ದೆಹಲಿ-ಸಿಡ್ನಿ ಏರ್ ಇಂಡಿಯಾ ವಿಮಾನ (Delhi Sydney flight), ಮಾರ್ಗ ಮಧ್ಯೆ ವಿಪರೀತವಾಗಿ ಅಲುಗಾಡಿದ ಪರಿಣಾಮ ಸುಮಾರು ಏಳು ಪ್ರಯಾಣಿಕರು ಗಾಯಗೊಂಡಿದ್ದಾರೆ. ಏರ್ ಇಂಡಿಯಾದ ಬೋಯಿಂಗ್ 787-800 ವಿಮಾನ ಮಾರ್ಗ ಮಧ್ಯದಲ್ಲಿ ಕಂಪನಕ್ಕೆ ಒಳಗಾಯಿತು (Delhi Sydney flight Turbulence). ಹಲವು ಪ್ರಯಾಣಿಕರು ಸೀಟ್ನಿಂದ ಕೆಳಗೆ ಬಿದ್ದಿದ್ದಾರೆ. ಸೀಟ್ಗಳಿಗೆ ಬಡಿದು ಗಾಯ ಮಾಡಿಕೊಂಡಿದ್ದಾರೆ. ಇದೇ ವಿಮಾನದಲ್ಲಿ ಇದ್ದ ಒಬ್ಬ ವೈದ್ಯ ಮತ್ತು ನರ್ಸ್ ಸೇರಿ ಎಲ್ಲರಿಗೂ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ತಿಳಿಸಿದೆ.
ಈ ವಿಮಾನ ದೆಹಲಿಯಿಂದ ಸಿಡ್ನಿಗೆ ಹೋಗುತ್ತಿದ್ದಾಗ ರಾತ್ರಿ ವೇಳೆ ಘಟನೆ ನಡೆದಿದೆ. ಮುಂಜಾನೆ ಸಿಡ್ನಿಯಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಏರ್ ಇಂಡಿಯಾದ ಏರ್ಪೋರ್ಟ್ ಮ್ಯಾನೇಜರ್ ಖುದ್ದಾಗಿ ನಿಂತು ಗಾಯಗೊಂಡ ಎಲ್ಲ ಪ್ರಯಾಣಿಕರಿಗೂ ವೈದ್ಯಕೀಯ ಚಿಕಿತ್ಸೆಯ ವ್ಯವಸ್ಥೆ ಮಾಡಿಸಿದ್ದಾರೆ. ಹಾಗಂತ ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಏರ್ ಇಂಡಿಯಾ ವಕ್ತಾರ ‘ಮೇ 16ರಂದು ಏರ್ ಇಂಡಿಯಾದ 302 ನಂಬರ್ನ ವಿಮಾನ ಮಾರ್ಗಮಧ್ಯೆ ತೀವ್ರ ಅಲುಗಾಡಿತು. ಇದರಿಂದಾಗಿ ಅದರಲ್ಲಿದ್ದ ಪ್ರಯಾಣಿಕರೆಲ್ಲ ಗಾಬರಿಯಾಗಿದ್ದರು. ಏಳು ಮಂದಿ ಗಾಯಗೊಂಡಿದ್ದರು. ಕೆಳಗೆ ಇಳಿಯುತ್ತಿದ್ದಂತೆ ಹೆಚ್ಚಿನ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಅವರಲ್ಲಿ ಮೂವರು ಮಾತ್ರ ಚಿಕಿತ್ಸೆ ಪಡೆದರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Air Travel: ವಿಮಾನದಲ್ಲಿ ಸಿಗರೇಟ್ ಸೇದಿ ಅರೆಸ್ಟ್ ಆದ ಪ್ರಯಾಣಿಕ