೆ ನಡೆಸಿದ ತೆಲಂಗಾಣ ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳದೆ ಇರಲು ನಿರ್ಧರಿಸಿದೆ. ಟಿಆರ್‌ಎಸ್ ಅಧ್ಯಕ್ಷ ಚಂದ್ರಶೇಖರ್ ಅವರು ಈಗಾಗಲೇ ತಮ್ಮ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಸಮಾನ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ. ಹಾಗಾಗಿ ಈ ತೀರ್ಮಾನ ಎಂದು ಹೇಳಲಾಗಿದೆ. ಅದರೆ, ಚಂದ್ರಶೇಖರ್ ಅವರು ರಾಷ್ಟ್ರಮಟ್ಟದಲ್ಲಿ ಇತರ ಪಕ್ಷಗಳನ್ನು ಸೇರಿಸಿಕೊಂಡು ಒಂದು ಹೊಸ ಕೂಟವನ್ನ ರಚಿಸಲು ಮುಂದಾಗಿದ್ದಾರೆ. ಅವರಿಗೂ ಮಹತ್ವಾಕಾಂಕ್ಷೆ ಇರುವುದರಿಂದ ಪ್ರತ್ಯೇಕವಾಗಿ ಉಳಿಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ವಿಸ್ತಾರ Explainer: ರಾಷ್ಟ್ರಪತಿ ಚುನಾವಣೆ 2022- ಯಾರ ಮತಕ್ಕೆ ಎಷ್ಟು ಬೆಲೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್