Site icon Vistara News

ರೈಲು ಹತ್ತಲು ಬಂದ ಸೈನಿಕನನ್ನು ತಳ್ಳಿದ ಟಿಟಿಇ; ಎರಡೂ ಕಾಲು ಕಳೆದುಕೊಂಡು, ಜೀವನ್ಮರಣ ಹೋರಾಟ ನಡೆಸುತ್ತಿರುವ ಯೋಧ

Bareilly

ಬರೇಲಿ: ರೈಲಿನಲ್ಲಿ ಟಿಟಿಇ (ಟಿಕೆಟ್​ ಪರಿವೀಕ್ಷಕ) ತೋರಿದ ಕ್ರೂರತನಕ್ಕೆ ಭಾರತೀಯ ಸೇನೆ ಯೋಧರೊಬ್ಬರು ಈಗ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಲ್ಲದೆ, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. 24 ರಜಪೂತಾನ ರೈಫಲ್ಸ್​​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 29 ವರ್ಷದ ಸೈನಿಕ ಸೋನು ಕುಮಾರ್ ಸಿಂಗ್​, ಉತ್ತರ ಪ್ರದೇಶದ ಬರೇಲಿ ರೈಲ್ವೆ ಸ್ಟೇಶನ್​​ನಲ್ಲಿ, ದಿಬ್ರುಗಢ್​-ನವ ದೆಹಲಿ ರಾಜಧಾನಿ ಎಕ್ಸ್​ಪ್ರೆಸ್​ ರೈಲು ಹತ್ತಲು ಯತ್ನಿಸಿದಾಗ, ಅದರ ಟಿಟಿಇ (ಟಿಕೆಟ್​ ಪರಿವೀಕ್ಷಕ) ಯೋಧನನ್ನು ತಳ್ಳಿದ್ದಾನೆ. ಈ ಘಟನೆ ನಡೆದಿದ್ದು ಪ್ಲಾಟ್​ಫಾರ್ಮ್​​​ ನಂಬರ್​ 2ರಲ್ಲಿ. ಸದ್ಯ ಸೋನು ಕುಮಾರ್ ಸಿಂಗ್​ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಇನ್ನೂ ಎಚ್ಚರವಾಗಿಲ್ಲ.

ಸೋನು ಕುಮಾರ್ ಸಿಂಗ್​ ಅವರು ಬಾಲಿಯಾ ಜಿಲ್ಲೆಯವರಾಗಿದ್ದು, ದೆಹಲಿಗೆ ಹೋಗುವವರಿದ್ದರು. ಬರೇಲಿ ರೈಲ್ವೆ ಸ್ಟೇಶನ್​​ನಲ್ಲಿ ಟ್ರೇನ್​ ಹತ್ತಬೇಕಿತ್ತು. ಆದರೆ ದುರ್ದೈವಕ್ಕೆ ಅವರ ಜೀವಕ್ಕೇ ಕುತ್ತು ಬಂದಿದೆ. ಈ ಬಗ್ಗೆ ಪ್ರತ್ಯಕ್ಷದರ್ಶಿ ದೇಶ್​ ರಾಜ್​ ಎಂಬುವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ‘ನಾನು ರೈಲ್ವೆ ಸ್ಟೇಶನ್​ನಲ್ಲಿ ಚಹಾ ಮಾರುತ್ತಿದ್ದೆ. ರಾಜಧಾನಿ ಎಕ್ಸ್​ಪ್ರೆಸ್​ ರೈಲು ಬಂದು ನಿಂತಾಗ ಅನೇಕರು ಅದನ್ನು ಹತ್ತಲು ಪ್ರಯತ್ನ ಮಾಡುತ್ತಿದ್ದರು. ನೂಕುನುಗ್ಗಲು ಉಂಟಾಗಿತ್ತು. ಈ ಸೈನಿಕನೂ ಕೂಡ ಕೋಚ್​ ಬಿ6 ಪ್ರವೇಶಿಸಲು ಮುಂದಾದರು. ಆದರೆ ಟಿಟಿಇ ಆ ಸೈನಿಕನನ್ನು ಪ್ಲಾಟ್​ಫಾರ್ಮ್​​ಗೆ ನೂಕಿದ್ದಲ್ಲದೆ, ಕೋಚ್​ ಬಾಗಿಲನ್ನು ರಪ್ಪನೆ ಹಾಕಿದರು. ಆಗ ಯೋಧ, ಚಲಿಸುವ ರೈಲು ಮತ್ತು ಪ್ಲಾಟ್​ಫಾರ್ಮ್​ ನಡುವೆ ಬಿದ್ದು-ಸಿಲುಕಿ ನರಳಿದ್ದಾರೆ. ಕೂಡಲೇ ಅಲ್ಲಿದ್ದವರೆಲ್ಲ ಜೋರಾಗಿ ಕೂಗಿದ್ದಾರೆ. ಚಾಲಕ ರೈಲನ್ನು ನಿಲ್ಲಿಸಿದ್ದಾನೆ. ಕೂಡಲೇ ಯೋಧನನ್ನು ಅಲ್ಲಿಂದ ಹೊರಗೆ ತೆಗೆಯಲಾಯಿತು. ಕ್ರೋಧಗೊಂಡ ಜನರು, ಅಲ್ಲಿಂದ ರೈಲು ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದರು, ಆಗ ರೈಲ್ವೆ ಪೊಲೀಸ್​ ಮುಂದಾಗಿ ಅವರನ್ನು ಕಾಪಾಡಿದ್ದಾರೆ. ಅಲ್ಲಿನ ಪರಿಸ್ಥಿತಿ ತಿಳಿಗೊಳಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಯೋಧನ ಈ ಸ್ಥಿತಿಗೆ ಕಾರಣನಾದ ಟಿಟಿಇ ಪರಾರಿಯಾಗಿದ್ದಾನೆ. ಸುಬೇದಾರ್ ಹರಿಂದರ್ ಕುಮಾರ್ ಸಿಂಗ್ ಎಂಬುವರು ಟಿಟಿಇ ವಿರುದ್ಧ ದೂರು ನೀಡಿದ್ದು, ನಾವು ಅವರ ಪತ್ತೆ ಕಾರ್ಯ ನಡೆಸುತ್ತಿದ್ದೇವೆ. ಸೈನಿಕ ಸೋನು ಕುಮಾರ್​ಗೆ ಪ್ರಜ್ಞೆ ಮರಳಿದ ಮೇಲೆ ಅವರಿಂದ ಹೇಳಿಕೆ ಪಡೆಯುತ್ತೇವೆ ಎಂದು ರೈಲ್ವೆ ಪೊಲೀಸ್​ ಅಧಿಕಾರಿ ಜೀತ್​ ಪ್ರತಾಪ್​ ಸಿಂಗ್​ ತಿಳಿಸಿದ್ದಾರೆ.

ಇದನ್ನೂ ಓದಿ: Dasara Bonus | ರೈಲ್ವೆ ಇಲಾಖೆಯ 11 ಲಕ್ಷ ನೌಕರರಿಗೆ ಕೇಂದ್ರ ಬೋನಸ್‌, ಇದು ದಸರಾ ಉಡುಗೊರೆ

Exit mobile version