ನೊಯ್ಡಾ: ಇಲ್ಲಿನ ಸೂಪರ್ಟೆಕ್ ಅವಳಿ ಕಟ್ಟಡಗಳು (Twin Tower Demolition) ಇಂದು ಮಧ್ಯಾಹ್ನ 2.30ಕ್ಕೆ ನೆಲಸಮಗೊಳ್ಳಲಿವೆ. ಸದ್ಯಕ್ಕಂತೂ ದೇಶದ ಗಮನ ಈ ಕಟ್ಟಡಗಳು ಇರುವ ನೊಯ್ಡಾದ 93ಎ ಪ್ರದೇಶದ ಮೇಲೆಯೇ ನೆಟ್ಟಿದೆ. ಎರಡು ಕಟ್ಟಡಗಳನ್ನು ಕೆಲವೇ ನಿಮಿಷಗಳಲ್ಲಿ ನೆಲಸಮ ಮಾಡಬಹುದಾದರೂ, ಪ್ರಕ್ರಿಯೆಗಳು ಸರಳವೇನೂ ಅಲ್ಲ. ಸುತ್ತಲಿನ ಪರಿಸರ, ಜನರು, ವಸತಿ ಕಟ್ಟಡಗಳು, ಜನ ಸಂಚಾರ, ವಾಯು ಮಾಲಿನ್ಯ-ಹೀಗೆ ಹತ್ತು-ಹಲವು ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಕಟ್ಟಡಗಳ ಧ್ವಂಸ ಕಾರ್ಯ ನಡೆಸಬೇಕಾಗಿದೆ. ಅದಕ್ಕಾಗಿ ನೊಯ್ಡಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ ಮತ್ತು ಈ ಕಾರ್ಯಾಚರಣೆಗಾಗಿ ಹಲವು ಎನ್ಜಿಒಗಳು ಸ್ವಯಂ ಸೇವಕರಂತೆ ಕೈಜೋಡಿಸಿವೆ.
ಅವಳಿ ಕಟ್ಟಡಗಳ ನೆಲಸಮಕ್ಕೂ ಪೂರ್ವ ಅಲ್ಲಿ ಸುತ್ತಲಿನ ಜನರಿಗಾಗಿ ಒಂದಷ್ಟು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಆ ಪ್ರದೇಶದಲ್ಲಿ ವಿಮಾನ ಹಾರಾಟವನ್ನೂ ನಿರ್ಬಂಧಿಸಲಾಗಿದೆ. ಇದೆಲ್ಲದರ ಮಧ್ಯೆ ಒಂದಷ್ಟು ಎನ್ಜಿಒಗಳು ಜಂಟಿಯಾಗಿ ಆ ಸ್ಥಳದ ಸುತ್ತಲೂ ಇರುವ ಬೀದಿ ನಾಯಿಗಳ ರಕ್ಷಣೆ ಮಾಡುತ್ತಿವೆ. ಇಂದು ಉರುಳಿ ಬೀಳುವ ಕಟ್ಟಡಗಳ ಸಮೀಪ, ಅಪಾಯ ಇರುವ ಪ್ರದೇಶಗಳ ವ್ಯಾಪ್ತಿಯಲ್ಲಿದ್ದ ಸುಮಾರು 30-35 ಬೀದಿ ನಾಯಿಗಳನ್ನು ರಕ್ಷಿಸಿದ್ದಾರೆ.
ಸೂಪರ್ಟೆಕ್ನ ಈ ಅವಳಿ ಕಟ್ಟಡಗಳನ್ನು ನೆಲಸಮ ಮಾಡಲು 3700 ಕೆಜಿ ತೂಕದ ಸ್ಫೋಟಕವನ್ನು ಬಳಸಲಾಗುತ್ತಿದೆ. ಸುತ್ತಲೂ ಸುಮಾರು 450 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಸ್ಫೋಟ ವಲಯ ಎಂದು ಪರಿಗಣಿಸಲಾಗಿದೆ. ಈಗಾಗಲೇ ಅಲ್ಲಿನ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, 560 ಪೊಲೀಸರು, 100 ಮೀಸಲು ಪಡೆ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ಇದನ್ನೂ ಓದಿ: Twin Tower Demolition | 100 ಮೀಟರ್ ಅವಳಿ ಕಟ್ಟಡ ನೆಲಸಮ ಕಾರ್ಯಾಚರಣೆ ಇಂದು ಮಧ್ಯಾಹ್ನ 2.30ಕ್ಕೆ