ನೊಯ್ಡಾ: ಅಂತೂ ನಿಗದಿತ ಸಮಯಕ್ಕೆ ಸರಿಯಾಗಿ ನೊಯ್ಡಾದಲ್ಲಿರುವ ಸೂಪರ್ಟೆಕ್ ಅವಳಿ ಕಟ್ಟಡಗಳು ನೆಲಕ್ಕೆ ಉರುಳಿವೆ (Twin Tower Demolished). ಗಗನಚುಂಬಿ ಕಟ್ಟಡಗಳು 9 ಸೆಕೆಂಡ್ಗಳಲ್ಲಿ ಧ್ವಂಸಗೊಂಡಿವೆ. ಈ ಎರಡೂ ಕಟ್ಟಡಗಳನ್ನು ನೆಲಸಮಗೊಳಿಸಲು 3500 ಕೆಜಿಗೂ ಅಧಿಕ ಸ್ಫೋಟಕಗಳನ್ನು ಬಳಸಲಾಗಿದೆ. ಇವುಗಳ ಪ್ರಮಾಣ ಅಗ್ನಿ ವಿ ಕ್ಷಿಪಣಿಗಳ ಮೂರು ಸಿಡಿತಲೆಗಳಿಗೆ ಅಥವಾ ಬ್ರಹ್ಮೋಸ್ ಕ್ಷಿಪಣಿಯ 12 ಅಥವಾ ನಾಲ್ಕು ಪ್ರಥ್ವಿ ಕ್ಷಿಪಣಿಗಳಿಗೆ ಸರಿಸಮ ಎಂದು ಹೇಳಲಾಗಿದೆ.
ಅಗ್ನಿ ವಿ ಕ್ಷಿಪಣಿಯನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಸೇರಿ ಅಭಿವೃದ್ಧಿಗೊಳಿಸಿವೆ. ಇದು ಒಟ್ಟಾರೆ 50 ಸಾವಿರ ಕೆಜಿಗಳಷ್ಟು ತೂಗುತ್ತದೆ. ಘನ ಇಂಧನ ತುಂಬಿರುವ ಮೂರು ಹಂತದ ರಾಕೆಟ್ ಬೂಸ್ಟರ್ಗಳ ಮೇಲೆ ತಲಾ 1500 ಕೆಜಿ ತೂಕದ ಸಿಡಿತಲೆಗಳನ್ನು ಅಳವಡಿಸಲಾಗುತ್ತದೆ.
ಇನ್ನು ಬ್ರಹ್ಮೋಸ್ ಕ್ಷಿಪಣಿ 300 ಕೆಜಿಗಳಷ್ಟು ತೂಕದ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, ಮ್ಯಾಕ್ 2.8ರಿಂದ 3 ಸೂಪರ್ಸ್ಯಾನಿಕ್ ವೇಗವನ್ನು ಹೊಂದಿದೆ. ಇದು ಶಬ್ದದ ವೇಗಕ್ಕಿಂತ ಮೂರು ಪಟ್ಟು ಹೆಚ್ಚು. ಇದನ್ನು ಭಾರತದ ಡಿಆರ್ಡಿಒ ಮತ್ತು ರಷ್ಯಾದ ಪ್ರಮುಖ ಬಾಹ್ಯಾಕಾಶ ಉದ್ಯಮ ಸಂಸ್ಥೆ ಎನ್ಪಿಒಎಂ ಜಂಟಿಯಾಗಿ ಬ್ರಹ್ಮೋಸ್ನ್ನು ಅಭಿವೃದ್ಧಿಪಡಿಸಿವೆ. ಭಾರತದ ಸೇನೆಯಲ್ಲಿ ಇದನ್ನು ಈಗಾಗಲೆ ಸಕ್ರಿಯವಾಗಿ ಬಳಸಿಕೊಳ್ಳಲಾಗುತ್ತಿದೆ. ಹಾಗೇ, ಪ್ರಥ್ವಿ ಕ್ಷಿಪಣಿ ಕೂಡ ಯುದ್ಧಕಾರ್ಯಾಚರಣೆಗೆ ಬಳಸುವ ಸರ್ಫೇಸ್ ಟು ಸರ್ಫೇಸ್ ಶಾರ್ಟ್ ರೇಂಜ್ ಬ್ಯಾಲಿಸ್ಟಿಕ್ ಕ್ಷಿಪಣಿ. ಇದನ್ನೂ ಕೂಡ ಡಿಆರ್ಡಿಒ ಅಭಿವೃದ್ಧಿಪಡಿಸಿದೆ.
ಕಟ್ಟಡಗಳನ್ನು ಅಕ್ರಮವಾಗಿ ಕಟ್ಟಲಾಗಿದೆ ಎಂಬ ಕಾರಣಕ್ಕೆ ನೆಲಸಮ ಮಾಡುವಂತೆ ಕಳೆದ ವರ್ಷವೇ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಅದರಂತೆ ಇಂದು ಮಧ್ಯಾಹ್ನ 2.30ಕ್ಕೆ ಕಟ್ಟಡಗಳು ಸರ್ವನಾಶಗೊಂಡಿವೆ. ಕೆಡವಲೆಂದೇ 20 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಭಾರತದ ಇತಿಹಾಸದಲ್ಲಿಯೇ ಇಷ್ಟು ಎತ್ತರದ ಕಟ್ಟಡಗಳನ್ನು ಇದುವರೆಗೆ ನೆಲಸಮ ಮಾಡಿರಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: Twin Towers Demolition | ಅವಳಿ ಕಟ್ಟಡ ನೆಲಸಮಕ್ಕೆ 100 ಕೋಟಿ ರೂ.ಗಳ ವಿಮೆ!